ಮೈಸೂರು, ಆಗಸ್ಟ್, 23, 2020 : ನಿಮಗೆ ಡಾಕ್ಟರ್ ಗಳಿಗೆ ಸೌಲಭ್ಯ ಕೊಡುವ ಯೋಗ್ಯತೆಯಿಲ್ಲ. ಅವರ ಶವಸಂಸ್ಕಾರದಲ್ಲಿ ಯಾವೊಬ್ಬ ಬಿಜಿಪಿ ನಾಯಕರು ಭಾಗಿಯಾಗಲಿಲ್ಲ. ಸಚಿವ ಸುಧಾಕರ್ ಗೆ ಡಾಕ್ಟರ್ ಗಳು ಛೀ.. ಥೂ.. ಅಂತ ಬೈದರೂ ಬುದ್ಧಿ ಬಂದಿಲ್ಲ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಕಿಡಿಕಾರಿದ್ದಾರೆ.
ನಗರದ ಇಂದಿರಾಗಾಂಧಿ ಕಾಂಗ್ರೆಸ್ ಭವನದಲ್ಲಿ ಭಾನುವಾರ ನಂಜನಗೂಡು ಟಿಎಚ್ಒ ಡಾ.ನಾಗೇಂದ್ರ ಆತ್ಮಹತ್ಯೆ ಸಂಬಂಧಿಸಿದಂತೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆತ್ಮಹತ್ಯೆ ಪ್ರಕರಣದ ಕುರಿತು ಸಚಿವ ಸುಧಾಕರ್ ವಿರುದ್ಧ ಆಕ್ರೋಶವ್ಯಕ್ತಪಡಿಸಿದರು.
ಬಿಜೆಪಿಯವರಿಗೆ ನಾಚಿಕೆಯಾಗಬೇಕು
ಮೈಸೂರಿನಲ್ಲಿ ವೈದ್ಯರ ಮುಷ್ಕರದಿಂದ ಪರಿಸ್ಥಿತಿ ಹದಗೆಡುತ್ತಿದೆ. ಡಿ.ಕೆ.ರವಿ ಹಾಗೂ ಡಿವೈಎಸ್ಪಿ ಗಣಪತಿ ಪ್ರಕರಣದಲ್ಲಿ ಸಿಬಿಐಗೆ ವಹಿಸುವಂತೆ ಬೀದಿಗಿಳಿದಿದ್ದ ಬಿಜೆಪಿಯವರು ಈಗ ಸುಮ್ಮನಿದ್ದಾರೆ. ಬಿಜೆಪಿಯವರಿಗೆ ನಾಚಿಕೆಯಾಗಬೇಕು ಎಂದು ಕಟುವಾಗಿ ಟೀಕಿಸಿದ್ದಾರೆ.
ಡಾ.ನಾಗೇಂದ್ರ ಆತ್ಮಹತ್ಯೆ ಪ್ರಕರಣ ಸಿಬಿಐಗೆ ವಹಿಸಿ
ಕೋವಿಡ್ 19 ಉಪಕರಣಗಳ ಖರೀದಿಯಲ್ಲೂ ಕೂಡ ಬಿಜೆಪಿಯವರು ಭ್ರಷ್ಟಾಚಾರ ನಡೆಸಿದ್ದಾರೆ. ಪಿಎಂ ಕೇರ್ ಫಂಡ್ ನಲ್ಲಿರುವ ಹಣದ ಲೆಕ್ಕವನ್ನೂ ಕೂಡ ಸಾರ್ವಜನಿಕವಾಗಿ ಬಹಿರಂಗಪಡಿಸುತ್ತಿಲ್ಲ ಎಂದು ಆಕ್ರೋಶವ್ಯಕ್ತಪಡಿಸಿದರು. ಡಾ.ನಾಗೇಂದ್ರ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ಅಥವಾ ಹೈ ಕೋರ್ಟ್ ಸಿಟ್ಟಿಂಗ್ ಜಡ್ಜ್ ಮೂಲಕ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
Key words : Sudhakar,not,understand,doctor’s,rebuke