ಬೆಂಗಳೂರು:ಮೇ-11: ಕಾದ ಕಬ್ಬಿಣವಾಗಿರುವ ನೆಲ, ಜತೆಗೆ ಬಿಸಿ ಗಾಳಿಯ ಹೊಡೆತ. ನೀರಿಗಾಗಿ ಎಲ್ಲೆಡೆ ಹಾಹಾಕಾರ, ಮೇವಿಗಾಗಿ ಜಾನುವಾರುಗಳ ಪರದಾಟ. ನೀರಿಲ್ಲದೇ ಒಣಗಿ ನಿಂತಿರುವ ಮುಂಗಾರು ಪೂರ್ವ ಬೆಳೆಗಳು, ಮಳೆಗಾಲಕ್ಕೆ ಎದುರು ನೋಡುತ್ತಿರುವ ರೈತನ ಮುಖದಲ್ಲಿ ಚಿಂತೆಯ ಕಾರ್ಮೋಡಗಳು, ಎಲ್ಲೆಡೆ ಬರದ ಛಾಯೆ… ಇವು ಪ್ರಸಕ್ತ ಬೇಸಿಗೆಯ ಸಂಕಟದ ತುಣುಕುಗಳು!
ಸಂಕಟ ಕಾಲದಲ್ಲಿ ಜನರ ನೆರವಿಗೆ ಧಾವಿಸಬೇಕಿದ್ದ ರಾಜ್ಯ ಮತ್ತು ಕೇಂದ್ರ ಸರಕಾರಗಳು ಎಲೆಕ್ಷ ನ್ ಮೋಡ್‌ನಲ್ಲಿದ್ದು, ಅನುದಾನ ಬಿಡುಗಡೆಯ ವಿಷಯದಲ್ಲಿ ಪರಸ್ಪರ ಆರೋಪ- ಪ್ರತ್ಯಾರೋಪ ಮಾಡುತ್ತಿರುವುದು ಮಾತ್ರ ವಿಪರ್ಯಾಸ.
ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಪೂರ್ವ ಮುಂಗಾರು ಮಳೆ ಚದುರಿದಂತೆ ಬೀಳುತ್ತಿರುವುದರಿಂದ ಕೆಲವು ಕಡೆ ತಾಪಮಾನ ತುಸು ಇಳಿಕೆಯಾಗಿದೆ. ಆದರೆ ಉತ್ತರ ಕರ್ನಾಟಕ, ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ತಾಪಮಾನ ವಾಡಿಕೆಗಿಂತ ಏರಿಕೆಯಾಗಿ ಸಹಿಸಲಸಾಧ್ಯವಾದ ಸೆಕೆಯಿಂದ ಜನರು ಬಳಲುತ್ತಿದ್ದಾರೆ. ಪೂರ್ವ ಮುಂಗಾರು ಮಳೆ ಕೊರತೆಯೇ ವಿಪರೀತ ಸೆಕೆ ಕಾಣಿಸಿಕೊಳ್ಳಲು ಕಾರಣ ಎಂದು ಹವಾಮಾನ ತಜ್ಞರು ಹೇಳುತ್ತಾರೆ.
ಮೇ ತಿಂಗಳ 2ನೇ ವಾರದಲ್ಲೇ ಉತ್ತರ ಒಳನಾಡಿನಲ್ಲಿ ತಾಪಮಾನ 43 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ. ಮಲೆನಾಡು ಪ್ರದೇಶಗಳಲ್ಲೂ ತಾಪಮಾನ ಏರಿ ಸೆಕೆ ಹೆಚ್ಚಿದೆ. ರಾಜ್ಯದಲ್ಲಿ ವಾಡಿಕೆಗಿಂತ ಶೇ.36 ರಷ್ಟು ಪೂರ್ವ ಮುಂಗಾರು ಮಳೆ ಕೊರತೆಯಾಗಿದೆ. ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿಯಂತೆ ಮಾರ್ಚ್ ಆರಂಭದಿಂದ ಮೇ ತಿಂಗಳ ಇಲ್ಲಿಯವರೆಗೆ ರಾಜ್ಯದ ಎಲ್ಲ ಭಾಗಗಳಲ್ಲಿ ಪೂರ್ವ ಮುಂಗಾರು ಮಳೆಯಲ್ಲಿ ಕೊರತೆ ಉಂಟಾಗಿದೆ. ತಿಂಗಳ ಆರಂಭದಲ್ಲಿ ಚಂಡಮಾರುತದ ಪರಿಣಾಮದಿಂದ ದಕ್ಷಿಣ ಒಳನಾಡಿನ ಹಲವೆಡೆ ಮಳೆಯಾದರೂ ಅದು ವಾಡಿಕೆ ಪ್ರಮಾಣ ಮುಟ್ಟಿಲ್ಲ. ಇದರ ಪರಿಣಾಮದಿಂದಾಗಿ ಕಡು ಬೇಸಿಗೆಯ ತಿಂಗಳಾದ ಮೇನಲ್ಲಿ ಉತ್ತರ ಒಳನಾಡು ಮಾತ್ರವಲ್ಲದೆ ಮಲೆನಾಡಿನಲ್ಲೂ ತಾಪಮಾನ ಅಧಿಕವಾಗಿದೆ.
ಮಲೆನಾಡಿನಲ್ಲಿ ಶೇ.74 ರಷ್ಟು ಕೊರತೆ
ಮೇ 1ರಿಂದ 9 ರವರೆಗೆ ಮಲೆನಾಡು ಪ್ರದೇಶದಲ್ಲಿ ಸರಾಸರಿ 28 ಮಿ.ಮೀ. ಮಳೆಯಾಗಬೇಕಿತ್ತು. ಈ ಬಾರಿ ಕೇವಲ 7 ಮಿ.ಮೀ. ಮಳೆಯಾಗಿದ್ದು, ಶೇ.71 ರಷ್ಟು ಮಳೆ ಕೊರತೆ ಇದ್ದು, ಶಿವಮೊಗ್ಗದಲ್ಲಿ 35 ಡಿಗ್ರಿ, ಮಡಿಕೇರಿಯಲ್ಲಿ 26.6 ಡಿಗ್ರಿ, ಹಾಸನದಲ್ಲಿ 36 ಡಿಗ್ರಿ, ಚಿಕ್ಕಮಗಳೂರಿನಲ್ಲಿ 30 ಡಿಗ್ರಿ ಸೆಲ್ಸಿಯಸ್ ತಾಪಮಾನವಿದೆ. ಹಾಸನದಲ್ಲಿ ವಾಡಿಕೆಗಿಂತ 4.4 ಡಿಗ್ರಿಯಷ್ಟು ತಾಪಮಾನ ಹೆಚ್ಚಾಗಿದೆ. ಶಿವಮೊಗ್ಗದ ಹಸಿರು ಕೇಂದ್ರವಾದ ಆಗುಂಬೆಯಲ್ಲಿ 33 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಇದು ವಾಡಿಕೆಗಿಂತ 2.4 ಡಿಗ್ರಿಯಷ್ಟು ಅಧಿಕ ಪ್ರಮಾಣವಾಗಿದೆ.
”2017ರಲ್ಲಿ ಉತ್ತಮ ಮಳೆಯಾಗಿದ್ದರಿಂದ ಮಲೆನಾಡು ಸೇರಿದಂತೆ ರಾಜ್ಯದ ಬಹುತೇಕ ಭಾಗಗಳಲ್ಲಿ ತಾಪಮಾನ ಹೆಚ್ಚಿರಲಿಲ್ಲ. 2018 ಹಾಗೂ 2019ರ ಇಲ್ಲಿಯವರೆಗೆ ಮಳೆ ಕಡಿಮೆಯಾಗಿದೆ. ಇದರಿಂದಾಗಿ ಜಲಮೂಲಗಳು ಬತ್ತಿ ತೇವಾಂಶ ಕೊರತೆಯಾಗಿ ಸೆಕೆ ಹೆಚ್ಚಿದೆ. ಈ ಬಾರಿ ಪೂರ್ವ ಮುಂಗಾರು ಮಳೆಯೂ ಕಡಿಮೆಯಾಗಿದೆ,” ಎಂದು ಕೆಎಸ್‌ಎನ್‌ಡಿಎಂಸಿ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸರೆಡ್ಡಿ ಮಾಹಿತಿ ನೀಡಿದ್ದಾರೆ. ಕರಾವಳಿ ಭಾಗದಲ್ಲೂ ಸೆಕೆ ಅಧಿಕವಾಗಿದೆ. ಕಾರವಾರದಲ್ಲಿ 36.8 ಡಿಗ್ರಿ ತಾಪಮಾನವಿದ್ದು, ವಾಡಿಕೆಗಿಂತ 3 ಡಿಗ್ರಿಯಷ್ಟು ಅಧಿಕವಾಗಿದೆ.
ಉತ್ತರದಲ್ಲಿ ಸೆಕೆಗೆ ತತ್ತರ
ಉತ್ತರ ಒಳನಾಡಿನ ಕಲಬುರಗಿಯಲ್ಲಿ 43 ಡಿಗ್ರಿ, ರಾಯಚೂರಿನಲ್ಲಿ 41.5 ಡಿಗ್ರಿ, ವಿಜಯಪುರ, ಬೀದರ್‌ನಲ್ಲಿ 39 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. ಈ ಎಲ್ಲ ಜಿಲ್ಲೆಗಳಲ್ಲಿ ತಾಪಮಾನವು ವಾಡಿಕೆಗಿಂತ 1-2 ಡಿಗ್ರಿಯಷ್ಟು ಅಧಿಕವಾಗಿದೆ. ಆಂಧ್ರಪ್ರದೇಶ, ತೆಲಂಗಾಣದಲ್ಲಿ ಬಿಸಿಗಾಳಿ ಬೀಸುತ್ತಿರುವುದರ ಪರಿಣಾಮವಾಗಿ ಉತ್ತರ ಒಳನಾಡಿನಲ್ಲಿ ತೇವಾಂಶ ಕೊರತೆಯಾಗಿ ಸೆಕೆ ಹೆಚ್ಚಿದೆ.
ಬಿರುಬಿಸಿಲಿಗೆ ಕಂದಮ್ಮಗಳು ತತ್ತರ
ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ತಾಪಮಾನದಿಂದಾಗಿ ಗರ್ಭಿಣಿಯರು ಮತ್ತು ಮಕ್ಕಳು ನಿರ್ಜಲೀಕರಣಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗುತ್ತಿರುವ ಪ್ರಕರಣ ಅಧಿಕವಾಗುತ್ತಿವೆ.
ವಾರದಿಂದ ತಾಪಮಾನ 39ಡಿ.ಸೆ.ನಿಂದ 42 ಡಿ.ಸೆ.ನ ಆಸುಪಾಸಿದೆ. ಬಿಸಿಗಾಳಿಯೂ ಜತೆಯಾಗುತ್ತಿರುವುದರಿಂದ ಸಂಕಷ್ಟ ಶುರುವಾಗಿದೆ. ಗರ್ಭಿಣಿಯರು ಮತ್ತು 0-28 ದಿನದೊಳಗಿನ ನವಜಾತ ಶಿಶುಗಳಿಗೆ ತೀವ್ರ ತೊಂದರೆಯಾಗುತ್ತಿದೆ. ಬಿಸಿಲಿನ ತಾಪಕ್ಕೆ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿ ಜ್ವರ, ಸುಸ್ತು ಕಾಣಿಸುತ್ತಿದೆ. ಚಿಕಿತ್ಸೆ ಬಯಸಿ ಇಲ್ಲಿನ ವಿಮ್ಸ್, ಜಿಲ್ಲಾಸ್ಪತ್ರೆ ಸೇರಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಮಕ್ಕಳೊಂದಿಗೆ ತಾಯಂದಿರು ಸಾಲುಗಟ್ಟಿ ನಿಂತ ದೃಶ್ಯ ಕಂಡುಬರುತ್ತಿವೆ. ಬಳ್ಳಾರಿ ನಗರದ ವಿಮ್ಸ್ ಆಸ್ಪತ್ರೆಯಲ್ಲಿ ನಿತ್ಯ 30ರಿಂದ 40 ಹೆರಿಗೆಯಾಗುತ್ತವೆ. ದಿನವೊಂದಕ್ಕೆ ಐದಾರು ಶಿಶುಗಳು ಡಿಹೈಡ್ರೇಷನ್‌ನಿಂದ ಬಳಲುತ್ತಿವೆ. 2017ರಲ್ಲಿ 148 ಪ್ರಕರಣ, 2018ರಲ್ಲಿ 74, 2019ರಲ್ಲಿ 60 ಪ್ರಕರಣ ದಾಖಲಾಗಿವೆ. ಜಿಲ್ಲಾಸ್ಪತ್ರೆಯಲ್ಲಿ ನಿತ್ಯ 15-20 ಹೆರಿಗೆ ಮಾಡಿಸಲಾಗುತ್ತಿದೆ. ಶೇ.40ರಷ್ಟು ಪ್ರಕರಣಗಳಲ್ಲಿ ನವಜಾತಶಿಶುಗಳು ನೀರಿನ ಅಂಶದ ಕೊರತೆಯಿಂದ ಬಳಲುವುದು ಕಂಡುಬರುತ್ತಿದೆ. 2018ರ ಮಾರ್ಚ್, ಏಪ್ರಿಲ್‌ನಲ್ಲಿ 70, 2019ರ ಏಪ್ರಿಲ್‌ನಲ್ಲಿ 60, ಮೇ10 ರವರೆಗೆ 30 ಪ್ರಕರಣ ಪತ್ತೆಯಾಗಿವೆ. ವಿಮ್ಸ್ ಹಾಗೂ ಜಿಲ್ಲಾಸ್ಪತ್ರೆಯಲ್ಲಿ 10ಕ್ಕೂ ಹೆಚ್ಚು ಮಕ್ಕಳು ನಿರ್ಜಲೀಕರಣ ಸಮಸ್ಯೆಯಿಂದ ಚಿಕಿತ್ಸೆಗೆ ಒಳಪಡುತ್ತಿವೆ.
ಬೇಸಿಗೆಯ 3 ತಿಂಗಳಲ್ಲಿ ಡಿಹೈಡ್ರೇಷನ್ ಸೇರಿ ನಾನಾ ಸಮಸ್ಯೆಯಿಂದ ಸರಕಾರಿ ಜಿಲ್ಲಾಸ್ಪತ್ರೆಗೆ ಮಕ್ಕಳು, ಗರ್ಭೀಣಿಯರು ದಾಖಲಾಗುವುದು ಹೆಚ್ಚಿದೆ. ನವಜಾತ ಶಿಶುಗಳಲ್ಲಿ, ಗರ್ಭಿಣಿಯರಲ್ಲಿ ನೀರಿನ ಅಂಶದ ಕೊರತೆ ಕಂಡುಬರುತ್ತಿದೆ. ನಿತ್ಯ ಸುಮಾರು 6 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ಅತಿ ಹೆಚ್ಚು ನೀರು ಸೇವನೆ, ಬಿಸಿಲಿಗೆ ಹೆಚ್ಚಾಗಿ ಓಡಾಡದಂತೆ ಸಲಹೆ ನೀಡಲಾಗುತ್ತಿದೆ.
– ಡಾ.ಬಸರೆಡ್ಡಿ, ಜಿಲ್ಲಾ ಶಸ್ತ್ರಚಿಕಿತ್ಸಕ, ಬಳ್ಳಾರಿ
ಪ್ರತಿ ತಾಲೂಕಿನಲ್ಲೂ ಕಂಟ್ರೋಲ್ ರೂಂ: ಡಿಸಿಎಂ ಜಿ ಪರಮೇಶ್ವರ್
ತುಮಕೂರು: ಬರಗಾಲ ಇರುವ ತಾಲೂಕು ಹಾಗೂ ಹೋಬಳಿಯಲ್ಲಿ ಕಂಟ್ರೋಲ್ ರೂಂ ತೆರೆಯಲು ಸೂಚಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,”ಸಹಾಯವಾಣಿಗೆ ಜನರು ಕರೆ ಮಾಡಿ ಸಮಸ್ಯೆ ಹೇಳಿಕೊಳ್ಳಬಹುದು,”ಎಂದರು. ರಾಜ್ಯದಲ್ಲಿ ಬರಗಾಲದಿಂದ 2434 ಕೋಟಿ ರೂ. ನಷ್ಟವಾಗಿದ್ದು, ನೆರವು ನೀಡುವಂತೆ ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ದೆವು. ಆದರೆ, 949 ಕೋಟಿ ರೂ. ಮಾತ್ರ ಕೇಂದ್ರ ಕೊಟ್ಟಿದೆ. ಕುಡಿಯುವ ನೀರು, ಮೇವು, ಜನ ಗುಳೆ ಹೋಗುವುದು ತಡೆಯಲು ಈ ಹಣ ಸಾಲದು. ಆದರೆ ಮಹಾರಾಷ್ಟ್ರಕ್ಕೆ 4 ಸಾವಿರ ಕೋಟಿಗೂ ಅಧಿಕ ಹಣ ನೀಡಲಾಗಿದೆ. ನಮಗೆ ತಾರತಮ್ಯ ಮಾಡಿದ್ದಾರೆ. ಅವರ ತಂಡ ವರದಿ ಕೊಟ್ಟರೂ ಹಣ ಕೊಟ್ಟಿಲ್ಲ,”ಎಂದು ಆರೋಪಿಸಿದರು.
ಬರ ಪರಿಹಾರಕ್ಕೆ ಹಣ ಬಿಡುಗಡೆಗೆ ತಾರತಮ್ಯ ಮಾಡಿಲ್ಲ: ಶೋಭಾ
ಬೆಂಗಳೂರು: ಬರ ಪರಿಹಾರ ನಿಗದಿ ಹಾಗೂ ವಿತರಣೆಯಲ್ಲಿ ಕೇಂದ್ರ ಸರಕಾರ ಕರ್ನಾಟಕಕ್ಕೆ ತಾರತಮ್ಯ ಮಾಡಿದೆ ಎಂಬ ರಾಜ್ಯ ಸರಕಾರದ ಆರೋಪ ಸಂಪೂರ್ಣ ನಿರಾಧಾರವಾದುದು ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಹೇಳಿದ್ಧಾರೆ.
”ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಹೇಳಿರುವಂತೆ ಮುಂಗಾರು ಬೆಳೆ ನಷ್ಟಕ್ಕೆ ಅಕ್ಟೋಬರ್‌ನಲ್ಲಿ ಸಲ್ಲಿಸಿದ್ದ ಪ್ರಸ್ತಾವನೆ ಅನ್ವಯ 949 ಕೋಟಿ ರೂ. ಪರಿಹಾರ ನಿಗದಿಯಾಗಿದ್ದು 434.62 ಕೋಟಿ ರೂ. ಬಿಡುಗಡೆಯಾಗಿದೆ. ಬಾಕಿ ಮೊತ್ತ ತರಿಸಿಕೊಳ್ಳಬೇಕಾದ ಜವಾಬ್ದಾರಿ ರಾಜ್ಯದ್ದಾಗಿದೆ,”ಎಂದು ಹೇಳಿದರು. ”ಹಿಂಗಾರು ಹಂಗಾಮಿಗೆ 2064 ಕೋಟಿ ಪರಿಹಾರಕ್ಕೆ ಫೆಬ್ರವರಿಯಲ್ಲಿ ಪ್ರಸ್ತಾವನೆ ಸಲ್ಲಿಸಿದ್ದರೂ ಪರಿಹಾರ ನಿಗದಿಯಾಗಿಲ್ಲ ಎಂದು ಕೃಷಿ ಸಚಿವರು ಮೇ ನಲ್ಲಿ ಹೇಳಿಕೆ ನೀಡುತ್ತಾರೆಂದರೆ ಬರ ಪರಿಹಾರದ ಬಗ್ಗೆ ಇರುವ ಕಾಳಜಿ ಏನು ಎನ್ನುವುದು ಅರ್ಥವಾಗುತ್ತದೆ,” ಎಂದಿದ್ದಾರೆ. ”2014 ರಿಂದ 2019ರ ಅವಧಿಯಲ್ಲಿ ರಾಷ್ಟ್ರೀಯ ಪ್ರಕೃತಿ ವಿಪತ್ತು ನಿರ್ವಹಣಾ ನಿಧಿಯಿಂದ 6082.29 ಕೋಟಿ ರೂ .ಹಾಗೂ ರಾಜ್ಯ ಪ್ರಕೃತಿ ವಿಪತ್ತು ನಿರ್ವಹಣಾ ನಿಧಿಯಿಂದ 1087.99 ಕೋಟಿ ಸೇರಿದಂತೆ ಒಟ್ಟು 7170.28 ಕೋಟಿ ಬಿಡುಗಡೆ ಮಾಡಲಾಗಿದೆ. ಆದರೆ 2004 ರಿಂದ 2014ರ ಯುಪಿಎ ಅವಧಿಯಲ್ಲಿ ಬಿಡುಗಡೆ ಮಾಡಿದ್ದು ಕೇವಲ 4822.13 ಕೋಟಿ ರೂ ಮಾತ್ರ,” ಎಂದು ತಿರುಗೇಟು ನೀಡಿದ್ದಾರೆ.
ಕೃಪೆ:ವಿಜಯಕರ್ನಾಟಕ