ಚಿಕ್ಕಬಳ್ಳಾಪುರ ಮಾರ್ಚ್,31,2021(www.justkannada.in): ರೈತರ ಅನುಕೂಲಕ್ಕಾಗಿ ಬೆಳೆ ವಿಮೆ ಯೋಜನೆ ಇದೆ. ಆದರೆ ವಿಮಾ ಕಂಪೆನಿಗಳನ್ನು ನಾವು ಸಾಕುತ್ತಿದ್ದೇವೆ. ಸರಿಯಾದ ಅನುಷ್ಠಾನ ಇಲ್ಲದಿರುವುದೇ ಇದಕ್ಕೆ ಕಾರಣ. ವಿಮೆ ಹಣ ಕಟ್ಟಿರುವುದರಲ್ಲಿ ಶೇ. 50 ರಷ್ಟು ಹಣ ಸಹ ರೈತರಿಗೆ ಸಿಗುತ್ತಿಲ್ಲ. ಬೆಳೆ ಕಟಾವು ಮಾಡಿ ತೂಕಕ್ಕೆ ಹಾಕುವಲ್ಲಿ ಮೋಸ ನಡೆಯುತ್ತದೆ. ಸರ್ವೆ ನಂಬರ್ ನ ಸ್ಥಳದಲ್ಲೇ ಹೋಗಿ ಪರಿಶೀಲನೆ ಆಗಬೇಕು. ಅಧಿಕಾರಿಗಳ ಒಂದು ಸಣ್ಣ ತಪ್ಪಿನಿಂದ ರೈತರಿಗೆ ದೊಡ್ಡ ನಷ್ಟವಾಗುತ್ತದೆ. ಈ ಬಗ್ಗೆ ಎಚ್ಚರಿಕೆ ವಹಿಸಿ ಎಂದು ಯುವ ಸಬಲೀಕರಣ ಮತ್ತು ಕ್ರೀಡೆ, ಯೋಜನೆ, ಕಾರ್ಯಕ್ರಮ ಸಂಯೋಜನೆ ಹಾಗೂ ಸಾಂಖ್ಯಿಕ ಇಲಾಖೆ ಸಚಿವ ನಾರಾಯಣಗೌಡ ಹೇಳಿದರು.
ಚಿಕ್ಕಬಳ್ಳಾಪುರ ಜಿಲ್ಲಾಪಂಚಾಯತಿ ಸಭಾಂಗಣದಲ್ಲಿ ಅಧಿಕಾರಿಗಳ ಜತೆ ಸಚಿವ ನಾರಾಯಣಗೌಡ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಈ ವೇಳೆ ಮಾತನಾಡಿದ ಸಚಿವ ನಾರಾಯಣ ಗೌಡ, ರೈತರಿಗೆ ಬೆಳೆ ವಿಮೆ ಪರಿಹಾರ ದೊರೆಯುವಲ್ಲಿ ಅನ್ಯಾಯವಾಗುತ್ತಿದೆ. ಬೆಳೆ ನಷ್ಟ ಆಗಿದ್ದರೂ ಸರಿಯಾದ ಪರಿಶೀಲನೆ ನಡೆಸದೆ ವರದಿ ನೀಡುವ ಕಾರಣ ರೈತರಿಗೆ ವಿಮಾ ಹಣ ಸಿಗುತ್ತಿಲ್ಲ. ತಕ್ಷಣ ಅಧಿಕಾರಿಗಳು ರೈತರ ಜೊತೆ ಸಭೆ ನಡೆಸಿ ಇನ್ನಷ್ಟು ಮಾಹಿತಿ ಪಡೆದುಕೊಳ್ಳಬೇಕು. ಬಳಿಕ ಅಧಿಕಾರಿಗಳ ಜೊತೆ ಬೆಳೆ ವಿಮೆ ವಿಚಾರವಾಗಿಯೇ ಸಭೆ ನಡೆಸುವುದಾಗಿ ತಿಳಿಸಿದರು.
ಚಿಕ್ಕಬಳ್ಳಾಪುರದಲ್ಲಿ 2018-19 ರಲ್ಲಿ 36.84 ಕೋಟಿ ವಿಮೆ ರೈರಿಗೆ ಲಭ್ಯವಾಗಿದೆ. ಆದರೆ 2019-20 ರಲ್ಲಿ 19 ಲಕ್ಷ ರೂ. ಮಾತ್ತ ವಿಮೆ ಹಣ ರೈತರಿಗೆ ಸಿಕ್ಕಿದೆ. ಕಟ್ಟಿದ್ದು 40 ಲಕ್ಷ ರೂ. ಪ್ರೀಮಿಯಂ ಕಟ್ಟಲಾಗಿತ್ತು. ಆದರೆ ಅರ್ಧದಷ್ಟು ಹಣವೂ ರೈತರಿಗೆ ಸಿಕ್ಕಿಲ್ಲ. ದೇಶದಲ್ಲಿ ಸರಾಸರಿ 21 ಸಾವಿರ ಕೋಟಿ ರೂ. ವಿಮಾ ಕಂಪೆನಿಗೆ ಹಣ ಕಟ್ಟುತ್ತಿದ್ದಾರೆ. 9-11 ಸಾವಿರ ಕೋಟಿ ಮಾತ್ರ ರೈತರಿಗೆ ವಿಮಾ ಪರಿಹಾರ ಸಿಗುತ್ತಿದೆ. ಆದರಿಂದ ರೈತರಿಗೆ ಅನುಕೂಲ ಆಗುವಂತೆ ಕ್ರಮ ವಹಿಸಬೇಕು. ಜಿಲ್ಲೆಯಲ್ಲಿ ಅಧಿಕಾರಿಗಳು ರೈತರ ಜೊತೆ ಸಭೆ ನಡೆಸಿ, ರೈತರಿಂದ ಮಾಹಿತಿ ಪಡೆದುಕೊಳ್ಳಿ. ಬಳಿಕ ಅಧಿಕಾರಿಗಳ ಜೊತೆ ಸಭೆ ನಡೆಸುವುದಾಗಿ ಸಚಿವ ನಾರಾಯಣಗೌಡ ಹೇಳಿದರು.
ಇನ್ನೂ 21 ಕೋಟಿ. ರೂ ಅನುದಾನ ಪಿಡಿ ಖಾತೆಯಲ್ಲೇ ಇದೆ…
ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಜಿಲ್ಲೆಯಲ್ಲಿ 21 ಕೋಟಿ ರೂ. ಹಣ ಇನ್ನೂ ಪಿಡಿ ಖಾತೆಯಲ್ಲೆ ಉಳಿದಿದೆ. ಶೇ. 26 ರಷ್ಟು ಮಾತ್ರ ಕೆಲಸ ಆಗಿದೆ. ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಡಿ ಹಣ ಬಳಕೆ ಮಾಡದೆ ಬಿಟ್ಟರೆ ಆ ಹಣವನ್ನು ಹಣ ವಾಪಸ್ ಪಡೆಯುತ್ತೇವೆ. ಶಾಸಕರು ಕ್ರೀಯಾಯೋಜನೆ ನೀಡಿ ಅನುದಾನವನ್ನು ಬಳಕೆ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಎಚ್ಚರಿಕೆ ವಹಿಸಿ ಕೆಲಸ ಮಾಡಬೇಕು ಎಂದು ಹೇಳಿದರು.
ಎಇಇ ಸೇರಿದಂತೆ ಎಲ್ಲ ಅಧಿಕಾರಿಗಳು ತಾಲ್ಲೂಕುವಾರು ಪರಿಶೀಲನೆಗೆ ಹೋಗಿ ಸ್ಥಳ ಪರಿಶೀಲನೆ ನಡೆಸಬೇಕು. ಇಲ್ಲದಿದ್ದಲ್ಲಿ ಗುಣಮಟ್ಟದ ಕಾಮಗಾರಿ ಆಗೋದಿಲ್ಲ. ಕಚೇರಿಯಲ್ಲಿ ಕುಳಿತು ಕೆಲಸ ಮಾಡೋದಲ್ಲ. ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಬೇಕು ಎಂದು ಎಚ್ಚರಿಕೆ ನೀಡಿದರು.
ಜಿಲ್ಲೆಗೆ ಹೈಟೆಕ್ ಕ್ರೀಡಾ ಹಾಸ್ಟೆಲ್
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕ್ರೀಡಾ ಹಾಸ್ಟೆಲ್ ಸದ್ಯ ತಾತ್ಕಾಲಿಕ ಕಟ್ಟಡದಲ್ಲಿ ಇದೆ. ಜಿಲ್ಲಾ ಕ್ರೀಡಾಂಗಣದ ಆವರಣದಲ್ಲೇ 2.5 ಕೋಟಿ ವೆಚ್ಚದಲ್ಲಿ ಹೈಟೆಕ್ ಕ್ರೀಡಾ ಹಾಸ್ಟೆಲ್ ನಿರ್ಮಾಣ ಮಾಡಲಾಗುವುದು. ಸಿಂಥೆಟಿಕ್ ಟ್ರಾಕ್ ನಿರ್ಮಾಣಕ್ಕೆ ಖೇಲೊ ಇಂಡಿಯಾದಡಿ ಮಂಜೂರಾತಿ ಕೋರಿ 9 ಕೋಟಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಚಿವ ನಾರಾಯಣಗೌಡ ಹೇಳಿದರು.
ಶಾಸಕ ಸುಬ್ಬಾರೆಡ್ಡಿ, ಜಿ.ಪಂ ಅಧ್ಯಕ್ಷ ನರಸಿಂಹಯ್ಯ, ಜಿಲ್ಲಾಧಿಕಾರಿ ಲತಾ, ಮತ್ತಿತರ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
Key words: Take action –facilitate- crop insurance- farmers-Minister- Dr. Narayana Gowda