ಬೆಂಗಳೂರು,ಜುಲೈ,6,2021(www.justkannada.in): ಅತಿ ಕಡಿಮೆ ವಯಸ್ಸಿನಲ್ಲಿ ರಕ್ತಕ್ಯಾನ್ಸರ್ ಗೆ ತುತ್ತಾಗಿ, ಸಂಪೂರ್ಣ ದೃಷ್ಟಿ ಕಳೆದುಕೊಂಡಿದ್ದ 3 ವರ್ಷದ ಹೆಣ್ಣುಮಗುವಿಗೆ ಫೋರ್ಟಿಸ್ ಆಸ್ಪತ್ರೆ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ, ದೃಷ್ಟಿ ಮರುಕಳಿಸುವಂತೆ ಮಾಡಿದ್ದಾರೆ.
ದುಬೈನಲ್ಲಿ ವಾಸವಿದ್ದ 3 ವರ್ಷದ ಹೆಣ್ಣು ಮಗು, “ಅಕ್ಯುಟ್ ಲಿಂಫೋಬ್ಲಾಸ್ಟಿಕ್ ಲ್ಯುಕೇಮಿಯಾ” ಎಂಬ ಕಾಯಿಲೆಯಿಂದ ಬಳಲುತ್ತಿತ್ತು. ಇತರೆ ಆಸ್ಪತ್ರೆಗಳಲ್ಲಿ ಸಾಕಷ್ಟು ಚಿಕಿತ್ಸೆ ನೀಡಿದ್ದರು ಮಗುವಿಗೆ ಗುಣಮುಖವಾಗುವ ಬದಲು ರಕ್ತ ಕ್ಯಾನ್ಸರ್ ನ ತೀವ್ರತೆ ಹೆಚ್ಚಾಗಿ, ಸಣ್ಣವಯಸ್ಸಿನಲ್ಲೇ ಮಗುವು ತನ್ನ ಎರಡೂ ಕಣ್ಣುಗಳನ್ನು ಕಳೆದುಕೊಂಡಿತ್ತು. ಫೋರ್ಟಿಸ್ ಆಸ್ಪತ್ರೆಯ ನೇತ್ರಶಾಸ್ತ್ರ ತಂಡದ ವೈದ್ಯರುಗಳಾದ ಹೆಮಟಾಲಜಿ ಹಿರಿಯ ಸಲಹೆಗಾರರಾದ ಡಾ. ನೀಮಾ ಭಟ್, ವೈದ್ಯಕೀಯ ಆಂಕೊಲಾಜಿ ಮತ್ತು ಹೆಮಟೋ ಆಂಕೊಲಾಜಿ ಹಿರಿಯ ಸಲಹೆಗಾರ ಡಾ.ಮಂಗೇಶ್ ಪಿ. ಕಾಮತ್ ಅವರ ತಂಡ ಮಗುವಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿತು.
ಈ ಕುರಿತು ಮಾತನಾಡಿದ ಡಾ. ನೀಮಾ ಭಟ್, ರಕ್ತಕ್ಯಾನ್ಸರ್ ಹೊಂದಿದ್ದ ಮಗುವಿಗೆ ಚಿಕಿತ್ಸೆ ನೀಡಲು ಮಗುವಿನ ವಯಸ್ಸು ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಆದರೂ, ಇದನ್ನು ಸವಾಲಾಗಿಯೇ ಸ್ವೀಕರಿಸಿದ ನಮ್ಮ ತಂಡ, ಮಗುವಿಗೆ ಐವಿ ಕೀಮೋಥೆರಪಿಯೊಂದಿಗೆ ಚಿಕಿತ್ಸೆ ಪ್ರಾರಂಭಿಸಲಾಯಿತು. ಆದರೆ, ಈ ಚಿಕಿತ್ಸೆಗಳು ಮಗು ಸ್ಪಂದಿಸಲಿಲ್ಲ. ಸಣ್ಣ ಮಗುವಾದ್ದರಿಂದ ಅತಿ ಸೂಕ್ಷ್ಮತೆಯಿಂದ ಚಿಕಿತ್ಸೆ ನೀಡಬೇಕಾಯಿತು.
3 ಡೋಸ್ ಕೀಮೋ ಥೆರಪಿ ಬಳಿಕ ಮಗುವಿಗೆ ಮೊದಲು ಬಲಗಣ್ಣಿನ ದೃಷ್ಟಿ ಬಂದಿತು. ಮಗುವಿಗೆ ದೃಷ್ಟಿ ಮರಳಿದ ನಂತರ ಇಮ್ಯುನೊಥೆರಪಿ ಮಾಡಲಾಗಿದ್ದು, ಮಗುವಿನ ಸೋದರಿಯ ಮೂಳೆಮಜ್ಜೆಯ ಕಸಿ ಮಾಡಿ, ಮಗುವಿನ ರಕ್ತ ಕ್ಯಾನ್ಸರ್ಗೆ ಚಿಕಿತ್ಸೆ ನೀಡಲಾಗಿದ್ದು, ಚಿಕಿತ್ಸೆ ಯಶಸ್ವಿಯಾಗಿದೆ. ಮಗು ಗುಣಮುಖವಾಗಿ ಎಲ್ಲಾ ಮಕ್ಕಳಂತೆಯೇ ಜೀವನ ನಡೆಸುತ್ತಿದೆ ಎಂದರು.
Key words: Successful- treatment – 3-year-old- child – blood cancer- Fortis Hospital