ಮೈಸೂರು,ನವೆಂಬರ್,24,2020(www.justkannada.in): ಬಿಜೆಪಿಯಲ್ಲಿ ಯಾವುದೇ ಟೀಂ ಇಲ್ಲ. ಬಾಂಬೆ ಟೀಂ, ಹಳೇ ಟೀಂ, ಹೊಸ ಟೀಂ ಎಂದೆಲ್ಲ ಇಲ್ಲ. ನಾವೆಲ್ಲರೂ ಒಂದೇ ಬಿಜೆಪಿ ಟೀಂ. ಒಂದಿಬ್ಬರು ಮಾತನಾಡಿದರೆ ಇಡೀ ಪಕ್ಷದಲ್ಲಿ ಭಿನ್ನಾಭಿಪ್ರಾಯಗಳು ಇದೆ ಎಂದಲ್ಲ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಹೇಳಿದರು.
ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, ಯಾವುದೇ ಕಾರಣಕ್ಕೂ ನಾಯಕತ್ವ ಬದಲಾವಣೆ ಇಲ್ಲ. ಬಿ.ಎಸ್.ಯಡಿಯೂರಪ್ಪ ಅವರೇ ನಮ್ಮ ಮುಖ್ಯಮಂತ್ರಿಗಳು. ಇದೆಲ್ಲ ಊಹಾಪೋಹ. ನಮಗೆಲ್ಲರಿಗೂ ಟಿಕೆಟ್ ನೀಡಿ ಸಚಿವ ಸ್ಥಾನವನ್ನು ನೀಡುವ ಮೂಲಕ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಅವರು ಕೊಟ್ಟ ಮಾತುನಂತೆ ನಡೆದವರು. ಅವರು ಎಂದಿಗೂ ಮಾತು ತಪ್ಪಿದವರಲ್ಲ ಎಂದರು.
ರೋಷನ್ ಬೇಗ್ ಕಾಂಗ್ರೆಸ್ ಒಳರಾಜಕೀಯದಿಂದ ಹೊರಬಂದವರು…
ರೋಷನ್ ಬೇಗ್ ಅವರು ಬಿಜೆಪಿಯನ್ನು ನಂಬಿ ಬಂದವರಲ್ಲ. ಐಎಂಎ ಪ್ರಕರಣದಲ್ಲಿ ಅವರನ್ನು ವಿಚಾರಣೆಗೆ ಕರೆದೊಯ್ದಿದ್ದಾರೆ. ಅವರು ಏನೂ ತಪ್ಪು ಮಾಡಿಲ್ಲ ಎಂದಾದರೆ ಹೊರಗಡೆ ಬರುತ್ತಾರೆ. ಬೇಗ್ ಅವರು ಕಾಂಗ್ರೆಸ್ ಪಕ್ಷದ ಒಳರಾಜಕೀಯದಿಂದ ಬೇಸತ್ತು ಹೊರಬಂದಿದ್ದಾರೆಯೇ ವಿನಹ ಬಿಜೆಪಿಗೋಸ್ಕರ ಬಂದಿರಲಿಲ್ಲ. ಅವರಿಗೆ ಬಿಜೆಪಿ ಯಾವುದೇ ತರಹದ ಆಶ್ವಾಸನೆ ಕೊಟ್ಟಿರಲಿಲ್ಲ. ಅವರಿಗೆ ಬೇಕಿದ್ದರೆ ಶಿವಾಜಿನಗರದಲ್ಲಿ ಪಕ್ಷ ಟಿಕೆಟ್ ಕೊಡುತ್ತಿತ್ತು ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸಂಪುಟ ವಿಸ್ತರಣೆ ಹೈಕಮಾಂಡ್ ಗೆ ಬಿಟ್ಟಿದ್ದು…
ಸಚಿವ ಸಂಪುಟ ವಿಸ್ತರಣೆ ಕುರಿತು ಪ್ರತಿಕ್ರಿಯಿಸಿದ ಸಚಿವ ಎಸ್.ಟಿ ಸೋಮಶೇಖರ್, ಸಚಿವ ಸಂಪುಟ ವಿಸ್ತರಣೆ ಹೈಕಮಾಂಡ್ ತೀರ್ಮಾನಕ್ಕೆ ಬಿಟ್ಟಿದ್ದು, ಸರ್ಕಾರ ಯಾವುದೇ ಸಮಸ್ಯೆ ಇಲ್ಲದೆ ನಡೆಯುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿವೆ ಎಂದು ಹೇಳಿದರು.
ಬಿಜೆಪಿ ಸಭೆಯಾಗಿದ್ದು, ಒಟ್ಟು 6 ವಿಭಾಗಗಳನ್ನು ಮಾಡಲಾಗಿದ್ದು, ಮೈಸೂರು ವಿಭಾಗಕ್ಕೆ ಕಂದಾಯ ಸಚಿವರಾದ ಆರ್.ಅಶೋಕ್ ಅವರನ್ನು ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ. ಅವರ ಜೊತೆಗೆ ನಾನು ಹಾಗೂ ಸಚಿವರಾದ ನಾರಾಯಣಗೌಡ ಅವರೂ ಇದ್ದೇವೆ ಎಂದು ಸಚಿವರಾದ ಸೋಮಶೇಖರ್ ತಿಳಿಸಿದರು.
Key words: Team – BJP-Roshan Beg- comes out – Congress- inter – Minister- ST Somashekhar