ಮೈಸೂರು,ಜನವರಿ,21,2021(www.justkannada.in): ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಪದೋನ್ನತಿ ಹೊಂದಿದ ಅಧ್ಯಾಪಕರುಗಳಿಗೆ ಅವರವರ ಆರ್ಹತಾ ದಿನಾಂಕದಿಂದಲೇ ಆರ್ಥಿಕ ಸೌಲಭ್ಯವನ್ನು ನೀಡದೆ ಕೇವಲ ಸಿಂಡಿಕೇಟ್ ದಿನಾಂಕದಿಂದ ನೀಡುತ್ತಿದ್ದ ಆದೇಶಕ್ಕೆ ತಡೆಹಿಡಿಸುವಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾದ ಡಾ. ಚೈತ್ರ ನಾರಾಯಣ್ ಯಶಸ್ವಿಯಾಗಿದ್ದಾರೆ.
ಯು.ಜಿ.ಸಿ ನಿಯಮಾವಳಿಗಳ ಪ್ರಕಾರ ಯಾವುದೇ ಸಹಾಯಕ ಪ್ರಾಧ್ಯಾಪಕ ಎಜಿಪಿ 7,000/-, ಎಜಿಪಿ 8,000/-, ಸಹ ಪ್ರಾಧ್ಯಾಪಕ ಎಜಿಪಿ 9,000/- ಹಾಗೂ ಪ್ರಾಧ್ಯಾಪಕ ಎಜಿಪಿ 10,000/- ರೂಪಾಯಿಗಳ ದರ್ಜೆಗೆ ಪದೋನ್ನತಿ ಹೊಂದಿದಾಗ ಅವರವರ ಅರ್ಹತಾ ದಿನಾಂಕದಿಂದಲೇ ಆರ್ಥಿಕ ಸೌಲಭ್ಯವನ್ನು ಪಡೆಯಲು ಅರ್ಹರಾಗಿರುತ್ತಾರೆ ಎಂದು ತಮ್ಮ ಪ್ರಸ್ತಾವನೆಯಲ್ಲಿ ಡಾ. ಚೈತ್ರ ನಾರಾಯಣ್ ‘ಕಳೆದ ಸಿಂಡಿಕೇಟ್ ಸಭೆಯಲ್ಲಿ ಮಂಡಿಸಿ, ಹಿಂದಿನ ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸಭೆಯ ಆದೇಶವನ್ನು ರದ್ದುಪಡಿಸಿ ಯು.ಜಿ.ಸಿ ನಿಯಮಾವಳಿಗಳ ಪ್ರಕಾರ ಅಧ್ಯಾಪಕರ ಹಕ್ಕನ್ನು ರಕ್ಷಿಸಬೇಕೆಂದು ಕುಲಪತಿಗಳಿಗೆ ಮನವಿ ಮಾಡಿದ್ದರು.
ಕುಲಪತಿಗಳು ಇದಕ್ಕೆ ಸಕಾರಾತ್ಮಕವಾಗಿ ಒಪ್ಪಿ ಹಿಂದಿನ ಆದೇಶವನ್ನು ಮಾರ್ಪಡಿಸಿ ಪದೋನ್ನತಿ ಹೊಂದಿದ ದಿನಾಂಕದಿಂದಲೇ ಅಧ್ಯಾಪಕರುಗಳಿಗೆ ಆರ್ಥಿಕ ಸೌಲಭ್ಯವನ್ನು ವಿಸ್ತರಿಸಲು ಅನುಮೋದನೆ ನೀಡಿದರು. ಈ ಅನುಮೋದನೆಗೆ ಇತರ ಎಲ್ಲಾ ಸಿಂಡಿಕೇಟ್ ಸದಸ್ಯರು ಒಮ್ಮತದಿಂದ ಸಕಾರಾತ್ಮಕವಾಗಿ ಒಪ್ಪಿಗೆ ನೀಡಿ ಅನುಮೋದನೆ ನೀಡಿದರು.
ಈ ನಿರ್ಣಯದಿಂದ ಮೈಸೂರು ವಿಶ್ವವಿದ್ಯಾನಿಲಯದ ಎಲ್ಲಾ ಅಧ್ಯಾಪಕರುಗಳು ಹರ್ಷಗೊಂಡಿದ್ದು ಇದರ ನಿಮಿತ್ತ ಈ ಸಂಘದ ಅಧ್ಯಕ್ಷರಾದ ಪ್ರೊ. ಜಿ. ವೆಂಕಟೇಶ್ ಕುಮಾರ್ ಅವರು ಡಾ. ಚೈತ್ರ ನಾರಾಯಣ್ ರವರನ್ನು ಖುದ್ದಾಗಿ ಭೇಟಿ ಮಾಡಿ ಸಂಘದ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
Key words: Syndicate –Approves- Proposals -Increase Economic Facilitation -Mysore university- Dr. Chaitra Narayan