ಬ್ಯಾಂಕ್ ನೌಕರರಿಗೆ ಕನ್ನಡ ಕಲಿಸಿ; ಇಲ್ಲವೇ ಬಿಡುಗಡೆಗೊಳಿಸಿ- ಟಿ.ಎಸ್.ನಾಗಾಭರಣ ತಾಕೀತು…

ಬೆಂಗಳೂರು,ನವೆಂಬರ್,11,2020(www.justkannada.in):  ಕೆನರಾ ಬ್ಯಾಂಕ್ ಸೇರಿದಂತೆ ಕರ್ನಾಟಕದಲ್ಲಿರುವ ಬಹುತೇಕ ಬ್ಯಾಂಕ್ ಗಳು ರಾಜ್ಯ ಸರ್ಕಾರದ ಭಾಷಾನೀತಿಯನ್ನು ಉಲ್ಲಂಘಿಸುತ್ತಿದ್ದು, ಈ ಬಗ್ಗೆ ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್.ನಾಗಾಭರಣ ಅವರು ಕರ್ನಾಟಕ ರಾಜ್ಯ ಬ್ಯಾಂಕರುಗಳ (ಎಸ್.ಎಲ್.ಬಿ.ಸಿ) ಸಮಿತಿಗೆ ತಾಕೀತು ಮಾಡಿದರು.

ಭಾರತೀಯ ರಿಸರ್ವ್ ಬ್ಯಾಂಕಿನ ನಿಯಮಾವಳಿಗಳು, ನೇಮಕಾತಿ ಪ್ರಕ್ರಿಯೆ ಹಾಗೂ ಆಡಳಿತದಲ್ಲಿನ ಸಂಪೂರ್ಣ ಕನ್ನಡ ಅನುಷ್ಠಾನ ಕುರಿತು ವಿಧಾನಸೌಧದಲ್ಲಿಂದು ಜಾಲಸಂಪರ್ಕ ಸಭೆ ನಡೆಸಿದ ಅಧ್ಯಕ್ಷ ಟಿ.ಎಸ್.ನಾಗಾಭರಣ , ಬ್ಯಾಂಕುಗಳಲ್ಲಿ ಸಿ ಮತ್ತು ಡಿ ಹುದ್ದೆಯಲ್ಲಿರುವ ಕನ್ನಡ ಬಾರದ ಕನ್ನಡೇತರರ ಮೇಲೆ ಇದೂವರೆವಿಗೂ ಯಾವುದೇ ಕ್ರಮ ಕೈಗೊಂಡಿಲ್ಲದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.teach-kannada-bank-employees-r-release-ts-nagabarana

ಕನ್ನಡೇತರರು ನೇಮಕಾತಿ ಆದ 6 ತಿಂಗಳಿನಲ್ಲಿ ಕನ್ನಡವನ್ನು ಓದಲು ಮತ್ತು ಬರೆಯಲು ಕಲಿತು ಗ್ರಾಹಕರೊಂದಿಗೆ ಸ್ಥಳೀಯ ಭಾಷೆಯಲ್ಲಿ ಸಂವಹನ ನಡೆಸಬೇಕು. ಈ ಬಗ್ಗೆ ಭಾಷಾನೀತಿಯ ಆದೇಶದಲ್ಲೇ ಉಲ್ಲೇಖವಿದ್ದರೂ ನೇಮಕಾತಿ ಆಗಿ 5-6 ವರ್ಷ ಕಳೆದರೂ ಕನ್ನಡ ಕಲಿಯದ ನೌಕರರ ವಿರುದ್ಧ ಯಾವುದೇ ಕ್ರಮಕೈಗೊಂಡಿಲ್ಲ. ಆದ್ದರಿಂದ ಈಗಲಾದರೂ ಕನ್ನಡ ಬಾರದ ಅಧಿಕಾರಿಗಳಿಗೆ ಕನ್ನಡ ಕಲಿಸುವ ಕೆಲಸ ಆಗಬೇಕು, ಇಲ್ಲವೇ ಅವರನ್ನು ಬಿಡುಗಡೆಗೊಳಿಸಿ ಕನ್ನಡಿಗರನ್ನು ನೇಮಿಸಿಕೊಳ್ಳಬೇಕು ಎಂದು ಸೂಚಿಸಿದರು.

ಸ್ಥಳಿಯ ಭಾಷೆಯಲ್ಲಿ ಪರೀಕ್ಷೆ ಎದುರಿಸಲು ಸಹಕಾರಿಯಾಗುವ ನಿಟ್ಟಿನಲ್ಲಿ ನಿಯಮಾವಳಿಯನ್ನು ಬದಲಾಯಿಸುವ ಅಗತ್ಯವಿದೆ. ಕನ್ನಡದ ಮಕ್ಕಳಿಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೆಚ್ಚೆಚ್ಚು ಅವಕಾಶಗಳು ದೊರಕುವ ನಿಟ್ಟಿನಲ್ಲಿ ಪೂರಕ ಯೋಜನೆಗಳನ್ನು ಎಸ್.ಎಲ್.ಬಿ.ಸಿ.ಯು ಹಮ್ಮಿಕೊಳ್ಳಬೇಕಿದೆ. ಬ್ಯಾಂಕಿಂಗ್ ಹುದ್ದೆಗಳಿಗೆ ಆಯ್ಕೆಯಾಗಲು ಇರುವ ಮಾನದಂಡಗಳಿಗೆ ಪೂರಕವಾದ ಕೌಶಲ್ಯ ತರಬೇತಿಯನ್ನು ಅಭ್ಯರ್ಥಿಗಳಿಗೆ ನೀಡಿದಲ್ಲಿ ಕನ್ನಡಿಗರು ಆಯ್ಕೆಯಾಗಲು ಸಹಕಾರಿಯಾಗುತ್ತದೆ. ಗ್ರಾಮೀಣ ರೈತರು, ನಾಗರಿಕರೊಂದಿಗೆ ಕನ್ನಡದಲ್ಲಿ ವ್ಯವಹರಿಸಲು ಸಹಕಾರಿಯಾಗಲಿದೆ ಎಂದು ಹೇಳಿದರು.

ಮಾತು ಮುಂದುವರಿಸಿದ ಟಿ.ಎಸ್ ನಾಗಾಭರಣ, ಪ್ರಾಧಿಕಾರದಿಂದ ಎಸ್.ಎಲ್.ಬಿ.ಸಿ.ಗೆ ಬರೆಯುವ ಯಾವುದೇ ಪತ್ರಗಳಿಗೂ ಉತ್ತರ ನೀಡದೆ ಉದ್ಧಟತನ ತೋರುವುದು ಸರಿಯಲ್ಲ. ಬ್ಯಾಂಕುಗಳಲ್ಲಿ ಕನ್ನಡವನ್ನು ಬಳಸದಿರುವ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿವೆ. ಅಲ್ಲದೆ ಚಲನ್ಗಳು, ಸಾಲದ ಅರ್ಜಿನಮೂನೆಗಳು ಇಂಗಿಷ್ ಭಾಷೆಯಲ್ಲಿರುವುದರಿಂದ ರೈತರು ತುಂಬಾ ತೊಂದರೆ ಅನುಭವಿಸುತ್ತಿರುವ ಬಗ್ಗೆಯೂ ಪ್ರಾಧಿಕಾರಕ್ಕೆ ದೂರುಗಳು ದಾಖಲಾಗುತ್ತಿವೆ. ನೀವು ಮಾತ್ರ ಮಾಹಿತಿ ಕೇಳಿದರೂ ಉತ್ತರ ನೀಡದೆ ಜಾಣಕುರುಡರಂತೆ ವರ್ತಿಸುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿರು.teach-kannada-bank-employees-r-release-ts-nagabarana

ಕನ್ನಡ ಕಾಯಕ ವರ್ಷಾಚರಣೆ ವರ್ಷದಲ್ಲಿ ಯಾವುದೇ ಕಾರಣಕ್ಕೂ ನೆಪಗಳನ್ನು ಹೇಳದೆ ಶೇ.100ರಷ್ಟು ಕನ್ನಡ ಅನುಷ್ಠಾನ ಮಾಡಲು ಬದ್ಧತೆ ತೋರುವಂತೆ ತಾಕೀತು ಮಾಡಿದರು.

ಮುಖ್ಯಮಂತ್ರಿಗಳ ಇ-ಆಡಳಿತ ಸಲಹೆಗಾರರಾದ ಬೇಳೂರು ಸುದರ್ಶನ ಅವರು ಜಾಲತಾಣಗಳ ಕುರಿತು ಸಂಕ್ಷಿಪ್ತ ಮಾಹಿತಿ ನೀಡಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಕೆ.ಮುರಳಿಧರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಡಾ.ವೀರಶೆಟ್ಟಿ, ಎಸ್.ಎಲ್.ಬಿ.ಸಿ. ಖಜಾಂಚಿ ಚಂದ್ರಶೇಖರರಾವ್, ಡೆಪ್ಯೂಟಿ ಜನರಲ್ ಮ್ಯಾನೇಜರ್ ಹೆಚ್.ಎಂ.ಬಸವರಾಜು, ವಿಭಾಗೀಯ ಪ್ರಬಂಧಕರಾದ ಸಿ.ಬಸವರಾಜು, ಕನ್ನಡಪರ ಚಿಂತಕರಾದ ಡಾ.ಎಸ್.ಟಿ.ರಾಮಚಂದ್ರ, ನಾರಾಯಣ ರಾಯಚೂರು ಮತ್ತಿತರರು ಉಪಸ್ಥಿತರಿದ್ದರು.

Key words: Teach -Kannada -Bank Employees-r release – TS Nagabarana