ಮಂಗಳೂರು,ಡಿಸೆಂಬರ್,7,2021(www.justkannada.in): 175 ಪ್ರಬೇಧಗಳಿಗೆ ಸೇರಿರುವ 43,118 ಚಿಟ್ಟೆಗಳ ಕ್ರಮಬದ್ಧವಾದ ಎರಡು ವರ್ಷಗಳ ಸಮೀಕ್ಷೆಯ ಆಧಾರದ ಮೇಲೆ ಸಂಶೋಧಕರು ಪಶ್ಚಿಮ ಘಟ್ಟಗಳ ಚಿಟ್ಟೆಗಳ ಯಥೇಚ್ಛತೆಯ ವಿನ್ಯಾಸಗಳು ಮತ್ತು ಅವುಗಳು ಇಷ್ಟಪಡುವ ಆವಾಸಸ್ಥಾನಗಳ ಕುರಿತು ದಾಖಲಾತಿ ಮಾಡಿದ್ದಾರೆ ಹಾಗೂ ಈ ಮೂಲಕ, ಪಾರಿಸಾರಿಕವಾಗಿ ಅತ್ಯಂತ ಸೂಕ್ಷ್ಮ ಪ್ರದೇಶವಾದ ಈ ಪಶ್ಚಿಮ ಘಟ್ಟಗಳಲ್ಲಿ ಚಿಟ್ಟೆಗಳ ಭವಿಷ್ಯದ ಪರಿವೀಕ್ಷಣೆ ಮತ್ತು ಸಂರಕ್ಷಣಾ ಕಾರ್ಯಗಳಿಗೆ ಅಗತ್ಯವಿರುವ ಬೃಹತ್ ಪ್ರಮಾಣದ ಮೂಲಭೂತ ದತ್ತಾಂಶಗಳನ್ನು ಕಲೆಹಾಕಿದ್ದಾರೆ.
ಪ್ರಸ್ತುತ ಅಧ್ಯಯನವು ಪಶ್ಚಿಮ ಘಟ್ಟಗಳ ಚಿಟ್ಟೆಗಳ ಸಮೃದ್ಧಿ ವಿನ್ಯಾಸಗಳು ಮತ್ತು ಅವುಗಳು ಇಷ್ಟಪಡುವ ಆವಾಸಸ್ಥಾನಗಳ ಮೇಲೆ ಸಮಯ ಮಿತಿಯೊಳಗೊಂಡ ಎರಡು ವರ್ಷಗಳ ಕಾಲದ ಕ್ರಮಬದ್ಧವಾದ ಸಮೀಕ್ಷೆಯನ್ನು ಕೈಗೊಂಡಿದೆ. ಮಂಗಳೂರು ಯೆನೆಪೋಯಾ ವಿಶ್ವವಿದ್ಯಾನಿಲಯ ಸಂಶೋಧಕರು ಡಾ. ಆರ್ ಶ್ಯಾಮಪ್ರಸಾದ ರಾವು ಹಾಗೂ ರಾಷ್ಟ್ರೀಯ ಜೀವವಿಜ್ಞಾನ ಕೇಂದ್ರ, ಬೆಂಗಳೂರು, ಇವರ ಸಹಯೋಗದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ದೀಪಕ್ ನಾಯ್ಕ್ ಮತ್ತು ಡಾ. ಎಂ. ಎಸ್. ಮುಸ್ತಾಕ್ ಅಧ್ಯಯನವನ್ನು ಕೈಗೊಂಡಿದ್ದರು.
ಈ ಅಧ್ಯಯನವು ಕರಾವಳಿಯ ಮರಳು ದಿನ್ನೆಗಳಿಂದ ಹಿಡಿದು, ಕೃಷಿ ಭೂಮಿಯವರೆಗೂ, ಸಸ್ಯ ಉದ್ಯಾನಗಳಿಂದ ಹಿಡಿದು ಅರೆ ನಿತ್ಯಹರಿದ್ವರ್ಣ ಕಾಡುಗಳವರೆಗೆ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟದ ತಪ್ಪಲಿನ ಪ್ರದೇಶಗಳ 8 ಸ್ಥಾನಗಳಲ್ಲಿ 175 ಪ್ರಬೇಧಗಳ 43,118 ಚಿಟ್ಟೆಗಳನ್ನು ಗುರುತಿಸಿದೆ.
ಈ ಅಧ್ಯಯನವು ಪಶ್ಚಿಮ ಘಟ್ಟದ ಚಿಟ್ಟೆಗಳ ಆಸಕ್ತಿದಾಯಕ ವಿನ್ಯಾಸಗಳನ್ನು ವಿವರಿಸುತ್ತದೆ ಅವುಗಳಲ್ಲಿ ಅತ್ಯಂತ ಸಮೃದ್ಧವಾದ ಪ್ರಭೇದಗಳೆಂದರೆ ಕಾಮನ್ ಕ್ರೋ. ಕಾಮನ್ ಎಮಿಗ್ರೆಂಟ್ , ಕಾಮನ್ ಫರ್ರಿಂಗ್, ಟ್ವಾನಿ ಕೋಸ್ಟರ್, ಲೆಸ್ಸರ್ ಗ್ರಾಸ್ ಬ್ಲು, ರಸ್ಟಿಕ್, ಮತ್ತು ಚೋಕೋಲೆಟ್ ಪಾನ್ಸಿ. ಕೆಲವು ಪ್ರಬೇದಗಳು ಹೇರಳವಾಗಿದ್ದರೂ ಸಹ ಕೆಲವು ನಿರ್ದಿಷ್ಟ ಆವಾಸ ಸ್ಥಾನಗಳಿಗೆ ಮೀಸಲಾಗಿರುತ್ತೆವೆ. ಉದಾಹರಣೆಗೆ, ಟ್ವಾನಿ ಕೋಸ್ಟರ್ ಕರಾವಳಿ ಪ್ರದೇಶಗಳಲ್ಲಿ, ಕಾಮನ್ ಬುಶ್ ಹಾಪರ್ ಕೃಷಿ ಪ್ರದೇಶಗಳಲ್ಲಿ ಮತ್ತು ಮಲಬಾರ ಟ್ರೀ ನಿಂಪ್ ಅರೆ ನಿತ್ಯಹರಿದ್ವರಣ ಕಾಡುಗಳಲ್ಲಿ ಸರ್ವೇಸಾಮಾನ್ಯವಾಗಿ ಕಾಣಲು ಸಿಗುತ್ತವೆ. ಕಾಮನ್ ಮೊರ್ಮೊನ್, ಕಾಮನ್ ಲೆಪರ್ಡ್ ವಿರಳವಾಗಿದ್ದರೂ ಎಲ್ಲಾ ಕಡೆ ಕಾಣಲು ಸಿಗುತ್ತವೆ.
ಸಾಮಾನ್ಯವಾಗಿ ಜನರು ಚಿಟ್ಟೆಗಳನ್ನು ಪ್ರೀತಿಸುತ್ತಾರೆ ಆದರೆ ಅಪರೂಪಕ್ಕೆ ಕಾಣಸಿಗುವ ಮತ್ತು ನಿರ್ದಿಷ್ಟ ಆವಾಸ ಸ್ಥಾನಗಳಿಗೆ ಸೀಮಿತವಾದ ಚಿಟ್ಟೆಗಳನ್ನು ಕಾಣಲು ಸಿಗುವುದು ಹಾಗೂ ಮೆಚ್ಚುವುದು ಕಡಿಮೆ. ಪ್ರಥಮ ಬಾರಿಗೆ ಈ ಅಧ್ಯಾಯನವು ಪಶ್ಚಿಮ ಘಟ್ಟಗಳ ಚಿಟ್ಟೆಗಳ ಪ್ರಮಾಣಾತ್ಮಕ ಅಂದರೆ ಸಂಖ್ಯಾತ್ಮಕ ದತ್ತಂಶಗಳನ್ನು ಒದಗಿಸುತ್ತದೆ. ಇದು ಸಾರ್ವಜನಿಕ ಮಾಹಿತಿಗೆ ಹಾಗೂ ಜಾಗೃತಿಗೆ ಅತ್ಯಂತ ಅಗತ್ಯವಾಗಿದೆ.
ಜೊತೆಗೆ ಅಧ್ಯಯನವು ಚಿಟ್ಟೆಯ ಜೀವನ ಚಕ್ರದ ಭಾಗವಾಗಿರುವ ಲಾರ್ವಗಳಿಗೆ ಆಶ್ರಯ ನೀಡುವ ಆಹಾರ ಸಸ್ಯಗಳನ್ನು ದಾಖಲಿಸಿಕೊಂಡಿದೆಯಲ್ಲದೆ, ಆಹಾರ ಸಸ್ಯ- ಚಿಟ್ಟೆ ಪ್ರಬೇಧ ಜೋಡಿಗಳ ಪರಸ್ಪರ ಸಹವರ್ತನೆಗಳನ್ನೂ ದಾಖಲೆ ಮಾಡಿಕೊಂಡಿದೆ. ಚಿಟ್ಟೆ ಸಮುದಾಯಗಳು ಅವಾಸಸ್ಥಾನಗಳ ಸ್ಥಿತಿಗತಿ ಹಾಗೂ ವಿಧಗಳ ಕುರಿತು ಸೂಚನೆ ನೀಡುತ್ತೆವೆ. ಮತ್ತು ಪ್ರಸ್ತುತ ಅಧ್ಯಯನವು ಪಶ್ಚಿಮ ಘಟ್ಟಗಳ ಮೇಲಿನ ಭವಿಷ್ಯದ ಮೌಲ್ಯಮಾಪಕ/ಪರಿವೀಕ್ಷಣೆ ಮತ್ತು ಸಂರಕ್ಷಣಾ ಪ್ರಯತ್ನಗಳಿಗೆ ಮಹತ್ವದ ಮೂಲಭೂತ ದತ್ತಾಂಶಗಳನ್ನು ಒದಗಿಸುತ್ತದೆ. ಈ ಅಧ್ಯಯನವು ಜರ್ನಲ್ ಒಫ್ ಇನ್ಸೆಕ್ಟ್ ಕನ್ಸರ್ವೇಶನ್ (ಕೀಟ ಸಂರಕ್ಷಣೆಯ ಮೇಲಿನ ಸಂಶೋಧನಾ ಲೇಖನಗಳ ಸಂಗ್ರಹ) ಇದರ ಮುಂದಿನ ಒಂದು ಸಂಚಿಕೆಯಲ್ಲಿ ಪ್ರಕಟಗೊಳ್ಳಲಿದೆ.
Key words: study- group – 43,118 butterflies – 175 species- found – Western Ghats.