ಮೈಸೂರು,ಫೆಬ್ರವರಿ,3,2025 (www.justkannada.in): ಮೈಸೂರಿನ ನಗರದ ಹೃದಯಭಾಗದಲ್ಲಿರುವ ಸಬರ್ಬನ್ ಬಸ್ ನಿಲ್ದಾಣವನ್ನು ಬನ್ನಿ ಮಂಟಪಕ್ಕೆ ಸ್ಥಳಾಂತರ ಮಾಡುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.
ಈ ಕುರಿತು ಮೈಸೂರು ಕೆಎಸ್ಆರ್ ಟಿ ಸಿ ಸಬರ್ಬನ್ ಬಸ್ ನಿಲ್ದಾಣ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ರವಿಶಾಸ್ತ್ರಿ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಮೈಸೂರಿನ ನಗರಕ್ಕೆ ಒಂದು ರೀತಿ ಕಳಸಪ್ರಾಯದಂತೆ ಹೃದಯ ಭಾಗದಲ್ಲಿರುವ ಬಸ್ ನಿಲ್ದಾಣ ಯಾವುದೇ ಕಾರಣಕ್ಕೂ ಸ್ಥಳಾಂತರ ಮಾಡಬಾರದು. ಈಗಾಗಲೇ ನರ್ಮ್ ಯೋಜನೆಯಡಿ ಸಾತಗಳ್ಳಿ, ನಾಯ್ಡು ನಗರ, ಇಲವಾಲ, ಕುವೆಂಪು ನಗರ ಬಸ್ ಡಿಪೋ ಬಳಿ ನಿರ್ಮಾಣ ಮಾಡಿದ ಬಸ್ ನಿಲ್ದಾಣ ಎಲ್ಲವೂ ಕೂಡ ನಿಷ್ಕ್ರಿಯಗೊಂಡಿದ್ದು, ನೂರಾರು ಕೋಟಿ ವೆಚ್ಚ ಮಾಡಿ ಕಟ್ಟಿ ನಿರುಪಯುಕ್ತವಾಗಿವೆ.
ಈಗ ಸಬರ್ಬನ್ ಬಸ್ ನಿಲ್ದಾಣವನ್ನ ಬನ್ನಿಮಂಟಪಕ್ಕೆ ಸ್ಥಳಾಂತರ ಮಾಡಿದರೆ ಪ್ರಯಾಣಿಕರಿಗೆ ತುಂಬಾ ತೊಂದರೆಯಾಗುತ್ತದೆ. ಅದೂ ಕೂಡ ನಿರುಪಯುಕ್ತವಾಗುವ ಸಾಧ್ಯತೆ ಇದೆ. ಸಿಟಿ ಸೆಂಟರ್ನಲ್ಲಿರುವುದರಿಂದ ಎಲ್ಲದಕ್ಕೂ ಅನುಕೂಲವಾಗಿದೆ.
ದಸರಾ ಸಂಧರ್ಭದಲ್ಲಿ ಮಾತ್ರ ಒಂದಷ್ಟು ಜನ ದಟ್ಟಣೆಯಾಗುತ್ತದೆ ಹೊರತು ಉಳಿದ ಸಮಯದಲ್ಲಿ ಏನೂ ಸಮಸ್ಯೆ ಆಗುವುದಿಲ್ಲ. ಬನ್ನಿ ಮಂಟಪಕ್ಕೆ ಸ್ಥಳಾಂತರ ಮಾಡುವ ಬದಲು ಪಕ್ಕದಲ್ಲೇ ಇರುವ ಪೀಪಲ್ಸ್ ಪಾರ್ಕ್ ಮತ್ತು ಸರ್ಕಾರಿ ಗೆಸ್ಟ್ ಹೌಸ್ ಸ್ವಲ್ಪ ಜಾಗವನ್ನು ಪಡೆದು ವಿಸ್ತರಣೆ ಮಾಡಬಹುದು. ಈ ಮೂಲಕ ಯಾವುದೇ ಕಾರಣಕ್ಕೂ ಸ್ಥಳಾಂತರ ಮಾಡಬಾರದು ಎಂದು ಮುಖ್ಯಮಂತ್ರಿಗಳಿಗೂ ಮನವಿ ಮಾಡಿದ್ದೇವೆ. ಸಾರಿಗೆ ಸಚಿವರಿಗೂ ಮನವಿ ಮಾಡಿದ್ದೇವೆ. ಸಿಎಂ ಸಿದ್ದರಾಮಯ್ಯ ನಮ್ಮ ಮನವಿಗೆ ಸ್ಪಂದಿಸುವ ಭರವಸೆ ಇದೆ ಎಂದು ಸಬರ್ಬನ್ ಬಸ್ ನಿಲ್ದಾಣ ಹೋರಾಟ ಸಮಿತಿ ಒತ್ತಾಯಿಸಿತು.
ಸುದ್ದಿಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷ ರವಿಶಾಸ್ತ್ರಿ, ಉಪಾಧ್ಯಕ್ಷ ನಿಂಗರಾಜು, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ, ಮೈಸೂರು ಸಂಘ ಸಂಸ್ಥೆಗಳ ಒಕ್ಕೂಟ ಅಧ್ಯಕ್ಷ ಬಿಎಸ್ ಪ್ರಶಾಂತ್ ಸೇರಿದಂತೆ ಹಲವರು ಭಾಗಿಯಾಗಿದ್ದರು.
Key words: opposition, shift, Mysore, Suburban Bus Stand