FDA ನೇಮಕಾತಿಯಲ್ಲಿ ಅಕ್ರಮ: ಆರ್.ಡಿ ಪಾಟೀಲ್‌ ಗೆ ಜಾಮೀನು ನಿರಾಕರಿಸಿದ ಸುಪ್ರೀಂ ಕೋರ್ಟ್

ನವದೆಹಲಿ, ಜನವರಿ, 9,2025 (www.justkannada.in): ರಾಜ್ಯದಲ್ಲಿ ಎಫ್​ಡಿಎ ನೇಮಕಾತಿ ಪರೀಕ್ಷೆಗಳಲ್ಲಿ ನಡೆದ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ  ಕಿಂಗ್​ಪಿನ್ ಆರ್‌.ಡಿ ಪಾಟೀಲ್‌ ಗೆ ಜಾಮೀನು ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ.

ಪ್ರಕರಣ ಸಂಬಂಧ ಹೈಕೋರ್ಟ್ ನಲ್ಲಿ ಜಾಮೀನು ನಿರಾಕರಿಸಲಾಗಿತ್ತು. ಹೈಕೋರ್ಟ್ ಆದೇಶ ಪ್ರಶ್ನಿಸಿ ಆರ್‌ ಡಿ ಪಾಟೀಲ್‌ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದು, ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಬಿ.ಆರ್ ಗವಾಯಿ ನೇತೃತ್ವದ ದ್ವಿಸದಸ್ಯ ಪೀಠ ಜಾಮೀನು ನೀಡಲು ನಿರಾಕರಿಸಿದೆ.

ರಾಜ್ಯದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು  (ಕೆಇಎ) 2023ರಲ್ಲಿ ಎಫ್​ಡಿಎ ನೇಮಕಾತಿ ಪರೀಕ್ಷೆ ನಡೆಸಿತ್ತು. ಕಲಬುರಗಿ ನಗರದ ಶ್ರೀ ಶರಣಬಸವೇಶ್ವರ ವಿಶ್ವವಿದ್ಯಾಲಯ ಪರೀಕ್ಷಾ ಕೇಂದ್ರದಲ್ಲಿ ನಡೆದ ಎಫ್ ಡಿಎ ಪರೀಕ್ಷೆಯಲ್ಲಿ ಕೆಲವು ಅಭ್ಯರ್ಥಿಗಳು ಬ್ಲೂಟೂತ್ ಬಳಸಿ ನಕಲು ಮಾಡಲು ಯತ್ನಿಸಿದಾಗ ಸಿಕ್ಕಿಬಿದ್ದಿರು. ಈ ಸಂಬಂಧ ಅಫಜಲಪುರ ಪೊಲೀಸ್​ ಠಾಣೆಯಲ್ಲಿ ಎಫ್​ಐಆರ್ ಕೂಡ ದಾಖಲಾಗಿತ್ತು. ವಿಚಾರಣೆ ನಡೆಸಿದ ಪೊಲೀಸರು, ಹಲವರನ್ನು ಬಂಧಿಸಿದ್ದರು.

ಅಕ್ರಮದ ವಿಚಾರಣೆ ವೇಳೆ, ಪ್ರಕರಣದ ಕಿಂಗ್​ಪಿನ್ ಆರ್ ​ಡಿ ಪಾಟೀಲ್ ಹೆಸರು ಕೇಳಿ ಬಂದ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಲಾಗಿತ್ತು. ಬಳಿಕ ಪ್ರಕರಣದ ತನಿಖೆಯ ಹೊಣೆಯನ್ನು ಕರ್ನಾಟಕ ಸರ್ಕಾರ ಸಿಐಡಿಗೆ ವಹಿಸಿತ್ತು.

Key words: FDA Recruitment, Supreme Court, bail , RD Patil