ಬೆಂಗಳೂರು,20,2020(www.justkannada.in): ಕೊರೋನಾ ವೈರಸ್ ಹರಡುವ ಭೀತಿ ಹಿನ್ನೆಲೆ ಪ್ರಧಾನಿ ಮೋದಿ ಭಾನುವಾರಕ್ಕೆ ಕರೆ ನೀಡಿರುವ ಜನತಾ ಕರ್ಫ್ಯೂಗೆ ಬಾರ್ , ಹೋಟೆಲ್ , ಬೀದಿಬದಿ ವ್ಯಾಪಾರಿಗಳ ಸಂಘಟನೆ ಸೇರಿ ಹಲವು ಸಂಘಟನೆಗಳು ಬೆಂಬಲ ನೀಡಿರುವ ಹಿನ್ನೆಲೆ ಅಂದು ಈ ಎಲ್ಲಾ ಸೇವೆಗಳು ಬಂದ್ ಆಗಲಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮಾರ್ಚ್ 22 ಭಾನುವಾರದಂದು ಜನತಾ ಕರ್ಪ್ಯೂ ಗೆ ಕರೆ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಯಾರು ಮನೆಯಿಂದ ಹೊರಗೆ ಬಾರದಂತೆ ಇಡೀ ದಿನವಿಡೀ ಮನೆಯಲ್ಲಿಯೇ ಇದ್ದು, ಜನತಾ ಕರ್ಪ್ಯೂ ಆಚರಿಸುವಂತೆ ಕರೆ ನೀಡಿದ್ದರು.
ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ಜನತಾ ಕರ್ಫ್ಯೂಗೆ ಬಾರ್, ವೈನ್ ಶಾಪ್ ಮಾಲೀಕರ ಒಕ್ಕೂಟ, ಓಲಾ ಊಬರ್ ಸಂಘಟನೆಗಳು, ಬೀದಿಬದಿ ವ್ಯಾಪಾರಿಗಳ ಸಂಘಟನೆ, ಆಟೋ ಚಾಲಕರು, ಕ್ಯಾಬ್ ಚಾಲಕರು ಬೆಂಬಲ ನೀಡಿದ್ದು ಈ ಹಿನ್ನೆಲೆ ಮಾರ್ಚ್ 22(ಭಾನುವಾರ) ರಂದು ಎಲ್ಲಾ ಸೇವೆ ಬಂದ್ ಆಗಲಿದೆ.
ಭಾನುವಾರ ಜನತಾ ಕರ್ಫ್ಯೂಗೆ ಕರೆ ಹಿನ್ನೆಲೆ, ಭಾನುವಾರ ಹೂವು ಹಣ್ಣು ತರಕಾರಿ ಸಿಗಲ್ಲ. ಹೀಗಾಗಿ ಶನಿವಾರವೇ ಎಲ್ಲವನ್ನೂ ಸಂಗ್ರಹಿಸಿಟ್ಟುಕೊಳ್ಳುವಂತೆ ಬೀದಿಬದಿ ವ್ಯಾಪಾರಿಗಳ ಸಂಘಟನೆ ರಾಜ್ಯಾಧ್ಯಕ್ಷ ರಂಗಸ್ವಾಮಿ ಸೂಚನೆ ನೀಡಿದ್ದಾರೆ. ಜನತಾ ಕರ್ಫ್ಯೂಗೆ ಹಾಪ್ ಕಾಮ್ಸ್ ನಿಂದಲೂ ಬೆಂಬಲ ಸಿಕ್ಕಿದ್ದು ಬೆಂಗಳೂರಿನಲ್ಲಿ ಹಾಪ್ ಕಾಮ್ಸ್ ನ 280 ಮಳಿಗೆಗಳು ಬಂದ್ ಆಗಲಿವೆ ಎಂಬ ಮಾಹಿತಿ ಲಭ್ಯವಾಗಿದೆ.
ಇನ್ನು ಬೆಂಗಳೂರಿನಲ್ಲಿ ಜನತಾ ಕರ್ಫ್ಯೂಗೆ ಪೀಸ್ ಆಟೋ ಸಂಘಟನೆಯೂ ಬೆಂಬಲ ವ್ಯಕ್ತಪಡಿಸಿದೆ. ಜನತೆಯಲ್ಲಿ ಆರೋಗ್ಯದ ಕುರಿತು ಅರಿವು ಮೂಡಿಸಲು ಅಂದು ಬೆಳಗ್ಗೆಯಿಂದಲೂ ಪೀಸ್ ಆಟೋಗಳು ರಸ್ತೆಗಿಳಿಯದಿರಲು ನಿರ್ಧರಿಸಲಾಗಿದೆ. ಬೆಂಗಳೂರಿನಲ್ಲಿ 10 ಸಾವಿರ ಪೀಸ್ ಆಟೋ ಚಾಲಕರಿದ್ದು, ಅಂದು ಪೀಸ್ ಆಟೋಗಳು ರಸ್ತೆಗಿಳಿಯುವುದಿಲ್ಲ ಎಂದು ಪೀಸ್ ಆಟೋ ಸಂಘಟನೆ ರಾಜ್ಯಧ್ಯಕ್ಷ ರಘು ಮಾಹಿತಿ ನೀಡಿದ್ದಾರೆ.
ಶಿವಮೊಗ್ಗ ಜಿಲ್ಲೆಯಲ್ಲಿ ಜನತಾ ಕರ್ಫ್ಯೂಗೆ ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್ ಕೂಡ ಬೆಂಬಲ ಸೂಚಿಸಿದೆ. ಅಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಪೆಟ್ರೋಲ್, ಡೀಸೆಲ್ ವಿತರಣೆ ಸ್ಥಗಿತಗೊಳಿಸುವುದಾಗಿ ಸ್ಪಷ್ಟಪಡಿಸಲಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಹೊಟೇಲ್ , ಮಾರುಕಟ್ಟೆಗಳು ಬಂದ್ ಆಗಲಿದೆ. ತುರ್ತು ಸೇವೆ ಹೊರತುಪಡಿಸಿ ಉಳಿದೆಲ್ಲ ಸೇವೆಗಳು ಅಂದು ಅಲಭ್ಯ ಎಂದು ಸ್ಪಷ್ಟಪಡಿಸಲಾಗಿದೆ.
Key words: Support – various organizations – Janata curfew – Sunday -bandh