ಸಿಎಂ ತವರಲ್ಲಿ ಮೈಕ್ರೋ ಫೈನಾನ್ಸ್ ಸಾಲಕ್ಕೆ ಹೆದರಿ ಮಹಿಳೆ ಆತ್ಮಹತ್ಯೆ

ಮೈಸೂರು, ಜನವರಿ,27,2025 (www.justkannada.in): ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಗಳ ಹಾವಳಿಯನ್ನ ತಡೆಗಟ್ಟುವ ಸಲುವಾಗಿ ಸಿಎಂ ಸಿದ್ದರಾಮಯ್ಯ ಸಭೆ ನಡೆಸಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಬಳಿಕವೂ  ಮೈಕ್ರೋ ಫೈನಾನ್ಸ್ ಸಾಲಕ್ಕೆ ಹೆದರಿ ಸಾವನ್ನಪ್ಪುವ ಪ್ರಕರಣಗಳು ನಡೆಯುತ್ತಲೇ ಇದೆ.

ಇದೀಗ ಸಿಎಂ ತವರಿನಲ್ಲೇ ಮೈಕ್ರೋ ಫೈನಾನ್ಸ್ ಸಾಲಕ್ಕೆ ಹೆದರಿ ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.  ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಅಂಬಳೆ ಗ್ರಾಮದ ಜಯಶೀಲ(53) ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ.

ಜಯಶೀಲ ಅವರು ಐಐಎಫ್ ಎಲ್, ಫೈವ್ ಸ್ಟಾರ್ ಮೈಕ್ರೋ ಫೈನಾನ್ಸ್ ಗಳಲ್ಲಿ ಮನೆ, ವ್ಯವಸಾಯ ಹಾಗೂ  ಹಸು ಸಾಕಾಣಿಕೆಗಾಗಿ 5 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು. ಪ್ರತಿ ತಿಂಗಳು 20 ಸಾವಿರಕ್ಕೂ ಹೆಚ್ಚು ಇಎಂಐ ಕಟ್ಟುತ್ತಿದ್ದರು.  ಈ ಮಧ್ಯೆ ಸಾಲ ಮಾಡಿ ತೆಗೆದುಕೊಂಡಿದ್ದ ಹಸು ಕೂಡ ಇತ್ತೀಚೆಗೆ ಮೃತಪಟ್ಟಿತ್ತು. ಹೀಗಾಗಿ ಜಯಶೀಲ ಅವರು ಜೀವನ ನಿರ್ವಹಣೆ ಮಾಡಲು ಸಾಧ್ಯವಾಗದ ಪರಿಸ್ಥಿತಿಗೆ ತಲುಪಿದ್ದು, ಜಮೀನಿನಲ್ಲಿ ವಿಷದ ಮಾತ್ರೆಗಳನ್ನು ನುಂಗಿ ಆತ್ಮಹತ್ಯೆಗೆ ಯತ್ನಸಿದ್ದಾರೆ.

ತಕ್ಷಣವೇ ಅವರನ್ನ ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗಮಧ್ಯೆ ಜಯಶೀಲ ಅವರು ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ನಂಜನಗೂಡು ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮರಣೋತ್ತರ ಪರೀಕ್ಷೆಗಾಗಿ ನಂಜನಗೂಡಿನ ಸಾರ್ವಜನಿಕ ಆಸ್ಪತ್ರೆಗೆ ಮೃತದೇಹವನ್ನು ರವಾನೆ ಮಾಡಲಾಗಿದೆ.

ಮೈಕ್ರೋಫೈನಾನ್ಸ್ ಕಾಟಕ್ಕೆ ಊರು ಬಿಡುತ್ತಿರುವ ಗ್ರಾಮಸ್ಥರು ಎಂದು ಕಳೆದ ವಾರವಷ್ಟೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ವರದಿ ಬಳಿಕ ಪೊಲೀಸರು ಮೈಕ್ರೋ ಫೈನಾನ್ಸ್ ಅಧಿಕಾರಿಗಳ ಸಭೆ ನಡೆಸಿದ್ದರು.  ನಂಜನಗೂಡು ತಹಶಿಲ್ದಾರ್ ಆರ್ ಬಿಐಗೆ ಪತ್ರ ಬರೆದಿದ್ದರು. ಸಿಎಂ ಸಿದ್ದರಾಮಯ್ಯ ಕೂಡ ಗಂಭೀರವಾಗಿ ಪ್ರಕರಣ ತೆಗೆದುಕೊಳ್ಳಿ ಎಂದು ಸೂಚನೆ ನೀಡಿದ್ದರು. ಆದರೂ ಸಹ ಸಾವಿನ ಸರಣಿ ಮುಂದುವರೆದಿದೆ.

Key words: Woman, commits, suicide, microfinance,  loan