ಮೈಸೂರು,ಡಿಸೆಂಬರ್,06,2020(www.justkannada.in) : ಭಾರತದ ಸಂವಿಧಾನವನ್ನು ಒಪ್ಪದವರು ಇಂದು ಆಳ್ವಿಕೆ ಮಾಡುತ್ತಿದ್ದಾರೆ. ಸಂವಿಧಾನದ ಶೀಲಹರಣವಾಗುತ್ತಿದೆ. ಎಲ್ಲಾ ರಾಜ್ಯಗಳು ಒಟ್ಟುಗೂಡಿ ಪಕ್ಷಾತೀತವಾಗಿ ಸಂವಿಧಾನ ಉಳಿವಿಗೆ ಹೋರಾಟ ಮಾಡಬೇಕಿದೆ ಎಂದು ಸಾಹಿತಿ ದೇವನೂರು ಮಹಾದೇವ ಕರೆ ನೀಡಿದರು.
ನಗರದ ಇನ್ಸ್ಟಿಟ್ಯೂಟ್ ಆಪ್ ಇಂಜಿನಿಯರ್ ಸಭಾಂಗಣದಲ್ಲಿ ಡಾ ಬಿ ಆರ್ ಅಂಬೇಡ್ಕರ್ ಅವರ 64ನೇ ಮಹಾಪರಿನಿಬ್ಬಾಣ ದಿನಾಚರಣೆ ಹಿನ್ನೆಲೆ ನಡೆದ ಜನಜಾಗೃತಿ ಅಭಿಯಾನ ಕರಪತ್ರ ಬಿಡುಗಡೆ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಅಂಬೇಡ್ಕರ್ ಮಾತುಗಳು ನಮಗೆ ಬೆಳಕಿನಂತೆ
ಅಂಬೇಡ್ಕರ್ ಅವರ ಚರಿತ್ರೆ ಓದಿದಾಗ ಅದು ನನ್ನನು ಬೆಂಬಿಡದೆ ಕಾಡುತ್ತಿದೆ. ಅವರ ಮಾತುಗಳು ನಮಗೆ ಬೆಳಕಿನಂತೆ. ಅಂದಿಗಿಂತ ಇಂದು ಅಂಬೇಡ್ಕರ್ ಮಾತುಗಳು ಪ್ರಸ್ತುತವಾಗಿ ಗೋಚರಿಸುತ್ತಿವೆ. ಅಂಬೇಡ್ಕರ್ ವ್ಯಕ್ತಪಡಿಸಿದ ಆತಂಕಗಳು ಇವತ್ತು ನಿಜವಾಗುತ್ತಿವೆ ಎಂದರು.
ಕೇಂದ್ರ ಸರ್ಕಾರದ ಪೈಶಾಚಿಕ ನಡೆಯಿಂದ ದೇಶದ ಮುನ್ನಡೆ ಈಗ ಹಿನ್ನಡೆ
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಪೈಶಾಚಿಕ ನಡೆಯಿಂದ ದೇಶದ ಮುನ್ನಡೆ ಈಗ ಹಿನ್ನಡೆಯಾಗುತ್ತದೆ. ಸಾಮಾಜಿಕ ನ್ಯಾಯ ಇಲ್ಲದಂತಾಗುತ್ತಿದೆ. ಕೇಂದ್ರ ಸರ್ಕಾರ ಸಿಎಆರ್, ಎನ್ ಆರ್ ಸಿ ಮೂಲಕ ಜನರನ್ನು ಸದೆಬಡಿಯುತ್ತಿದೆ ಎಂದು ಬೇಸರವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕಲಾವಿದ ಜನಾರ್ಧನ್ ಜನ್ನಿ. ದಸಂಸ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್, ರಾಜ್ಯ ಸಂಚಾಲಕ ಗುರುಪ್ರಸಾದ್ ಉಪಸ್ಥಿತರಿದ್ದರು.
key words : survival-Constitution-all-states-must-unite-fly-unbiased-writer-Devanoor-Mahadeva