ಗೃಹಿಣಿ ಅನುಮಾನಾಸ್ಪದ ಸಾವು: ಮರ್ಯಾದಾಗೇಡು ಹತ್ಯೆ ಶಂಕೆ..? ಸಮಗ್ರ ತನಿಖೆಗೆ ಆಗ್ರಹ

ಮೈಸೂರು,ಫೆಬ್ರವರಿ,22,2025 (www.justkannada.in):  ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ದುಗ್ಗಹಳ್ಳಿ ಗ್ರಾಮದಲ್ಲಿ ಕಳೆದ ಐದಾರು ತಿಂಗಳ ಹಿಂದೆ ಮಹಿಳೆ ಅನುಮಾನಾಸ್ಪದ ಸಾವನ್ನಪ್ಪಿದ್ದು ಇದೀಗ ಗ್ರಾಮಸ್ಥರು ಮಹಿಳೆಯ ಸಾವಿನ ಬಗ್ಗೆ ಮರ್ಯಾದಾಗೇಡು ಹತ್ಯೆಯಾಗಿರುವ ಶಂಕೆ ವ್ಯಕ್ತಪಡಿಸಿದ್ದಾರೆ.

ದುಗ್ಗಹಳ್ಳಿ ಗ್ರಾಮದ ಸುಚಿತ್ರ(38)  ಎಂಬ ಮಹಿಳೆ ಕಳೆದ ನಾಲ್ಕೈದು ತಿಂಗಳ ಹಿಂದೆ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಪತಿ ಹಾಗೂ ತಮ್ಮ ಇಬ್ಬರೂ ಸೇರಿ ಹತ್ಯೆ ಮಾಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಇದೀಗ  ಸಮಗ್ರ ತನಿಖೆ ನಡೆಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಸುಚಿತ್ರ  ಪತಿ ರವಿ ಹಾಗೂ ಈಕೆಯ ತಮ್ಮ ಸತೀಶ ಸೇರಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು  ಪ್ರಕರಣವನ್ನ ಮುಚ್ಚಿಹಾಕಿದ್ದಾರೆಂದು ಗ್ರಾಮಸ್ಥರು ಆರೋಪಿಸಿದ್ದಾರೆ. 5 ತಿಂಗಳ ಹಿಂದೆ ಇದ್ದಕ್ಕಿದ್ದಂತೆ ಸುಚಿತ್ರಾ ಸಾವನ್ನಪ್ಪಿದರು. ಈಗ ಈ ಬಗ್ಗೆ ಗ್ರಾಮಸ್ಥರಲ್ಲಿ ಅನುಮಾನದ ಹುತ್ತ ಎದ್ದಿದೆ.

15 ವರ್ಷಗಳ ಹಿಂದೆ ದುಗ್ಗಹಳ್ಳಿ ಗ್ರಾಮದ ಸುಚಿತ್ರಾರನ್ನ ಏಚಗುಂಡ್ಲ ಗ್ರಾಮದ ರವಿ ಜೊತೆ ವಿವಾಹ ಮಾಡಿಕೊಡಲಾಗಿತ್ತು. ದಂಪತಿಗೆ ಇಬ್ಬರು ಮಕ್ಕಳೂ ಸಹ ಇದ್ದಾರೆ. ಮೂರ್ನಾಲ್ಕು ವರ್ಷಗಳಿಂದ ಸುಚಿತ್ರಾ ನಡತೆಯ ಬಗ್ಗೆ ರವಿಗೆ ಅನುಮಾನ ಬಂದಿತ್ತು. ಪಕ್ಕದ ಬಡಾವಣೆಯ ಅನ್ಯಕೋಮಿನ ವಿವಾಹಿತ ವ್ಯಕ್ತಿಯೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದಳೆಂಬ ಅನುಮಾನ ಕಾಡಿತ್ತು. ಪತಿ ರವಿ ಈ ವಿಚಾರವನ್ನ ಭಾವಮೈದ ಸತೀಶ್‌ಗೆ ತಿಳಿಸಿದ್ದ.

ರವಿ, ಸುಚಿತ್ರ ಹಾಗೂ ಮಕ್ಕಳನ್ನ ಸತೀಶ್ ದುಗ್ಗಹಳ್ಳಿಗೆ ಕರೆಸಿಕೊಂಡಿದ್ದ. 22-07-2024 ರಂದು ಸತೀಶನ ಮನೆಗೆ ದಂಪತಿ ಮಕ್ಕಳ ಸಮೇತ ಬಂದಿದ್ದರು. ಈ ಮಧ್ಯೆ ಸತೀಶ್ ಹೊಸದಾಗಿ ನಿರ್ಮಿಸಿದ್ದ ಕೋಳಿಫಾರಂ ನಲ್ಲಿ ಸುಚಿತ್ರ ಸಾವನ್ನಪ್ಪಿದ್ದರು. ಈ ವಿಚಾರವನ್ನ ಪೊಲೀಸರಿಗೂ ತಿಳಿಸದೆ, ಗ್ರಾಮಸ್ಥರ ಗಮನಕ್ಕೂ ತರದೆ ಏಕಾ ಏಕಿ ಮೃತದೇಹವನ್ನ ಏಚಗುಂಡ್ಲ ಗ್ರಾಮಕ್ಕೆ ಕೊಂಡೊಯ್ದು ತರಾತುರಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಿದ್ದರು.

ಆರಂಭದಲ್ಲಿ ಕಿಂಚತ್ತು ಸುಳಿವು ನೀಡದ ಸತೀಶ್ ಕೆಲವು ದಿನಗಳಿಂದ ರಾಜಾರೋಷವಾಗಿ ಸಾಯಿಸಿದ್ದೀನಿ ಎಂದು ಹೇಳಿಕೊಂಡು ತಿರುಗಾಡುತ್ತಿದ್ದು ಇದೀಗ ಗ್ರಾಮಸ್ಥರಲ್ಲಿ ಅನುಮಾನವನ್ನುಂಟು ಮಾಡಿದೆ. ಸುಚಿತ್ರಾ ಆರೋಗ್ಯವಾಗಿದ್ದರೂ ಸಾವನ್ನಪ್ಪಿದ್ದು ಹೇಗೆ ?  ಆತ್ಮಹತ್ಯೆ ಆಗಿದ್ದಲ್ಲಿ ಪೊಲೀಸರಿಗೂ ಏಕೆ ತಿಳಿಸಿಲ್ಲ. ಯಾರಿಗೂ ತಿಳಿಸದೆ ತರಾತುರಿಯಲ್ಲಿ ಅಂತ್ಯಕ್ರಿಯೆ ನಡೆಸಿದ್ದು ಏಕೆ..? ಗ್ರಾಮದ ಜನತೆಯನ್ನ ದೂರವಿರಿಸಿ ಮೃತದೇಹವನ್ನ ಸುಟ್ಟುಹಾಕಿರುವುದು ಏಕೆ? ಅನ್ಯಕೋಮಿನ ವ್ಯಕ್ತಿಯೊಡನೆ ಸಂಪರ್ಕ ಬೆಳೆಸಿದ್ದೇ ಸುಚಿತ್ರ ಸಾವಿಗೆ ಕಾರಣವಾಯ್ತೇ..? ರಾಜಾರೋಷವಾಗಿ ತಾನೇ ಕೊಲೆ ಮಾಡಿರುವುದಾಗಿ ಹೇಳುತ್ತಿರುವ ಸತೀಶನ ಇಂಗಿತವಾದರೂ ಏನು..?  ಇಷ್ಟಾದರೂ ಪೊಲೀಸರು ಮೌನ ವಹಿಸುವುದು ಏಕೆ? ಎಂದು  ಗ್ರಾಮಸ್ಥರಲ್ಲಿ  ಹತ್ತು ಹಲವು ಪ್ರಶ್ನೆಗಳು ಮೂಡಿದ್ದು ಕೂಡಲೇ ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

Key words: Suspicious death, housewife,  Murder, suspected, Mysore