ಮೈಸೂರು,ಅಕ್ಟೋಬರ್,19,2020(www.justkannada.in) : ಬಾಲ್ಯದಲ್ಲಿಯೇ ಕಣ್ಣುಗಳನ್ನು ಕಳೆದುಕೊಂಡ ಕಾವ್ಯ ಫ್ರೆಂಡ್, ಗೈಡ್, ಗಾಡ್ ಆಗಿದ್ದ ಪ್ರೀತಿಯ ಅಪ್ಪನನ್ನ ಕಳೆದ ವಾರವಷ್ಟೇ ಕಳೆದುಕೊಂಡಿದ್ದಾರೆ. ಹೀಗಾಗಿಯೇ, ಎರಡು ಚಿನ್ನದ ಪದಕಗಳು ಕೈ ಸೇರಿದರು ಅಪ್ಪ ಜೊತೆಗಿಲ್ಲವಲ್ಲ ಎಂದು ಭಾವುಕರಾದರು.
ಮೈಸೂರು ವಿವಿ 100ನೇ ಘಟಿಕೋತ್ಸವ ಸಮಾರಂಭದಲ್ಲಿ ಸ್ನಾತಕೋತ್ತರ ಪದವಿ ರಾಜ್ಯಶಾಸ್ತ್ರ ವಿಷಯದಲ್ಲಿ ಎರಡು ಚಿನ್ನದ ಪದಕ ತಮ್ಮದಾಗಿಸಿಕೊಂಡ ಅಂಧ ವಿದ್ಯಾರ್ಥಿನಿ ಕಾವ್ಯ ತಮ್ಮ ಗೆಲುವಿನ ಹಿಂದಿನ ಪ್ರೇರಣೆ ಕುರಿತು ಮಾತನಾಡಿದರು.
ಅಪ್ಪ ಬ್ರೈನ್ ಟ್ಯೂಮರ್ ಗೆ ತುತ್ತಾಗಿದ್ದರೂ ಕೂಡ, ಸೂಕ್ತ ಮಾರ್ಗದರ್ಶನ ನೀಡುತ್ತಿದ್ದರು. ಓದು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ಮಾಡುತ್ತಿದ್ದರು. ನಾನು ಸಂಗೀತದಲ್ಲಿ ಸಾಧನೆ ಮಾಡಬೇಕೆಂಬ ಆಸೆ ಅವರಿಗಿತ್ತು. ಹೀಗಾಗಿಯೇ, ಕರ್ನಾಟಕ ಸಂಗೀತದಲ್ಲಿ ಜೂನಿಯರ್, ಸೀನಿಯರ್ ಮುಗಿಸಿದೆ. ಇಂದು ಘಟಿಕೋತ್ಸವದಲ್ಲಿ ಚಿನ್ನದ ಪದಕ ಪಡೆದುಕೊಂಡಿದ್ದೇನೆ. ಆದರೆ, ಸದಾ ನನ್ನ ಕಣ್ಣುಗಳಂತೆ ಇರುತ್ತಿದ್ದ ಅಪ್ಪ ಇಲ್ಲ. ತುಂಬಾನೇ ಕಳೆದುಕೊಂಡ ಹಾಗೇ ಆಗಿದೆ. ಅಪ್ಪ ಐ ಲವ್ ಯೂ ಎಂದು ಕಣ್ಣೀರು ಹಾಕಿದರು.
ಅಂಧರಿಗೆ ಸಂಗೀತ ಕ್ಷೇತ್ರ ಒಂದೇ ಅಲ್ಲ
ಅಂಧರಿಗೆ ಸಂಗೀತ ಕ್ಷೇತ್ರ ಒಂದೇ ಎನ್ನುವಂತ್ತಾಗಿದೆ. ಆದರೆ, ಅದೊಂದೇ ಕ್ಷೇತ್ರವಲ್ಲ ಬೇರೆ ಕ್ಷೇತ್ರದಲ್ಲಿಯೂ ಸಾಧನೆ ಮಾಡಬಹುದು ಎಂಬುದನ್ನು ಸಾಧಿಸಿ ತೋರಿಸಬೇಕು ಎನ್ನುವುದು ನನ್ನ ಗುರಿ ಎಂದು ಚಿನ್ನದ ಪದಕ ವಿಜೇತೆ ಕಾವ್ಯ ಅಭಿಪ್ರಾಯವ್ಯಕ್ತಪಡಿಸಿದರು.
ಅಂಧರು ಎಲ್ಲರಂತೆ ಬದುಕಬೇಕು ಎನ್ನುವುದು ನನ್ನ ಆಸೆ
ಸಾಮರ್ಥ್ಯ ಎನ್ನುವುದು ಹೆಚ್ಚು,ಕಮ್ಮಿ ಎಂದು ಇರುವುದಿಲ್ಲ. ಸಾಮಾನ್ಯರ ಜೀವನ ಹೇಗೋ ನಡೆದು ಬಿಡುತ್ತದೆ. ಆದರೆ, ವಿಶೇಷಚೇತನರ ಜೀವನ ಹಾಗಿರುವುದಿಲ್ಲ. ಯಾರ ಮೇಲಾದರೂ ಆಸರೆಯಾಗಿ ಬದುಕಬೇಕಾಗುತ್ತದೆ. ಆದರೆ, ನನಗೆ ಅದು ಇಷ್ಟವಿಲ್ಲ. ನಾನು ಎಲ್ಲರಂತೆ ಬದುಕಬೇಕು ಎನ್ನುವುದು ನನ್ನ ಆಸೆ. ಅದನ್ನು ತೋರಿಸಲಿಕ್ಕಾಗಿಯೇ ನಾನು ರಾಜ್ಯಶಾಸ್ತ್ರವನ್ನು ಆಯ್ಕೆಮಾಡಿಕೊಂಡೆ ಎಂದು ಹೇಳಿದರು.
ನಾಲ್ಕು ಸೆಮಿಸ್ಟರ್ ನಲ್ಲೂ ಕಂಪ್ಯೂಟರ್ ಪರೀಕ್ಷೆವಿವಿಯಲ್ಲಿ ಮೊದಲ ಬಾರಿಗೆ ಯಾರ ಸಹಾಯವು ಇಲ್ಲದೇ, ಅಂಧವಿದ್ಯಾರ್ಥಿನಿಯಾದ ಕಾವ್ಯ ಕಂಪ್ಯೂಟರ್ ನಲ್ಲಿ ಪರೀಕ್ಷೆ ಬರೆದಿರುವುದು ವಿಶೇಷವಾಗಿದೆ. ಹೀಗಾಗಿಯೇ, ಚಿನ್ನದ ಪದಕಗಳಿಸುವುದಕ್ಕೆ ಸಾಧ್ಯವಾಯಿತು ಎಂದಿದ್ದಾರೆ. ಬೋಧನ ಕ್ಷೇತ್ರ ನನಗೆ ಬಹಳ ಇಷ್ಟ. ಎನ್ ಇಟಿ ಕಂಪ್ಲೀಟ್ ಆಗಿದ್ದು, ಜೆಆರ್ ಎಫ್ ಸಿಕ್ಕಿದೆ. ಪಿಎಚ್.ಡಿಗೆ ಪ್ರಯತ್ನಿಸುತ್ತಿದ್ದೇನೆ. ಕೆಪಿಎಸ್ಸಿ ಪರೀಕ್ಷೆಗೂ ಸಿದ್ದತೆ ಮಾಡಿಕೊಳ್ಳುತ್ತಿದ್ದೇನೆ ಎಂದು ತಿಳಿಸಿದರು.
ಮಗಳ ಸಾಧನೆ ಸಂತೋಷವನ್ನು ಹಿಮ್ಮಡಿಗೊಳಿಸಿದೆ
ತಮ್ಮ ಕಾಲ ಮೇಲೆ ತಾವು ನಿಲ್ಲಬೇಕು ಎಂಬ ಆಸೆಯಿಂದ ಮಕ್ಕಳ ಆಸಕ್ತಿಗನುಗುಣವಾಗಿ ಪ್ರೋತ್ಸಾಹ ನೀಡುತ್ತಿದ್ದೇವೆ. ಅದರಂತೆಯೇ ಮಗಳು ಉತ್ತಮವಾಗಿ ಓದುತ್ತಿದ್ದಾಳೆ. ಇಂದು ಚಿನ್ನದ ಪದಕ ಪಡೆದಿರುವುದು ಬಹಳ ಸಂತೋಷವಾಗಿದೆ ಎಂದು ಕಾವ್ಯ ತಾಯಿ ರವಿಕಲಾಭಟ್ ಹೇಳಿದರು.
key words : student-wept-when-she-received-gold-medal