ಪಾರ್ಕಿನ್ಸನ್‌ ರೋಗಕ್ಕೆ ದೇಶದಲ್ಲೇ ಮೊದಲ ನ್ಯೂರೋಸ್ಮಾರ್ಟ್ ಪೋರ್ಟಬಲ್ MER ಸಿಸ್ಟಮ್‌ ಬಳಸಿ, ಯಶಸ್ವಿ ಶಸ್ತ್ರಚಿಕಿತ್ಸೆ.

ಬೆಂಗಳೂರು,13, ಮಾರ್ಚ್ 2024(www.justkannada.in):   ನರಮಂಡಲದ ಸಮಸ್ಯೆಯಿಂದ ಉಂಟಾಗುವ ಮಾರಣಾಂತಿಕ “ಪಾರ್ಕಿನ್ಸನ್‌” ರೋಗಕ್ಕೆ ಒಳಗಾಗಿದ್ದ 68 ವರ್ಷದ ವ್ಯಕ್ತಿಗೆ ಫೋರ್ಟಿಸ್‌ ಆಸ್ಪತ್ರೆ ವೈದ್ಯರ ತಂಡವು “ನ್ಯೂರೋಸ್ಮಾರ್ಟ್ ಪೋರ್ಟಬಲ್ ಮೈಕ್ರೋ ಎಲೆಕ್ಟ್ರೋಡ್ ರೆಕಾರ್ಡಿಂಗ್ (MER) ಸಿಸ್ಟಮ್‌” ಬಳಸಿಕೊಂಡು ಯಶಸ್ವಿಯಾಗಿ ಚಿಕಿತ್ಸೆ ನೀಡಿದ್ದು, ಪಾರ್ಕಿನ್ಸನ್‌ ರೋಗಕ್ಕೆ ನಿಖರ ಚಿಕಿತ್ಸೆ ನೀಡಬಹುದಾದ ದೇಶದಲ್ಲೇ ಮೊದಲ ಬಾರಿಗೆ ನೂತನ ಅಪ್ಲಿಕೇಷನ್‌ ನನ್ನು ಫೋರ್ಟಿಸ್‌ ಆಸ್ಪತ್ರೆಯಲ್ಲಿ ಬಳಸಲಾಗಿದೆ.

ಫೋರ್ಟಿಸ್‌ ಆಸ್ಪತ್ರೆಯ ನರಶಸ್ತ್ರಚಿಕಿತ್ಸಾ ವಿಭಾಗದ ಹೆಚ್ಚುವರಿ ನಿರ್ದೇಶಕ ಡಾ. ರಘುರಾಮ್ ಜಿ, ನರವಿಜ್ಞಾನದ ಹೆಚ್ಚುವರಿ ನಿರ್ದೇಶಕ ಡಾ. ಗುರುಪ್ರಸಾದ್ ಹೊಸೂರಕರ್ ಹಾಗೂ ನರವಿಜ್ಞಾನ ತಂಡವು ನ್ಯೂರೋಸ್ಮಾರ್ಟ್ ಪೋರ್ಟಬಲ್ MER ವ್ಯವಸ್ಥೆಯನ್ನು ಚಿಕಿತ್ಸಾ ಪ್ರಕ್ರಿಯೆಯಲ್ಲಿ ಯಶಸ್ವಿಯಾಗಿ ಬಳಸಿಕೊಂಡಿದೆ.

ಈ ಕುರಿತು ಮಾತನಾಡಿದ ನರಶಸ್ತ್ರಚಿಕಿತ್ಸಾ ವಿಭಾಗದ ಹೆಚ್ಚುವರಿ ನಿರ್ದೇಶಕ ಡಾ ರಘುರಾಮ್ ಜಿ, ನರಮಂಡಲದಲ್ಲಿ ಆಗುವ ಸಮಸ್ಯೆಯಿಂದ ಉಂಟಾಗುವ ಪಾರ್ಕಿನ್ಸನ್‌ ವಯಸ್ಸಾದ ಸಾಕಷ್ಟು ಜನರಲ್ಲಿ ಕಾಡುತ್ತದೆ. ಈ ಕಾಯಿಲೆ ಬಂದವರಿಗೆ ಇಡೀ ದೇಹವೇ ನಡುಕು ಉಂಟಾಗುತ್ತದೆ. 68 ವರ್ಷದ ಪ್ರಕಾಶ್ ಎಂಬುವರರು ಸಹ ಪಾರ್ಕಿನ್ಸನ್‌ ಕಾಯಿಲೆಗೆ ತುತ್ತಾಗಿದ್ದರು, ಅಷ್ಟೇ ಅಲ್ಲದೆ, ರಕ್ತದೊತ್ತಡ, ಮಧುಮೇಹದಂತಹ ಇತರ ಆರೋಗ್ಯ ಸಮಸ್ಯೆ ಹೊಂದಿದ್ದರು, ಈ ಹಿಂದೆ ಅವರು ತಮ್ಮ ಹೃದಯ, ಬೆನ್ನುಮೂಳೆ, ಅಂಡವಾಯುಗಳ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು, ಇಷ್ಟೆಲ್ಲಾ ಆರೋಗ್ಯ ಸಮಸ್ಯೆ ಹೊಂದಿರುವ ಇಳಿವಯಸ್ಸಿನ ಪ್ರಕಾಶ್‌ ಅವರ ಕುತ್ತಿಗೆಯೂ ಸೇರಿದಂತೆ ಇಡೀ ದೇಹವೇ ನಡುಕ ಉಂಟು ಮಾಡುವ ಪಾರ್ಕಿನ್ಸನ್‌ ಕಾಯಿಲೆಯು ಅವರನ್ನು ಸಂಪೂರ್ಣ ನಲುಗಿಸಿತ್ತು.

ಈ ಸುಧಾರಿತ ತಂತ್ರಜ್ಞಾನವು ಡೀಪ್ ಬ್ರೈನ್ ಸ್ಟಿಮ್ಯುಲೇಶನ್ (DBS) ಚಿಕಿತ್ಸೆಗೆ ನಿಖರತೆ ನೀಡಲಿದೆ. ಈ ತಂತ್ರಜ್ಞಾನದ ಮೂಲಕ ಮೆದುಳಿನಲ್ಲಿ ಆಗಿರುವ ಸಮಸ್ಯೆಗಳನ್ನು ಸೂಕ್ಷ್ಮರೀತಿಯಲ್ಲಿ ವಿಶ್ಲೇಷಣೆ ಮಾಡಿ, ಅದಕ್ಕೆ ಸೂಕ್ತ ರೀತಿಯ ಚಿಕಿತ್ಸೆ ನೀಡಲು ಸಹಕಾರಿಯಾಗಿದೆ. ಈ ತಂತ್ರಜ್ಞಾನವನ್ನು ದೇಶದಲ್ಲೇ ಮೊದಲ ಬಾರಿಗೆ ಫೋರ್ಟಿಸ್‌ ಆಸ್ಪತ್ರೆಯಲ್ಲಿ ಅಳವಡಿಸಿಕೊಳ್ಳಲಾಗಿದೆ ಎಂದು ಹೇಳಿದರು.

ಇನ್ನು ಈ ನೂತನ ತಂತ್ರಜ್ಞಾನವಾದ ನ್ಯೂರೋಸ್ಮಾರ್ಟ್‌ ನಲ್ಲಿ AI ಸಾಮರ್ಥ್ಯಗಳನ್ನು ಬಳಸಿಕೊಂಡು, ರೋಗಿಯು ಎಚ್ಚರವಾಗಿರುವಂತೆ ನೋಡಿಕೊಂಡು ಈ ಚಿಕಿತ್ಸೆ ನೀಡಲಾಗುತ್ತದೆ. ಯಾವುದೇ ಕಾರಣಕ್ಕೂ ರೋಗಿಯು ನಿದ್ರೆಗೆ ಜಾರದಂತೆ ನೋಡಿಕೊಳ್ಳಲಾಗುವುದು, ಈ ಮೂಲಕ ಸುಲಭ ಹಾಗೂ ವೇಗವಾಗಿ ಚಿಕಿತ್ಸೆ ನೀಡಲಾಗುತ್ತದೆ. ಶಸ್ತ್ರಚಿಕಿತ್ಸೆಯಾದ ಐದು ದಿನಗಳಲ್ಲೇ ರೋಗಿಯನ್ನು ರಿಸ್ಚಾರ್ಚ್‌ ಮಾಡಲಾಯಿತು. ಪಾರ್ಕಿನ್ಸನ್‌ ಸಮಸ್ಯೆ ಇರುವ ವಯೋ ವೃದ್ಧರಿಗೆ ಈ ತಂತ್ರಜ್ಞಾನ ಹೆಚ್ಚು ಉಪಯುಕ್ತವಾಗಲಿದೆ ಎಂದು ವಿವರಿಸಿದರು.

Key words: Successful -surgery -Parkinson’s- disease –country- first -Neurosmart –portable- MER system.