ಅಕ್ರಮ ಭೂ ಮಂಜೂರಾತಿ ಅರೋಪ: ತಹಶೀಲ್ದಾರ್ ಸಸ್ಪೆಂಡ್

ಚಿಕ್ಕಮಗಳೂರು,ಜನವರಿ,3,2025 (www.justkannada.in):  ಅರಣ್ಯ ಜಮೀನನ್ನು ಸರ್ಕಾರದ ಪೂರ್ವಾನುಮತಿ ಪಡೆಯದೇ ಅಕ್ರಮ ಭೂ ಮಂಜೂರಾತಿ ಮಾಡಿರುವ ಆರೋಪದ ಮೇಲೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕು ತಹಶೀಲ್ದಾರ್ ಗ್ರೇಡ್-1  ಸಿ.ಎಸ್. ಪೂರ್ಣಿಮ ಅವರನ್ನ ಅಮಾನತು ಮಾಡಲಾಗಿದೆ.

ತಹಶೀಲ್ದಾರ್ ಸಿಎಸ್ ಪೂರ್ಣಿಮಾ ಅವರನ್ನ  ಸೇವೆಯಿಂದ ಅಮಾನತು ಮಾಡಿ ಕಂದಾಯ ಇಲಾಖೆ, ಸರ್ಕಾರದ  ಅಧೀನ ಕಾರ್ಯದರ್ಶಿ ಮುಕ್ತಾರ್ ಪಾಷ ಹೆಚ್.ಜಿ ಅವರು ಆದೇಶ ಹೊರಡಿಸಿದ್ದಾರೆ.

ಕಡೂರು ತಾಲ್ಲೂಕಿನಲ್ಲಿ ತಹಶೀಲ್ದಾರ್ ಗ್ರೇಡ್-1 ಸಿ.ಎಸ್. ಪೂರ್ಣಿಮ ಇವರು ಈ ಹಿಂದೆ ತರೀಕೆರೆ ತಾಲ್ಲೂಕಿನ ತಹಶೀಲ್ದಾರ್ ಗ್ರೇಡ್-1 ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಭದ್ರಾವತಿ ವಿಭಾಗದ ಲಕ್ಕವಳ್ಳಿ ವಲಯದಲ್ಲಿ ಅಧಿಸೂಚಿತ ಅರಣ್ಯ ಪ್ರದೇಶದ ರಂಗೇನಹಳ್ಳಿ ಗ್ರಾಮದ ಸರ್ವೆ ನಂ.4 ರಲ್ಲಿ ಒಟ್ಟು 8-03 ಎಕರೆ/ಗುಂಟೆ ಅರಣ್ಯ ಜಮೀನನ್ನು ಕೇಂದ್ರ ಸರ್ಕಾರದ ಪೂರ್ವಾನುಮತಿ ಪಡೆಯದೇ ಕಾನೂನು ಬಾಹಿರವಾಗಿ ಅಕ್ರಮ ಭೂ ಮಂಜೂರಾತಿ ಮಾಡಿ ಕರ್ನಾಟಕ ನಾಗರೀಕ ಸೇವಾ (ನಡತೆ)ನಿಯಮಗಳು-2021ರ ನಿಯಮ (3)ರ ಉಪ ನಿಯಮ-(1)(2)(3)(5)(6)&(7)ನ್ನು ಉಲ್ಲಂಘಿಸಿ ದುರ್ನಡತೆ/ಕರ್ತವ್ಯ ಲೋಪವೆಸಗಿ ಅಧಿಕಾರ ದುರುಪಯೋಗಪಡಿಸಿಕೊಂಡಿರುವುದರಿಂದ, ಸದರಿಯವರ ವಿರುದ್ಧ ಇಲಾಖಾ ವಿಚಾರಣೆಯನ್ನು ಬಾಕಿಯಿರಿಸಿ, ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ-10(1)(ಡಿ)ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತ್ತುಗೊಳಿಸಿ ಆದೇಶಿಸಿದೆ.

ಮುಂದುವರೆದು, ಸಿ.ಎಸ್. ಪೂರ್ಣಿಮ, ತಹಶೀಲ್ದಾರ್ ಗ್ರೇಡ್-1, ಇವರು ಅಮಾನತ್ತಿನ ಅವಧಿಯಲ್ಲಿ ಕೆ.ಸಿ.ಎಸ್.ಆರ್. ನಿಯಮ-98ರನ್ವಯ ನಿಗಧಿಪಡಿಸಿರುವ ಜೀವನಾಧಾರ ಭತ್ಯೆ ಸೆಳೆಯಲು ಅನುವಾಗುವಂತೆ ಸದರಿಯವರ ಲೀನ್ ಅನ್ನು ಚುನಾವಣಾ ತಹಶೀಲ್ದಾರ್, ಚಾಮರಾಜನಗರ ಜಿಲ್ಲೆ ಇಲ್ಲಿನ ಖಾಲಿ ಹುದ್ದೆಗೆ ವರ್ಗಾಯಿಸಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

Key words: Illegal land, grant, Tahsildar , suspended