ಮೈಸೂರು, ಸೆಪ್ಟೆಂಬರ್ 05, 2021 (www.justkannada.in): ಶಿಕ್ಷಕರು ಬದಲಾದ ಸಂದರ್ಭಗಳಿಗೆ ತಕ್ಕಂತೆ ಅಪ್ ಗ್ರೇಡ್ ಆಗಬೇಕು ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದರು.
ಇಂಟರ್ ಯೂನಿರ್ವಸಿಟಿ ಸೆಂಟರ್ ಫಾರ್ ಟೀಚಿರ್ಸ್ ಎಜುಕೇಷನ್ ವತಿಯಿಂದ ನಗರದ ಪ್ರಾದೇಶಿಕ ಶಿಕ್ಷಣ ಸಂಸ್ಥೆಯಲ್ಲಿ ನಡೆದ ತರ್ಕ ಕೇಂದ್ರ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಇಂದಿನ ಕಾಲಘಟ್ಟಕ್ಕೆ ಅನುಕೂಲವಾಗುವಂತೆ ಎಲ್ಲಾ ಶಿಕ್ಷಕರು ಅಪ್ ಗ್ರೇಡ್ ಆಗಬೇಕು. ತಂತ್ರಜ್ಞಾನ ಕಾಲಕ್ಕೆ ಇದು ಅವಶ್ಯ ಕೂಡ. ಹಳೆಪದ್ಧತಿ ಜೊತೆಗೆ ಹೊಸ ಕಲಿಕಾ ವಿಧಾನಗಳನ್ನು ಅಳವಡಿಸಿಕೊಳ್ಳಬೇಕಿದೆ. ಮೈಸೂರು ವಿವಿಯಲ್ಲಿ ಡಾ.ರಾಧಾಕೃಷ್ಣನ್ ಅವರು ತತ್ತ್ವಶಾಸ್ತ್ರ ವಿಷಯದಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದಾರೆ. ಅವರ ನೆನಪಿಗೆ ರಾಧಾಕೃಷ್ಣನ್ ಮ್ಯೂಸಿಯಂ ನಿರ್ಮಿಸಲಾಗಿದೆ. ತಿಂಗಳಿಗೆ ಎರಡು ಮೂರು- ಕಾರ್ಯಕ್ರಮ ಅಲ್ಲಿ ನಡೆಸಲಾಗುತ್ತಿದೆ ಎಂದರು.
ಆರ್ ಐಇ ಮೈಸೂರಿನಲ್ಲಿ ಇರುವುದೇ ಒಂದು ಭಾಗ್ಯ
ಶಿಕ್ಷಕರನ್ನು ಸೃಷ್ಟಿ ಮಾಡುವ ಸಂಸ್ಥೆ ಇದು. ಸಂಸ್ಥೆಯಲ್ಲಿ ಸಾಕಷ್ಟು ತರಬೇತಿ ಕಾರ್ಯಕ್ರಮಗಳನ್ನು ನೀಡುತ್ತಿದೆ. ಎಲ್ಲಾ ಕೋರ್ಸ್ ಗಳಿಗೆ ಇದು ಅವಶ್ಯ. ರಾಷ್ಟ್ರೀಯ ಶಿಕ್ಷಣ ನೀತಿ ದೇಶದಲ್ಲೇ ಕರ್ನಾಟಕದಲ್ಲಿ ಮೊದಲ ಬಾರಿಗೆ ಜಾರಿ ಆಗುತ್ತಿದೆ. ಮೈಸೂರು ವಿವಿ ಈ ವರ್ಷದಿಂದಲೇ ಪದವಿ ಕಾಲೇಜುಗಳಲ್ಲಿ ಆರಂಭಿಸಲಾಗುತ್ತಿದೆ. ಶಿಕ್ಷಕರು ಇಲ್ಲಿ ಪ್ರದಾನ ಪಾತ್ರ ವಹಿಸಲಿದ್ದಾರೆ. ಶಿಕ್ಷಕರು ತಾಂತ್ರಿಕ ಹಾಗೂ ಕೌಶಲ್ಯ ದೊಂದಿಗೆ ಮಕ್ಕಳಿಗೆ ಪಾಠಮಾಡಲು ಸಿದ್ಧರಾಗಬೇಕೆಂದು ಸಲಹೆ ನೀಡಿದರು.
ಭೌತಿಕ ತರಗತಿಯಂತೆ ಶಿಕ್ಷಕರು ಆನ್ಲೈನ್ ಬೋಧನೆ ಮಾಡುವಲ್ಲಿಯೂ ಕರಗತ ಮಾಡಿಕೊಳ್ಳಬೇಕು. ಎನ್ ಇಪಿ ಒಳ್ಳೆಯ ಯೋಜನೆ. ಅನುಷ್ಠಾನಕ್ಕೆ ಒಂದಷ್ಟು ಸಮಯ ಬೇಕಿದೆ. ಶಿಕ್ಷಕರು ಹಾಗೂ ಮಕ್ಕಳು ಇಬ್ಬರ ಬೆಳವಣಿಗೆಗೆ ಕಾಯಿದೆ ಸಹಕಾರಿಯಾಗಿದೆ. ಪ್ರಾಥಮಿಕ, ಉನ್ನತ ಶಿಕ್ಷಣಕ್ಕೂ ಹೆಚ್ಚು ಆದ್ಯತೆ ನೀಡಲಾಗಿದೆ ಎಂದರು. ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆರ್ ಐಇ ಪ್ರಾಂಶುಪಾಲರಾದ ಪ್ರೊ.ವೈ. ಶ್ರೀಕಾಂತ್ ಇದ್ದರು.
ಆರ್ ಐಇ ಗೂ ನನಗೂ ಭಾವನಾತ್ಮಕ ಸಂಬಂಧ
ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಮಾತನಾಡಿ,ನನಗೂ ಈ ಸಂಸ್ಥೆಗೆ ಭಾವನಾತ್ಮಕ ಸಂಬಂಧ ಇದೆ. ನನ್ನ ಬರವಣಿಗೆ ಹಾಗೂ ಬೆಳವಣಿಗೆಗೆ ಆರ್ ಐಇ ಸಹಕಾರಿ ಆಗಿತ್ತು. ನಾನು ಯಾಕೆ ತತ್ತ್ವ ಶಾಸ್ತ್ರ ಓದಿದೆ ಎಂಬುದನ್ನು ನನ್ನ ಆತ್ಮಚರಿತ್ರೆ ಭಿತ್ತಿಯಲ್ಲಿ ವಿವರಿಸಿದ್ದೇನೆ. ನಾನು ಚಿಕ್ಕ ಹುಡುಗನಾಗಿದ್ದಾಗ ನಮ್ಮೂರಿಗೆ ಪ್ಲೇಗ್ ಬರುತ್ತಿತ್ತು. ನನ್ನ ಅಣ್ಣ, ಅಕ್ಕ ಒಂದೆ ದಿನದ ಅಂತರದಲ್ಲಿ ಮೃತಪಟ್ಟರು. ನಾನು ಹೇಗೋ ಉಳಿದೆ. ಇದಾದ ಎರಡು ವರ್ಷದಲ್ಲಿ ನನ್ನ ತಾಯಿ ಕೂಡ ಪ್ಲೇಗ್ ಗೆ ಬಲಿಯಾದರು. ನಾನು ೧೫ ವರ್ಷ ಇದ್ದಾಗ ನನ್ನ ತಮ್ಮಕೂಡ ಪ್ಲೇಗ್ ನಿಂದ ಮೃತಪಟ್ಟನು.
ಹಾಗಾಗಿ ಸಾವಿನ ಬಗ್ಗೆ ನನಗೆ ಸಾಕಷ್ಟು ಪ್ರಶ್ನೆಗಳು ಮೂಡುತ್ತಿದ್ದವು. ಈ ಹಿನ್ನೆಲೆಯಲ್ಲಿ ನಾನು ತತ್ತ್ವ ಶಾಸ್ತ್ರ ಓದಲು ನಿರ್ಧರಿಸಿದೆ ಎಂದರು.