ಕೊಡಗು, ಅಕ್ಟೋಬರ್,17,2024 (www.justkannada.in): ಕೊಡಗಿನ ಭಾಗಮಂಡಲದ ತಲಕಾವೇರಿಯಲ್ಲಿ ಇಂದು ಪವಿತ್ರ ತೀರ್ಥೋದ್ಭವವಾಗಿದ್ದು ನಾಡಿನ ಜೀವದಾತೆ ಕಾವೇರಿ ತೀರ್ಥರೂಪಿಣಿಯಾಗಿ ಉಕ್ಕಿಬಂದು ಭಕ್ತರಿಗೆ ದರ್ಶನ ನೀಡಿದ್ದಾಳೆ.
ಕಾವೇರಿ ಉಗಮಸ್ಥಾನ ತಲಕಾವೇರಿ ಉಕ್ಕಿಬಂದ ಕಾವೇರಿ ಮಾತೆಯನ್ನು ಸಾವಿರಾರು ಭಕ್ತರು ಕಣ್ತುಂಬಿಕೊಂಡಿದ್ದಾರೆ. ತುಲ ಲಗ್ನದಲ್ಲಿ 7.40 ನಿಮಿಷಕ್ಕೆ ಕಾವೇರಿ ಉಕ್ಕಿ ಬಂದಿದ್ದು, ಕೊಡವರು ಕೊಡವ ಸಾಂಪ್ರದಾಯಿಕ ಉಡುಗೆ ತೊಟ್ಟು ದೀಪ ಹಿಡಿದು ಕಾವೇರಿಗೆ ಪೂಜೆ ಸಲ್ಲಿಸಿದರು.
ಜೈ ಜೈ ಮಾತೆ ಕಾವೇರಿ ಮಾತೆ ಜೈಕಾರದ ಹರ್ಷೋದ್ಘಾರದ ನಡುವೆ ಬ್ರಹ್ಮಕುಂಡಿಕೆಯಿಂದ ಕಾವೇರಿ ಹರಿದು ಬಂದಿದ್ದು ಭಕ್ತರು ತೀರ್ಥ ಕೊಳದಲ್ಲಿ ಸ್ನಾನ ಮಾಡಿ ಪುನೀತರಾದರು.
ಕಾವೇರಿ ತೀರ್ಥೋದ್ಭವ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬೋಸರಾಜು, ಶಾಸಕರಾದ ಎ. ಎಸ್ ಪೊನ್ನಣ್ಣ, ಡಾ ಮಂತರ್ ಗೌಡ, ಸುಜಾ ಕುಶಾಲಪ್ಪ, ಸರ್ಕಾರದ ಗ್ಯಾರಂಟಿ ಯೋಜನೆ ಅನುಷ್ಟಾನ ಸಮಿತಿ ಅಧ್ಯಕ್ಷ ಧರ್ಮಜಾ ಉತ್ತಪ್ಪ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಪೊಲೀಸ್ ವರಿಷ್ಟಾಧಿಕಾರಿ ಕೆ ರಾಮರಾಜನ್, ಎಎಸ್ ಪಿ ಸುಂದರ್ ರಾಜ್ , ಹೆಚ್ಚುವರಿ ಜಿಲ್ಲಾಧಿಕಾರಿ ಐಶ್ವಯ೯ ಸೇರಿದಂತೆ ಅನೇಕರು ಭಾಗಿಯಾಗಿದ್ದರು.
Key words: Talakaveri Tirthodbhava, kodagu, devotees