ಬೆಂಗಳೂರು, ಜೂ.09, 2019 : (www.justkannada.in news) : ಇಡೀ ದೇಶದ ಗಮನ ಸೆಳೆದಿದ್ದ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕುಟುಂಬಕ್ಕೆ ಪ್ರತಿಷ್ಠೆಯ ಸಂಗತಿಯಾಗಿದ್ದ ಮಂಡ್ಯ ಲೋಕಸಭಾ ಚುನಾವಣೆಯ ಅಖಾಡಕ್ಕೆ ತಾವು ಯಾಕೆ ಇಳಿದದ್ದು ಎಂಬುದರ ಬಗ್ಗೆ ಸಂಸದೆ ಸುಮಲತಾ ಅಂಬರೀಶ್ ಸ್ಪಷ್ಟನೆ ನೀಡಿದ್ದಾರೆ.
ಕನ್ನಡದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ವಾರಾಂತ್ಯ ಕಾರ್ಯಕ್ರಮದಲ್ಲಿ ನಟ ರಮೇಶ್ ಅರವಿಂದ್ ಜತೆ ಮಾತಮಾಡಿ ಸಂಸದೆ ಸುಮಲತಾ ತಮ್ಮ ಚುನಾವಣಾ ಸ್ಪರ್ಧೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಅಂಬರೀಷ್ ನಿಧನ ಕೆಲ ತಿಂಗಳುಗಳ ಬಳಿಕ ಎದುರಾದ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವಂತೆ ಅಂಬಿ ಅಭಿಮಾನಿಗಳು, ಹಿತೈಷಿಗಳು ಒತ್ತಾಯಿಸತೊಡಗಿದರು. ಆದರೆ ಈ ಬಗ್ಗೆ ತಕ್ಷಣದಲ್ಲೇ ಯಾವುದೇ ತೀರ್ಮಾನ ತೆಗೆದುಕೊಳ್ಳುವ ಸ್ಥಿತಿಯಲ್ಲಿ ನಾನಿರಲಿಲ್ಲ. ಹಿತೈಷಿಗಳು, ಸಂಬಂಧಿಗಳು ಹಾಗೂ ಮಂಡ್ಯದ ಜನತೆ ಜತೆ ಚರ್ಚಿಸಿ ಮುಂದಿನ ಹೆಜ್ಜೆ ಇಡಲು ಮುಂದಾದೆ.
ಆದರೆ ಅಷ್ಟರಲ್ಲಾಗಲೇ ಜೆಡಿಎಸ್ ಮುಖಂಡರುಗಳೆನಿಸಿಕೊಂಡ ಕೆಲವರು ನನ್ನ ಬಗ್ಗೆ ಅಸಹ್ಯವಾದ ಮಾತುಗಳನ್ನಾಡತೊಡಗಿದರು. ಗಂಡನನ್ನು ಕಳೆದುಕೊಂಡಿರುವ ಒರ್ವ ಹೆಣ್ಣು ಎಂಬುದನ್ನು ಮರೆತು ಟೀಕಿಸತೊಡಗಿದರು. ಇನ್ನು ಒಂದು ಹೆಜ್ಜೆ ಮುಂದೆ ಹೋಗಿ, ಅಂರೀಷ್ ಬದುಕಿದ್ದಾಗ ಅವರಿಂದ ಸಹಾಯ ಪಡೆದವರೇ ನನಗೆ ಬೆದರಿಕೆ ಹಾಕುವ ಮಟ್ಟಗೆ ಹೋದರು.
ಆಗಲೆ ನಾನು ಚುನಾವಣೆಗೆ ಸ್ಪರ್ಧಿಸಲೇ ಬೇಕು ಎಂದು ದೃಢವಾಗಿ ನಿಶ್ಚಯಿಸಿದ್ದು. ಅಂಬರೀಷ್ ಲೇಗಸಿಯನ್ನು ಉಳಿಸಿಕೊಳ್ಳುವ ಸಲುವಾಗಿ ಹಾಗೂ ವಿರೋಧಿಗಳಿಗೆ ಅಂಬಿ ತಾಖತ್ತು ಏನು ಎಂಬುದನ್ನು ತೋರಿಸಬೇಕು ಎಂದು ಛಲದಿಂದಲೇ ಕಣಕ್ಕಿಳಿದೆ. ಇದಕ್ಕೆ ಪೂರಕವಾಗಿ ಕುಟುಂಬದವರು, ಸಂಬಂಧಿಗಳು, ಅಭಿಮಾನಿಗಳು ಬೆಂಬಲವಾಗಿ ನಿಂತರು. ಪ್ರಮುಖವಾಗಿ ನಟರಾದ ದರ್ಶನ್, ಯಶ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರುಗಳು ವೈಯಕ್ತಿಕ ನಷ್ಟವನ್ನು ಲೆಕ್ಕಿಸದೆ ನನ್ನ ಬೆನ್ನಿಗೆ ನಿಂತರು.
ನಂಬಿದ ಮಂಡ್ಯದ ಸ್ವಾಭಿಮಾನಿ ಜನ ನಮ್ಮ ಕೈ ಬಿಡಲಿಲ್ಲ. ಯಾವುದೇ ಆಮಿಷಕ್ಕೂ ಬಲಿಯಾಗದೆ ಅಂಬರೀಷ್ ಮೇಲಿನ ಅಭಿಮಾನ ಹಾಗೂ ಸ್ವಾಭಿಮಾನವನ್ನು ಎತ್ತಿ ಹಿಡಿದರು. ಅವರಿಗೆ ಎಷ್ಟೆ ಕೃತಜ್ಞತೆ ಸಲ್ಲಿಸಿದರು ಕಡಿಮೆಯೇ ಎಂದು ಸಂಸದೆ ಸುಮಲತಾ ಟಿವಿ ಕಾರ್ಯಕ್ರಮದಲ್ಲಿ ಕಣ್ಣೀರಿಟ್ಟರು.
–
key words : sumalatha ambarish disclose the reason behind her contest from mandya loksabha election.