ಬೆಂಗಳೂರು,ನವೆಂಬರ್,06,2020(www.justkannada.in) : ಒಂದನೇ ತರಗತಿಯಿಂದಲ್ಲ, ಅಂಗನವಾಡಿ ಹಂತದಿಂದಲೇ ಮಕ್ಕಳಿಗೆ ವ್ಯವಸ್ಥಿತವಾದ ಶಿಕ್ಷಣ ನೀಡಬೇಕಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾದ ನಂತರ ಇದೆಲ್ಲ ರಾಜ್ಯದಲ್ಲಿ ಕಾರ್ಯರೂಪಕ್ಕೆ ಬರುತ್ತದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ಬೆಂಗಳೂರಿನ ಮಲ್ಲೇಶ್ವರದಲ್ಲಿ ಶುಕ್ರವಾರ ಡಾ.ಸಿ.ಎನ್.ಅಶ್ವತ್ಥನಾರಾಯಣ ಪ್ರತಿಷ್ಠಾನ ಹಾಗೂ ಅಕಾಡೆಮಿ ಆಫ್ ಕ್ರಿಯೇಟಿವ್ ಲರ್ನಿಂಗ್ ವತಿಯಿಂದ ಅಂಗನವಾಡಿ ಶಿಕ್ಷಕಿಯರ ತರಬೇತಿಯ ಮುಕ್ತಾಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಆರು ವರ್ಷದ ಮಗುವಿಗೆ 13 ಭಾಷೆಗಳ ಕಲಿಯುವ ಸಾಮರ್ಥ್ಯವಿದೆ
ಅಂಗನವಾಡಿ ಹಂತದಲ್ಲಿಯೇ ಮಕ್ಕಳಿಗೆ ಭಾಷೆ ಸೇರಿದಂತೆ ಬಹುವಿಷಯಗಳ ಕಲಿಕೆಯ ಶಕ್ತಿ ಹೆಚ್ಚಾಗಿರುತ್ತದೆ. ಒಂದು ಅಂದಾಜಿನ ಪ್ರಕಾರ ನಾಲ್ಕರಿಂದ ಆರು ವರ್ಷದ ಮಗುವಿಗೆ ಹದಿಮೂರು ಭಾಷೆಗಳನ್ನು ಕಲಿಯುವ ಸಾಮರ್ಥ್ಯವಿರುತ್ತದೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟು ಪುಟ್ಟ ಮಕ್ಕಳಿಗೆ ಬೋಧನೆ ಮಾಡಬೇಕಿದೆ ಎಂದರು.
ಮಕ್ಕಳಿಗೆ ಶೈಕ್ಷಣಿಕವಾಗಿ ಗಟ್ಟಿ ತಳಪಾಯ ಬೀಳುವ ಅಗತ್ಯವಿದೆ
ನಮ್ಮಲ್ಲಿ ಈಗ ಅಂಗನವಾಡಿಯಲ್ಲಿ ವ್ಯವಸ್ಥಿತ ಔಪಚಾರಿಕವಾಗಿ ಶಿಕ್ಷಣ ನೀಡುವ ವ್ಯವಸ್ಥೆ ಈವರೆಗೆ ಇರಲಿಲ್ಲ. ಇದು ಮುಂದೆ ಈ ವ್ಯವಸ್ಥೆ ಆಮೂಲಾಗ್ರವಾಗಿ ಬದಲಾಗಲಿದೆ. ಆರಂಭದ ಹಂತದಲ್ಲಿಯೇ ಮಕ್ಕಳಿಗೆ ಶೈಕ್ಷಣಿಕವಾಗಿ ಗಟ್ಟಿ ತಳಪಾಯ ಬೀಳುವ ಅಗತ್ಯವಿದೆ. ಈ ಬಗ್ಗೆ ಸರಕಾರವೂ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತದೆ ಎಂದು ಹೇಳಿದರು.
ಅಕಾಡೆಮಿ ಆಪ್ ಕ್ರಿಯೇಟಿವ್ ಚೇರ್ಮನ್ ಡಾ.ಗುರುರಾಜ ಕರ್ಜಗಿ, ಡಾ.ಸಿ.ಎನ್.ಅಶ್ವತ್ಥನಾರಾಯಣ ಪ್ರತಿಷ್ಠಾನ ಅಧ್ಯಕ್ಷ ಡಾ.ಜಯಪ್ರಕಾಶ್ ಶೆಟ್ಟಿ ಕೂಡ ಅಂಗನವಾಡಿ ಶಿಕ್ಷಕಿಯರನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ತರಬೇತಿಯಲ್ಲಿ ಪಾಲ್ಗೊಂಡಿದ್ದ ಎಲ್ಲ ಅಂಗನವಾಡಿ ಶಿಕ್ಷಕಿಯರಿಗೂ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.
key words : Systematic-education-Anganwadi-level-DCM Dr.C.N.Ashwaththanarayana