ಗೊಂದಲದ ಗೂಡಾದ ಬೇಸಿಗೆ ರಜೆ : ಸಚಿವ- ಆಯುಕ್ತರ ವೈರುದ್ಯ ಹೇಳಿಕೆ.

ಬೆಂಗಳೂರು,ಮೇ,21,2024 (www.justkannada.in):  ಈ ಶೈಕ್ಷಣಿಕ ವರ್ಷದ ಬೇಸಿಗೆ ರಜೆ ಮುಗಿಯುವ ಹತ್ತಿರ ಬಂದಿದ್ದು ಶಾಲೆಗಳನ್ನ ಆರಂಭಿಸಲು ಸಿದ್ಧತೆ ನಡೆಸಲಾಗುತ್ತಿದೆ. ಆದರೆ ಈ ಬಾರಿಯ ಬೇಸಿಗೆ ರಜೆ ಗೊಂದಲದ ಗೂಡಾಗಿದೆ.

ಹೌದು ಇದಕ್ಕೆ ಕಾರಣ ಶಿಕ್ಷಣ ಸಚಿವರು, ಶಿಕ್ಷಣ ಇಲಾಖೆ ಆಯುಕ್ತರು ಡಿಡಿಪಿಐ ನೀಡಿರುವ ಆದೇಶ ಮತ್ತು ಹೇಳಿಕೆಗಳು.  ಸರ್ಕಾರದ ಆದೇಶದ ಪ್ರಕಾರ ಮೇ 29ರಿಂದ ಶಾಲೆಗಳು ಆರಂಭವಾಗಬೇಕು ಎಂದು ನಿಗದಿಪಡಿಸಲಾಗಿದೆ. ಆದರೆ ಕೆಲ ಖಾಸಗಿ ಶಾಲೆಗಳು ಬೇಗ ಶಾಲಾ ತರಗತಿಗಳನ್ನ ಆರಂಭಿಸಿದ್ದು, ಈ ಬಗ್ಗೆ ಆಕ್ಷೇಪವ್ಯಕ್ತವಾದ ಬೆನ್ನಲ್ಲೆ ಶಾಲಾ ಶಿಕ್ಷಣ ಇಲಾಖೆ ಆಯುಕ್ತರಾದ ಬಿಬಿ ಕಾವೇರಿಯವರು ಸ್ಪಷ್ಟನೆ ನೀಡಿ,  ಖಾಸಗಿ ಶಾಲೆಯವರು ಬೇಸಿಗೆ ರಜೆಯನ್ನ ಕಡಿತಗೊಳಿಸಿ ಶಾಲೆ ಆರಂಭಿಸುವ ಕ್ರಮ ಸರಿಯಲ್ಲ. ಸರ್ಕಾರದ ಆದೇಶದ ಪ್ರಕಾರ ನಿಗದಿಯಂತೆಯೇ ಮೇ 29ಕ್ಕೆ  ಶಾಲೆಗಳನ್ನ ಶುರುಮಾಡಬೇಕು ಎಂದು ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ.

ಆದರೆ ಇತ್ತ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪಅವರು ಮಾತನಾಡಿ, ಈ ಶೈಕ್ಷಣಿಕ ವರ್ಷದ  ನಲಿಕಲಿ ಮೇ 27 ರಿಂದಲೇ ಶುರವಾಗಲಿದೆ ಎಂದಿದ್ದಾರೆ.

ಮೇ 27ರಿಂದಲೇ  ಶಾಲೆ ಆರಂಭ: ಮೈಸೂರು ಡಿಡಿಪಿಐ

ಈ ಮಧ್ಯೆ ಮೈಸೂರು  ಡಿಡಿಪಿಐ ಅವರು ಮೇ 27ರಿಂದಲೇ ಶಾಲೆಗೆ ಬರಬೇಕು ಎಂದು ಆದೇಶಿಸಿದ್ದಾರೆ. ಮಾರ್ಗಸೂಚಿ ಪ್ರಕಾರ 31/05/24 ರಿಂದ ಶಾಲಾ ಪ್ರಾರಂಭೋತ್ಸವ.

ಇಲ್ಲಿ ಶಿಕ್ಷಣ ಇಲಾಖೆ ಆಯುಕ್ತರು  ಸರ್ಕಾರದ ಆದೇಶದ ಪ್ರಕಾರ ಮೇ 29ಕ್ಕೆ ಶಾಲೆಗಳು ಆರಂಭವಾಗಬೇಕು ಎಂದರೇ, ಶಿಕ್ಷಣ ಸಚಿವರು ನಲಿಕಲಿ ಮೇ 27ರಿಂದಲೇ ಪ್ರಾರಂಭವಾಗುತ್ತದೆ ಎನ್ನತ್ತಾರೆ. ಮೈಸೂರು ಡಿಡಿಪಿಐ ಅವರು ಮೇ 27ರಿಂದಲೇ ಶಾಲೆ ಆರಂಭ ಎನ್ನುತ್ತಾರೆ. ಇದರಲ್ಲಿ ಯಾವುದು ನಿಜವಾದ್ದು ಎಂಬುದಕ್ಕೆ ಶಿಕ್ಷಣ ಸಚಿವರು ಮತ್ತು ಶಿಕ್ಷಣ ಇಲಾಖೆ ಆಯುಕ್ತರೇ  ಸ್ಪಷ್ಟನೆ ನೀಡಬೇಕಾಗಿದೆ.

Key words: summer, vacation, Contradictory, statement