ಬೆಂಗಳೂರು,ಮಾರ್ಚ್,18,2021(www.justkannada.in) : ಶಿವಮೊಗ್ಗದ ಹುಣಸೋಡಿನಲ್ಲಿ ಜಿಲೆಟಿನ್ ಸ್ಪೋಟ ಸಂಭವಿಸಿ ಒಂದು ತಿಂಗಳ ಒಳಗಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಹಿರೇನಾಗವಲ್ಲಿ ಎಂಬಲ್ಲಿನ ಕಲ್ಲು ಕ್ವಾರಿಯಲ್ಲಿ ಇನ್ನೊಂದು ಸ್ಪೋಟ ಸಂಭವಿಸಿ, 6 ಮಂದಿ ಬಡ ಕಾರ್ಮಿಕರು ಸಾವಿಗೀಡಾದರು. ಈ ಎಲ್ಲಾ 12 ಜನ ಕಾರ್ಮಿಕರ ಸಾವಿಗೆ ಯಾರು ಹೊಣೆ? ಇದನ್ನು ಸರ್ಕಾರದ ಬೇಜವಾಬ್ದಾರಿತನ ಅನ್ನದೆ ಇನ್ನೇನು ಹೇಳಬೇಕು? ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.ಅಧಿವೇಶನದಲ್ಲಿ ಈ ಕುರಿತು ಮಾತನಾಡಿದ ಅವರು, ಜನವರಿ 21ರಂದು ಶಿವಮೊಗ್ಗ ನಗರ ಸಮೀಪದ ಹುಣಸೋಡು ಎಂಬಲ್ಲಿ ಜಿಲೆಟಿನ್ ಸ್ಪೋಟಗೊಂಡು 6 ಮಂದಿ ಕಾರ್ಮಿಕರು ಸಾವಿಗೀಡಾಗಿದ್ದರು. ಈ ವಿಚಾರವನ್ನು ಹಿಂದಿನ ವಿಧಾನಸಭಾ ಅಧಿವೇಶನದಲ್ಲಿ ಪ್ರಸ್ತಾಪಿಸಿ, ಕಲ್ಲು ಗಣಿಗಾರಿಕೆ ವಿಚಾರದಲ್ಲಿ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದೆ ಎಂದರು.
ಈ ಘಟನೆಯ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆದು ಸತ್ಯಾಸತ್ಯತೆ ಹೊರಬರಬೇಕಾದರೆ ಹೈಕೋರ್ಟ್ ನ ಹಾಲಿ ನ್ಯಾಯಾಧೀಶರ ನೇತೃತ್ವದ ಸಮಿತಿ ರಚನೆ ಮಾಡಿ, ಅವರ ಮೂಲಕ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದೆ ಎಂದು ಹೇಳಿದರು.
ಹುಣಸೋಡಿನ ಅಕ್ರಮ ಗಣಿಗಾರಿಕೆಯಲ್ಲಿ ರಾಜಕೀಯ ನಾಯಕರು ಶಾಮೀಲಾಗಿರುವ ಬಗ್ಗೆ ಮಾತುಗಳು ಕೇಳಿಬಂದಿತ್ತು. ಸಿಐಡಿ ಅಥವಾ ಹಿರಿಯ ಅಧಿಕಾರಿಗಳ ತನಿಖಾ ತಂಡ ರಚಿಸಿ ಆ ಮೂಲಕ ತನಿಖೆ ಮಾಡಿಸಿದರೆ ರಾಜಕೀಯ ನಾಯಕರು ತಮ್ಮ ಪ್ರಭಾವ ಬಳಸಿ ಸತ್ಯ ಹೊರಬರೋದಕ್ಕೆ ಬಿಡಲ್ಲ ಎಂಬುದು ನನ್ನ ಉದ್ದೇಶವಾಗಿತ್ತು. ಆದರೆ, ಅಂದು ನನ್ನ ಅಭಿಪ್ರಾಯಕ್ಕೆ ಸರ್ಕಾರ ಒಪ್ಪಿರಲಿಲ್ಲ ಎಂದು ದೂರಿದರು.
ಪ್ರಾದೇಶಿಕ ಆಯುಕ್ತರ ಮೂಲಕ ತನಿಖೆ ನಡೆಸಿ, ಅವರ ವರದಿ ಆಧರಿಸಿ ಕ್ರಮಕೈಗೊಳ್ಳುತ್ತೇವೆ ಹಾಗೂ ಮುಂದಿನ ದಿನಗಳಲ್ಲಿ ಇಂತಹ ದುರ್ಘಟನೆಗಳು ನಡೆಯದಂತೆ ಕ್ರಮವಹಿಸುತ್ತೇವೆ ಎಂಬ ಭರವಸೆಯನ್ನು ಸರ್ಕಾರ ಸದನಕ್ಕೆ ನೀಡಿತ್ತು ಎಂದು ತಿಳಿಸಿದ್ದಾರೆ.
key words : tamarind-Gelatin-Hirenagavalli-Stone-quarry-explosion-12 workers-Who-responsible-death?-Former CM-Siddaramaiah