ಮೈಸೂರು,ಜನವರಿ,6,2025 (www.justkannada.in): ಮೈಸೂರಿನ ಸಬ್ ಅರ್ಬನ್ ಬಸ್ ನಿಲ್ದಾಣವನ್ನು ಬನ್ನಿಮಂಟಪಕ್ಕೆ ಸ್ಥಳಾಂತರಿಸುತ್ತಿರುವುದು ಅವೈಜ್ಞಾನಿಕ ಎಂದು ಆಕ್ಷೇಪಿಸಿ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆಯಲಾಗಿದೆ.
ಈ ಕುರಿತು ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿರುವ ಮೈಸೂರಿನ ಜೆ. ಪಿ. ನಗರ ಗಿರೀಶ್ ಆರಾಧ್ಯ ಹೆಚ್.ಎನ್ ಅವರು, ಮೈಸೂರಿನ ಕೇಂದ್ರ ಬಸ್ ನಿಲ್ದಾಣವನ್ನು ಬನ್ನಿಮಂಟಪಕ್ಕೆ ಸ್ಥಳಾಂತರ ಮಾಡುತ್ತಿರುವುದು ದೂರದೃಷ್ಟಿ ಮತ್ತು ಪ್ರಜೆಗಳ ಹಿತಾಸಕ್ತಿ ಇಲ್ಲದ ಅಧಿಕಾರಿಗಳು ಮತ್ತು ಮೈಸೂರಿನ ರಾಜಕಾರಣಿಗಳು, ಬುದ್ದಿಜೀವಿಗಳು, ಹಾಗೂ ತಟಸ್ಥವಾಗಿರುವ ನಾಗರಿಕರ ವೈಪಲ್ಯ ಎಂದರೆ ತಪ್ಪಾಗಲಾರದು.
ಬನ್ನಿಮಂಟಪ ಮೈಸೂರಿನ ಉತ್ತರಭಾಗದ ತುದಿಯಲ್ಲಿ ಇರುವುದರಿಂದ ದಕ್ಷಿಣ, ಪೂರ್ವ ಮತ್ತು ಪಶ್ಚಿಮ ಭಾಗದ ಬಡಾವಣೆಗಳ ನಾಗರೀಕರಿಗೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು, ದಕ್ಷಿಣ ಬಾಗದ ಜನರಿಗೆ ಹೊಸ ಬಸ್ ನಿಲ್ದಾಣ ಸುಮಾರು 12 ಕಿ.ಮೀಗಳಾಗುತ್ತದೆ ಇದರಿಂದ ದಕ್ಷಿಣ ಭಾಗದ ನಾಗರಿಕರಿಗೆ ಅನವಶ್ಯಕ ಹೊರೆಯಾಗಲಿದೆ.
ಕೇಂದ್ರ ಬಸ್ ನಿಲ್ದಾಣವನ್ನು ಮೈಸೂರಿನ ಮೆಡಿಕಲ್ ಕಾಲೇಜಿನ ಪ್ರಾಂಗಣಕ್ಕೋ ಅಥವಾ ರೈಲ್ವೆ ಸ್ಟೇಷನ್ ಹಿಂಭಾಗದ ಆರ್.ಎಂಸಿಗೆ ಸ್ಥಳಾಂತರಿಸಿ ರೈಲ್ವೆ ನಿಲ್ದಾಣದ ಎದುರು ಇರುವ ಜೀವಣ್ಣರಾಯನಕೆರೆಯ ಜಾಗದಲ್ಲಿ ಸಿಟಿ ಬಸ್ ನಿಲ್ದಾಣ ಮಾಡಿ ಹಾಲಿ ಇರುವ ಮೆಡಿಕಲ್ ಕಾಲೇಜನ್ನು ಬನ್ನಿಮಂಟಪದ ಕೆ.ಎಸ್.ಆರ್.ಟಿ.ಸಿ. ಜಾಗಕ್ಕೆ ಸ್ಥಳಾಂತರಿಸಿ ರೈಲ್ವೆ ಸ್ಟೇಷನ್ ಸುತ್ತಮುತ್ತ ಇರುವ ಜಾಗವನ್ನು ಒಂದೇ ಕಡೆ ಬೆಂಗಳೂರಿನ ಮೆಜೆಸ್ಟಿಕ್ ಮಾದರಿಯಲ್ಲಿ ನಿರ್ಮಿಸಿದರೆ ಪ್ರಯಾಣಿಕರಿಗೆ ಮತ್ತು ಮೈಸೂರಿನ ನಾಲ್ಕು ದಿಕ್ಕಿನ ಜನರಿಗೆ ಅನುಕೂಲವಾಗುವುದು. ಇದರಿಂದ ಹಾಲಿ ಕೇಂದ್ರ ಬಸ್ ನಿಲ್ದಾಣ ಮತ್ತು ಸಿಟಿಬಸ್ ನಿಲ್ದಾಣವನ್ನು ಕಮರ್ಷಿಯಲ್ ಕಾಂಪ್ಲೆಕ್ಸ್ ಮಾಡಿ ಆದಾಯ ಹೆಚ್ಚಿಸಿ ಕೊಳ್ಳಬಹುದು, ಮತ್ತು ಹೀಗೆ ಮಾಡುವುದರಿಂದ ಸೆಂಟ್ರಲ್ ಸಿಟಿಯ ಟ್ರಾಫಿಕ್ ಗಣನೀಯವಾಗಿ ಕಡಿಮೆಯಾಗಿ ಪಾರಂಪಾರಿಕ ಕಟ್ಟಡಗಳೂ ಉಳಿಯುತ್ತವೆ ಮತ್ತು ಮೂರು ನಿಲ್ದಾಣಗಳೂ ಒಂದೇ ಕಡೆ ಬರುವುದರಿಂದ ಪ್ರವಾಸೋದ್ಯಮಕ್ಕೂ ಉತ್ತೇಜನ ಸಿಗಲಿದೆ ಎಂದು ಸಲಹೆ ನೀಡಿದ್ದಾರೆ.
ರೈಲ್ವೆ ಸ್ಟೇಷನ್ ಪಕ್ಕದಲ್ಲಿ ಕೇಂದ್ರ ಮತ್ತು ನಗರ ಬಸ್ ನಿಲ್ದಾಣಗಳನ್ನು ನಿರ್ಮಿಸುವುದರಿಂದ ಬೆಂಗಳೂರು ಮಾರ್ಗದ ಬಸ್ಸುಗಳು ಸಯ್ಯಾಜಿರಾವ್ ರಸ್ತೆಯ ಮೂಲಕ ತಲುಪುತ್ತವೆ. ಹುಣಸೂರು ರಸ್ತೆಯ ಮಾರ್ಗದ ಬಸ್ಸುಗಳು ರೈಲ್ವೆ ಸ್ಟೇಷನ್ ಸರ್ಕಲ್ ಮುಖಾಂತರ ಮೆಟ್ರೋಪೋಲ್ ಪಕ್ಕದಲ್ಲಿ ಹುಣಸೂರು ರಸ್ತೆ ತಲುಪಲಿವೆ.
ನಂಜನಗೂಡು ಕೊಳ್ಳೇಗಾಲ ನರಸೀಪುರ ಮಾರ್ಗದ ಬಸ್ಸುಗಳು ಜೆ.ಎಲ್.ಬಿ. ರಸ್ತೆ ಮೂಲಕ ಎಲೆ ತೋಟ ಸರ್ಕಲ್ ಮೂಲಕ ಅಥವಾ ನೂರಡಿ ರಸ್ತೆಯ ಮೂಲಕ ಅರಮನೆಯ ದಕ್ಷಿಣ ದ್ವಾರದ ಮುಂದೆ ಸಾಗಿ ನಂಜನಗೂಡು ರಸ್ತೆ ತಲುಪಲಿವೆ. ಮಳವಳ್ಳಿ ಕನಕಪುರ ಮಾರ್ಗದ ಬಸ್ಸುಗಳು ಸಯ್ಯಾಜಿರಾವ್ ರಸ್ತೆಯ ಮೂಲಕ ರಿಂಗ್ ರೋಡ್ ಮುಖಾಂತರ ಬನ್ನೂರು ರಸ್ತೆ ತಲಪಬಹುದು. ಈ ಮೇಲಿನ ಮಾರ್ಗಗಳ ಕೆಲವು ಕಡೆ ರಸ್ತೆ ಅಗಲೀಕರಣಗೊಳಿಸಿದರೆ ಉತ್ತಮ ಫಲಿತಾಂಶ ಕಾಣಬಹುದು.
ಇದರಿಂದ ಕೆ. ಆರ. ಸರ್ಕಲ್ ಆರ್. ಗೇಟ್, ಅರಮನೆ ಮುಂಭಾಗ, ನಗರಪಾಲಿಕೆಯ ಮುಂಭಾಗ, ಹಾಗೂ ಇರ್ವಿನ್ ರಸ್ತೆ ಗಣನೀಯವಾಗಿ ಸಂಚಾರ ಕಡಿಮೆಯಾಗಲಿದೆ. ಆದ್ದರಿಂದ ಸಂಪುಟ ಅನುಮೋದಿಸಿದ್ದರೂ ಕೂಡ ಪುನರ್ ಪರಿಶೀಲಿಸಿ ಮುಖ್ಯಮಂತ್ರಿಗಳು ಮೈಸೂರಿನವರೇ ಆಗಿರುವುದರಿಂದ ನಿರ್ಧಾರ ಕೈಗೊಂಡು ಮೈಸೂರಿನ ನಾಗರಿಕರಿಗೆ ಹಾಗೂ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡುತ್ತಾರೆಂಬ ಅಪಾರ ನಂಬಿಕೆ ಇದೆ ಎಂದು ಗಿರೀಶ್ ಆರಾಧ್ಯ ತಿಳಿಸಿದ್ದಾರೆ.
Key words: Mysore, Suburban Bus Stand, CM Siddaramaiah, Letter