ಬೆಂಗಳೂರು ,ಆಗಸ್ಟ್ 15,2022(www.justkannada.in): ವಿದ್ಯಾರ್ಥಿಗಳು ಸದ್ಗುಣಗಳನ್ನು ಮೈಗೂಡಿಸಿಕೊಂಡು ಹೊರಗಿನ ಮತ್ತು ಒಳಗಿನ ಅನಿಷ್ಟಗಳನ್ನು ತೊಡೆದುಹಾಕಿ ಸದೃಢ ದೇಶ ಕಟ್ಟುವ ದೃಢ ಸಂಕಲ್ಪ ಮಾಡಬೇಕು ಎಂದು ಹಿರಿಯ ಜಾನಪದ ವಿದ್ವಾಂಸ, ನಾಡೋಜ ಡಾ.ಗೊ.ರು. ಚನ್ನಬಸಪ್ಪ ಅಭಿಪ್ರಾಯಪಟ್ಟರು.
ಜಯನಗರ ನ್ಯಾಷನಲ್ ಕಾಲೇಜಿನಲ್ಲಿ 76ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ಪೂರ್ವದ ದಿನಗಳನ್ನು ನಾನು ಬಲ್ಲೆ. ಅನೇಕ ತ್ಯಾಗ ಬಲಿದಾನಗಳ ಪ್ರತೀಕವಿದು. ಆದರೆ ಇಂದು ದೇಶಕ್ಕೆ ಸ್ವಾತಂತ್ರ್ಯ ಬಂದ ಕಾರಣವನ್ನೇ ಮರೆಯುವಷ್ಟರ ಮಟ್ಟಿಗೆ ಸಮಾಜ ದಾರಿ ತಪ್ಪಿದೆ. ಅದನ್ನು ಸರಿದಾರಿಗೆ ತರುವಂತ ಕಾರ್ಯ ಇಂದಿನ ಯುವ ಪೀಳಿಗೆಯಿಂದ ಆಗಬೇಕಿದೆ ಎಂದರು.
ಇದೇ ವೇಳೆ, ಎನ್ ಎಸ್ ಎಸ್ ಮತ್ತು ಎನ್ ಸಿಸಿ ವಿದ್ಯಾರ್ಥಿಗಳಿಂದ ಸ್ವಾತಂತ್ರೋತ್ಸವದ ಪಥ ಸಂಚಲನ ನಡೆಸಲಾಯಿತು. ವಿವಿಧ ಸ್ಫರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿಯನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ವೈ.ಸಿ. ಕಮಲ, ಉಪ ಪ್ರಾಂಶುಪಾಲರಾದ ಡಾ. ಹೆಚ್.ಸಿ. ಬೆಲ್ಲದ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಸಿ.ಆರ್. ಸಂಪತ್ ಕುಮಾರಿ ಸೇರಿದಂತೆ ಎಲ್ಲಾ ಅಧ್ಯಾಪಕರು ಭಾಗವಹಿಸಿದ್ದರು.
Key words: strong- country – built -young generation- Nadoja. -Dr. Go.ru. Channabasappa