ಬೆಂಗಳೂರು,ಫೆ,24,2020(www.justkannada.in): ಪ್ರತಿ ಆರ್ಥಿಕ ವರ್ಷದ ಕೊನೆಯ ತ್ರೈಮಾಸಿಕ ಅವಧಿಯಲ್ಲಿ ನಿಗದಿತ ಹಣ ಹಂಚಿಕೆ/ ಬಿಡುಗಡೆ ಮಾಡದೆ, ಸರ್ಕಾರಿ ಮತ್ತು ಅರೆ ಸರ್ಕಾರಿ ನೌಕರರ ವೇತನ ಸಕಾಲದಲ್ಲಿ ಬಿಡುಗಡೆ ಆಗುತ್ತಿಲ್ಲ. ಇದರಿಂದಾಗಿ ಶಿಕ್ಷಕರ, ಉಪನ್ಯಾಸಕರು ತೊಂದರೆಗೀಡಾಗಿದ್ದು ಅದ್ದರಿಂದ ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿ ವೇತನ ಪಾವತಿಸಲು ಕ್ರಮ ಕೈಗೊಳ್ಳಬೇಕು ಎಂದು ಉನ್ನತ ಶಿಕ್ಷಣ ಸಚಿವರಿಗೆ ಮಾಜಿ ವಿಧಾನ ಪರಿಷತ್ ಸದಸ್ಯ ರಮೇಶ್ ಬಾಬು ಆಗ್ರಹಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಮಾಜಿ ಎಂಎಲ್ ಸಿ ರಮೇಶ್ ಬಾಬು, ರಾಜ್ಯ ಸರಕಾರದ ಖಜಾನೆ 2 ರ (K2) ಸಮಸ್ಯೆ ಇಲ್ಲಿಯವರೆಗೆ ಬಗೆಹರಿದಿಲ್ಲ. ಪ್ರತಿ ಆರ್ಥಿಕ ವರ್ಷದ ಕೊನೆಯ ತ್ರ್ಯಮಾಸಿಕ ಅವಧಿಯಲ್ಲಿ ನಿಗದಿತ ಹಣ ಹಂಚಿಕೆ/ ಬಿಡುಗಡೆ ಮಾಡದೆ, ಸರ್ಕಾರಿ ಮತ್ತು ಅರೆ ಸರ್ಕಾರಿ ನೌಕರರ ವೇತನ ಸಕಾಲದಲ್ಲಿ ಬಿಡುಗಡೆ ಆಗುತ್ತಿಲ್ಲ. ಬಜೆಟ್ ಅನುಮೋದನೆ ಮತ್ತು ಹಂಚಿಕೆ ಮೂಲಕ ಹಣವನ್ನು ಪ್ರತಿ ಇಲಾಖೆಗೆ ನೀಡಲಾಗುತ್ತದೆ. ಆದರೆ ಇಲಾಖಾ ಮಟ್ಟದಲ್ಲಿ K2 ಮುಖಾಂತರ ಹೊಂದಾಣಿಕೆ ಮಾಡಿಕೊಂಡು ವೇತನ ಪಾವತಿ ಮಾಡಬೇಕು. K2 ಕಾರಣಕ್ಕಾಗಿ ಶಿಕ್ಷಕರ, ಉಪನ್ಯಾಸಕರ, ಅಧ್ಯಾಪಕರ ವೇತನ ವಿಳಂಬವಾಗಿದೆ. ಪ್ರತೀ ವರ್ಷ ಜನವರಿ, ಫೆಬ್ರವರಿ ಮತ್ತು ಮಾರ್ಚ್ ತಿಂಗಳಿನಲ್ಲಿ ಈ ಸಮಸ್ಯೆ ಉಂಟಾಗುತ್ತದೆ. ಕೆಲವು ಸಲ ಮಾರ್ಚ್ ನಂತರ ಬಾಕಿ ವೇತನ ಪಾವತಿ ಮಾಡುತ್ತಾರೆ. ಇದರಿಂದಾಗಿ ನೌಕರರು, ಶಿಕ್ಷಕರು ವಿನಾಕಾರಣ ತೊಂದರೆಗೆ ಒಳಗಾಗುತ್ತಾರೆ ಎಂದು ತಿಳಿಸಿದ್ದಾರೆ.
ಇನ್ನು ಈ ಸಮಸ್ಯೆಯಿಂದಾಗಿ ರಾಜ್ಯದ ಪದವಿ ಕಾಲೇಜುಗಳ ಬಹಳ ಅಧ್ಯಾಪಕರು ಜನವರಿ ತಿಂಗಳ ವೇತನ ಇನ್ನೂ ಪಡೆದಿಲ್ಲ. ಉನ್ನತ ಶಿಕ್ಷಣ ಸಚಿವರು ಕೂಡಲೇ ಇತ್ತ ಗಮನ ಹರಿಸಿ ಆರ್ಥಿಕ ಇಲಾಖೆ ಹಾಗೂ ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿ ವೇತನ ಪಾವತಿಸಲು ಕ್ರಮ ಕೈಗೊಳ್ಳಬೇಕು. ಈ ಸಮಸ್ಯೆ ಪ್ರತಿ ವರ್ಷ ಮರುಕಳಿಸದಂತೆ ಮತ್ತು ಅಧ್ಯಾಪಕರು ಶಿಕ್ಷಣ ಚಟುವಟಿಕೆ ಬಿಟ್ಟು ವೇತನಕ್ಕಾಗಿ ಅಲೆಯದಂತೆ ಕ್ರಮ ಕೈಗೊಳ್ಳಬೇಕು ಎಂದು ರಮೇಶ್ ಬಾಬು ಒತ್ತಾಯಿಸಿದ್ದಾರೆ.
ರಾಜ್ಯ ಸರಕಾರ ಖಜಾನೆ 2 ರ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಸಿ ಪ್ರತಿ ವರ್ಷ ಸಕಾಲದಲ್ಲಿ ಶಿಕ್ಷಕರ, ಉಪನ್ಯಾಸಕರ ಹಾಗೂ ಅಧ್ಯಾಪಕರ ವೇತನ ಪಾವತಿ ಆಗಲು ವ್ಯವಸ್ಥೆ ಮಾಡಬೇಕೆಂದು ಈ ಮೂಲಕ ಕೋರುತ್ತೇನೆ. ಆದ್ಯತೆ ಮೇಲೆ ಇದನ್ನು ಪರಿಗಣಿಸಿ ಒಂದೆರೆಡು ದಿನಗಳಲ್ಲಿ ವೇತನ ಪಾವತಿ ಮಾಡಬೇಕು. ಈಗ ಶಾಲಾ ಕಾಲೇಜುಗಳಲ್ಲಿ ಪರೀಕ್ಷೆ ನಡೆಯುತ್ತಿದ್ದು ನಿಧಾನವಾದಲ್ಲಿ ಇದು ಪರೀಕ್ಷಾ ಕ್ರಮ ಹಾಗೂ ವಿದ್ಯಾರ್ಥಿಗಳ ಮೇಲೂ ಪರಿಣಾಮ ಬೀರುತ್ತದೆ. ಸರ್ಕಾರ ಈ ಸಮಸ್ಯೆ ಕೂಡಲೇ ಬಗೆಹರಿಸಲು ಈ ಮೂಲಕ ಒತ್ತಾಯಿಸುತ್ತೇನೆ ಎಂದು ರಮೇಶ್ ಬಾಬು ತಿಳಿಸಿದ್ದಾರೆ.
Key words: Teachers-lecturers- pay- delays-Former MLC- Ramesh Babu -urges -higher education- minister