ಮೈಸೂರು, ಅಕ್ಟೋಬರ್ 25: ಸಾರ್ವಜನಿಕ ಶಿಕ್ಷಣ ಇಲಾಖೆಯ 2019-20ನೇ ಸಾಲಿನ ಮೈಸೂರು ವಿಭಾಗದೊಳಗಿನ ಪ್ರೌಢಶಾಲಾ ಶಿಕ್ಷಕ ವೃಂದದ ಸಾಮಾನ್ಯ ವರ್ಗಾವಣೆಯಲ್ಲಿನ ಕಡ್ಡಾಯ, ಹೆಚ್ಚುವರಿ ವಲಯ ವರ್ಗಾವಣೆಗಳ ಮೇರೆಗೆ ಅಥವಾ ಸಮರ್ಪಕ ಮರು ಹಂಚಿಕೆಯ ಮೇರೆಗೆ ಜಿಲ್ಲೆಯ ಹೊರಗೆ ವರ್ಗಾವಣೆಗೊಂಡ ಶಿಕ್ಷಕರ ಸಂದರ್ಭದಲ್ಲಿನ ವರ್ಗಾವಣೆ ಪೂರ್ವದಲ್ಲಿ ಎಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೋ ಆ ಸಂಬಂಧಪಟ್ಟ ತಾಲ್ಲೂಕು, ಜಿಲ್ಲೆಯೊಳಗೆ ಸ್ಥಳ ನಿಯುಕ್ತಿ ಪ್ರಯೋಜನವನ್ನು ನೀಡುವುದಕ್ಕೆ ಖಾಲಿ ಹುದ್ದೆ ಲಭ್ಯತೆಗೊಳಪಟ್ಟು ಸ್ಥಳ ಆಯ್ಕೆ ಮಾಡಿಕೊಳ್ಳಲು ಒಂದು ಸಲದ ಕ್ರಮವಾಗಿ ವಿಶೇಷ ವರ್ಗಾವಣೆ ಕೌನ್ಸಿಲಿಂಗ್ನ್ನು ಅಕ್ಟೋಬರ್ 28 ರಂದು ನಿಗಧಿಪಡಿಸಲಾಗಿದೆ.
ಈಗಾಗಲೇ ಅಂತಿಮ ಆದ್ಯತಾ ಪಟ್ಟಿಯನ್ನು ಇಲಾಖೆಯ ವೆಬ್ಸೈಟ್ www.schooleducation.kar.nic.in ನಲ್ಲಿ ಪ್ರಕಟಿಸಲಾಗಿದೆ. ಅಂತಿಮ ಆದ್ಯತಾ ಪಟ್ಟಿಯಲ್ಲಿರುವ ಶಿಕ್ಷಕ ವೃಂದದವರ ಸ್ಥಳ ಆಯ್ಕೆಗಾಗಿ ವಿಭಾಗೀಯ ಕಾರ್ಯದರ್ಶಿಗಳು ಹಾಗೂ ಪದನಿಮಿತ್ತ ಸಹನಿರ್ದೇಶಕರ ಕಛೇರಿ, ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಮೈಸೂರು ವಿಭಾಗ, ಡಿ. ಸುಬ್ಬಯ್ಯ ರಸ್ತೆ, ಮೈಸೂರು-570024 ಇಲ್ಲಿ ಅಂತಿಮ ಆದ್ಯತಾ ಪಟ್ಟಿಯಲ್ಲಿನ ಆದ್ಯತೆಗನುಗುಣವಾಗಿ ಕೌನ್ಸಿಲಿಂಗ್ ನಡೆಸಲಾಗುವುದು.
ಸಹಶಿಕ್ಷಕರು(ಹೆಚ್ಚುವರಿ), ಸಹಶಿಕ್ಷಕರು(ಕಡ್ಡಾಯ) ಹಾಗೂ ದೈಹಿಕ ಶಿಕ್ಷಕರು ಗೇಡ್-1(ಕಡ್ಡಾಯ) ಈ ವೃಂದದ ಶಿಕ್ಷಕರಿಗೆ ಕೌನ್ಸಿಲಿಂಗ್ ಅಕ್ಟೋಬರ್ 28ರಂದು ಬೆಳಗ್ಗೆ 9:30ಕ್ಕೆ ನಡೆಯಲಿದೆ. ಕೌನ್ಸಿಲಿಂಗ್ಗೆ ಆನ್ಲೈನ್ ವರ್ಗಾವಣೆಯ ಅರ್ಜಿಯ ಪ್ರತಿ ಸಕ್ಷಮ ಪ್ರಾಧಿಕಾರದಿಂದ ಪಡೆದ ಸೇವಾ ದೃಢೀಕರಣ ಪತ್ರ (ಫೋಟೋ ಪ್ರತಿ ಸಹಿತ)ಹಾಗೂ ಶಿಕ್ಷಕರ ಮೂಲ ಐಡಿ ಕಾರ್ಡ್ ಮೂಲ ದಾಖಲೆಗಳೊಂದಿಗೆ ಹಾಜರಾಗಬೇಕು.
ಕೌನ್ಸಿಲಿಂಗ್ಗೆ ಹಾಜರಾಗುವ ಶಿಕ್ಷಕರು ಕೋವಿಡ್-19 ಇರುವುದರಿಂದ ಕಡ್ಡಾಯವಾಗಿ SOP ಪಾಲಿಸಬೇಕು. ಕೌನ್ಸಿಲಿಂಗ್ ನಡೆಯುವ ಸ್ಥಳದಲ್ಲಿ ಶಿಕ್ಷಕರು ಯಾವುದೇ ರೀತಿಯ ಅಹಿತಕರ ವರ್ತನೆ ತೋರಿದಲ್ಲಿ ನಿಯಮಾನುಸಾರ ಕ್ರಮವಹಿಸಲಾಗುವುದು. ವರ್ಗಾವಣೆ ಕೌನ್ಸಿಲಿಂಗ್ ನಡೆಯುವ ಅವರಣಕ್ಕೆ ಸಂಬಂಧಿಸಿದ ಶಿಕ್ಷಕರು ಮಾತ್ರ ಹಾಜರಾಗಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.