ಮೈಸೂರು, ಜನವರಿ,20,2022(www.justkannada.in): ಭಾರತ ಸರ್ಕಾರದ ಎನ್.ಸಿ.ಇ.ಆರ್.ಟಿ. ಆಯೋಜಿಸಿದ ರಾಷ್ಟ್ರಮಟ್ಟದ ಕಲೋತ್ಸವ ಸ್ಪರ್ಧೆಯಲ್ಲಿ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲ್ಲೂಕಿನ ಜಿ.ಬಿ.ಸರಗೂರು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಭವ್ಯ ಅವರು ದೃಶ್ಯಕಲಾ 3-ಡಿ ವಿಭಾಗದಲ್ಲಿ ದ್ವಿತೀಯ ಸ್ಥಾನ ಗಳಿಸುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ಕೋವಿಡ್ ಹಿನ್ನೆಲೆಯಲ್ಲಿ 2022ರ ಜನವರಿ 1 ರಿಂದ 12 ರವರೆಗೆ ನಡೆದ ವರ್ಚುವಲ್ ಸ್ಪರ್ಧೆಯಲ್ಲಿ ಕರ್ನಾಟಕದ ವಿದ್ಯಾರ್ಥಿಗಳು ಬೆಂಗಳೂರಿನ ಡಿ.ಎಸ್.ಇ.ಆರ್.ಟಿ.ಯಲ್ಲಿ ನೀಡಿದ ಕಲಾ ಪ್ರದರ್ಶನವನ್ನು ತೀರ್ಪುಗಾರರು ವರ್ಚುವಲ್ ಆಗಿ ವೀಕ್ಷಿಸಿದ್ದರು.
ಜನವರಿ 18 ರಂದು ಫಲಿತಾಂಶ ಪ್ರಕಟವಾಗಿದ್ದು, ಮೈಸೂರು ಜಿಲ್ಲೆಯ ಜಿ.ಬಿ.ಸರಗೂರಿನ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಭವ್ಯ ಅವರಿಗೆ ದೃಶ್ಯಕಲಾ 3-ಡಿ ವಿಭಾಗದಲ್ಲಿ ದ್ವಿತೀಯ ಸ್ಥಾನ, ಬೆಂಗಳೂರು ದಕ್ಷಿಣ ಶೈಕ್ಷಣಿಕ ಜಿಲ್ಲೆಯ ವಿಜಯ ಸಂಯುಕ್ತ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿನಿ ಶ್ರೀಗೌರಿ ಅವರಿಗೆ ಶಾಸ್ತ್ರೀಯ ಸಂಗೀತ ಗಾಯನ ವಿಭಾಗದಲ್ಲಿ ತೃತೀಯ ಸ್ಥಾನ ಹಾಗೂ ಧಾರವಾಡ ಜಿಲ್ಲೆಯ ಸೆಂಟ್ ಜೋಸೆಫ್ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಸೃಷ್ಟಿ ಸುರೇಶ್ ಅವರಿಗೆ ಶಾಸ್ತ್ರೀಯ ಸಂಗೀತ ವಾದನ ವಿಭಾಗದಲ್ಲಿ ಪ್ರಥಮ ಸ್ಥಾನ ದೊರೆತಿದೆ.
ವಿದ್ಯಾರ್ಥಿನಿ ಭವ್ಯ ಅವರು ಕಳೆದ ತಿಂಗಳು ನಡೆದ ರಾಜ್ಯಮಟ್ಟದ ಕಲೋತ್ಸವದಲ್ಲಿ ಸೋಮನ ಕುಣಿತ ಮುಖವಾಡ ತಯಾರಿಸಿ, ಪ್ರಥಮ ಸ್ಥಾನ ಪಡೆದು, ಆ ಮೂಲಕ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದರು. 2021ರಲ್ಲಿ ನಡೆದ ರಾಷ್ಟ್ರಮಟ್ಟದ ಕಲೋತ್ಸವದಲ್ಲಿ ಇದೇ ಜಿ.ಬಿ.ಸರಗೂರಿನ ಸರ್ಕಾರಿ ಪ್ರೌಢಶಾಲೆಯ ಕಲಾ ಶಿಕ್ಷಕಿ ಕೆ. ಸಂಗೀತ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿನಿ ಚಂದನ ಭಾಗವಹಿಸಿ, ಪ್ರಶಸ್ತಿ ಪಡೆದಿದ್ದರು. ಈ ವರ್ಷ ಭವ್ಯ ಪ್ರಶಸ್ತಿ ಪಡೆಯುವ ಮೂಲಕ ಶಾಲೆಗೆ ಮತ್ತು ಜಿಲ್ಲೆಗೆ ಸತತ ಎರಡನೇ ಬಾರಿಗೆ ಕೀರ್ತಿ ತಂದಿದ್ದಾರೆ.
ವಿದ್ಯಾರ್ಥಿನಿ ಭವ್ಯ ಅವರಿಗೆ ಶಾಲೆಯ ಮುಖ್ಯ ಶಿಕ್ಷಕರಾದ ಶೋಭಾ ಹಾಗೂ ಕಲಾ ಶಿಕ್ಷಕಿ ಕೆ.ಸಂಗೀತಾ ಅವರು ಅಭಿನಂದಿಸಿ ಶುಭ ಕೋರಿದ್ದಾರೆ.
Key words: student – G.B.Sarguru School- second place – national carnival.