ಮೈಸೂರು,ಸೆಪ್ಟಂಬರ್,24,2021(www.justkannada.in): ಜಾತಿಗಣತಿ ವರದಿ ಬಿಡುಗಡೆಗಾಗಿ ಹೋರಾಟ ಸಿದ್ಧರಾಮಯ್ಯ ನೇತೃತ್ವದಲ್ಲಿ ನಡೆಯಬೇಕಿದೆ ಎಂದು ಪ್ರೊ.ಮಹೇಶ್ ಚಂದ್ರಗುರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಮಾಡಿದ ಜಾತಿಗಣತಿ ವರದಿ ಬಿಡುಗಡೆಗಾಗಿ ಹೋರಾಟ ರೂಪಿಸಲು ಪೂರ್ವಭಾವಿಯಾಗಿ ಹಿಂದುಳಿದ ವರ್ಗಗಳ ಪ್ರಮುಖ ಮುಖಂಡರ ಸಭೆ ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ನಡೆಯಿತು. ಸಭೆಯಲ್ಲಿ ಹೋರಾಟ ರೂಪಿಸುವ ಕುರಿತು ಹಾಗೂ ವರದಿಯ ಸಾಧಕ ಭಾದಕ ಕುರಿತು ಚರ್ಚೆ ನಡೆಸಲಾಯಿತು.
ಸಭೆಯಲ್ಲಿ ಹಿಂದುಳಿದ ಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ಶಿವರಾಮು, ಸಾಹಿತಿ ಭಗವಾನ್, ಪ್ರೊ.ಮಹೇಶ್ ಚಂದ್ರಗುರು, ಹರೀಶ್ ಗೌಡ, ಹಾಗೂ ಹಿಂದುಳಿದ ವರ್ಗಗಳ ಮುಖಂಡರು ಭಾಗಿಯಾಗಿದ್ದರು.
ಸಭೆಯಲ್ಲಿ ಮಾತನಾಡಿದ ಪ್ರೊ.ಮಹೇಶ್ ಚಂದ್ರಗುರು, ಈಗಿರುವ ರಾಜಕಾರಣಿಗಳಲ್ಲಿ ಸಾಮಾಜಿಕ ನ್ಯಾಯದ ಬಗ್ಗೆ ಮಲ್ಲಿಕಾರ್ಜುನ ಖರ್ಗೆಯಾಗಲಿ, ಹೆಚ್.ಕೆ.ಪಾಟೀಲ್ ಆಗಲಿ, ಮಹದೇವಪ್ಪರಾಗಲಿ, ಶ್ರೀನಿವಾಸ್ ಪ್ರಸಾದ ಸಹ ಮಾತನಾಡುತ್ತಿಲ್ಲ. ಸಿದ್ದರಾಮಯ್ಯ ಒಬ್ಬರೆ ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತಿದ್ದಾರೆ. ಈಗಿನ ರಾಜಕೀಯದಲ್ಲಿ ಸಿದ್ದರಾಮಯ್ಯರನ್ನ ಹರಕೆಯ ಕುರಿ ಮಾಡಲು ಹೊರಟ್ಟಿದ್ದಾರೆ. ಇನ್ನೆರಡು ವರ್ಷದಲ್ಲಿ ಇವರೆಲ್ಲಾ ಹರಕೆಯ ಕುರಿಯಾಗುತ್ತಾರೆ. ನಾವು ಮುಂದೆ ಎಚ್ಚರಿಕೆಯಿಂದ ಮತ ಹಾಕಬೇಕು ಎಂದರು.
ನಾವು ನಮ್ಮ ಹಕ್ಕನ್ನು ಕೇಳುತ್ತಿದ್ದೇವೆ. ನಾವು ದೇಶ ಕೇಳುತ್ತಿಲ್ಲ. ನಮ್ಮ ಪಾಲಿಗಾಗಿ ನಾವು ಹೋರಾಟ ಮಾಡುತ್ತಿದ್ದೇವೆ. ಅದಕ್ಕಾಗಿ ಈ ಕೆಟ್ಟ ಸರ್ಕಾರವನ್ನ ಕಿತ್ತುಹಾಕಬೇಕು. ಈ ಹೋರಾಟ ಸಿದ್ದರಾಮಯ್ಯ ನವರ ನಾಯಕತ್ವದಲ್ಲಿ ನಡೆಯಬೇಕಿದೆ. ಅದಕ್ಕಾಗಿ ನಾವೆಲ್ಲರು ಒಂದಾಗಬೇಕು ಎಂದು ಪ್ರೊ. ಮಹೇಶ್ ಚಂದ್ರಗುರು ಹೇಳಿದರು.
Key words: Struggle -release – caste report-led – Siddaramaiah- Prof. Mahesh Chandraguru.