ಮೈಸೂರು,ಮೇ,17,2022(www.justkannada.in): ಸಿಎಫ್ ಟಿಆರ್ ಐ ಹಾಗೂ ಲಘು ಉದ್ಯೋಗ ಭಾರತ್ ಸಂಯುಕ್ತಾಶ್ರಯದಲ್ಲಿ ಮೇ 19ರಿಂದ ಮೂರು ದಿನಗಳ ಕಾಲ ಟೆಕ್ ಭಾರತ್-2022ರ ಮೂರನೇ ಅವೃತ್ತಿಯ ಸಮ್ಮೇಳನ ನಡೆಯಲಿದೆ ಎಂದು ಸಿಎಫ್ ಟಿಆರ್ ಐ ನಿರ್ದೇಶಕರಾದ ಡಾ. ಶ್ರೀದೇವಿ ಅನ್ನಪೂರ್ಣ ಸಿಂಗ್ ತಿಳಿಸಿದರು.
ಈ ಕುರಿತು ಸುದ್ಧಿಗೋಷ್ಠಿ ನೀಡಿ ಮಾಹಿತಿ ನೀಡಿದ ಅವರು, ಸಿಎಫ್ಟಿಆರ್ ಐ ಕೇಂದ್ರದ ಆವರಣದಲ್ಲಿ ಈ ಸಮ್ಮೇಳನ ನಡೆಯಲಿದ್ದು, ಸಮ್ಮೇಳನವನ್ನು ಮೇ 19ರಂದು ಬೆಳಿಗ್ಗೆ 10.30ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟನೆ ಮಾಡಲಿದ್ದಾರೆ. ಕೇಂದ್ರದ ಆಹಾರ ಸಂಸ್ಕರಣ ಉದ್ಯಮ ಖಾತೆ ಸಚಿವ ಪಶುಪತಿ ಕುಮಾರ್ ಪರಾಸ್, ಕೇಂದ್ರದ ಕೃಷಿ ಖಾತೆಯ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ, ಕೈಲಾಸ್ ಚೌಧರಿ, ಕೃಷಿ ಸಚಿವ ಬಿ.ಸಿ.ಪಾಟೀಲ್, ಸಂಸದ ಪ್ರತಾಪ್ ಸಿಂಹ ಭಾಗವಹಿಸಲಿದ್ದಾರೆ. ಸಮ್ಮೇಳನದಲ್ಲಿ ವಿಚಾರಗೋಷ್ಠಿಗಳಿಗೆ ನೋಂದಣಿಯಾಗಿರುವವರಿಗೆ ಮಾತ್ರ ಪ್ರವೇಶವಿದೆ ತಿಳಿಸಿದರು.
ಸಮ್ಮೇಳನ ಪ್ರಯುಕ್ತ ಕೃಷಿ ತಂತ್ರಜ್ಞಾನ, ಆಹಾರ ಸಂಸ್ಕರಣೆ, ಆಹಾರ ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರದರ್ಶನ ನಡೆಯಲಿದ್ದು, ಸಾರ್ವಜನಿಕರಿಗೆ ಮುಕ್ತ ಅವಕಾಶವಿದೆ. ಪ್ರದರ್ಶನದಲ್ಲಿ 100ಕ್ಕೂ ಹೆಚ್ಚು ಕಂಪೆನಿಗಳು ಮಳಿಗೆಗಳನ್ನು ತೆರೆಯಲಿವೆ. ಡ್ರೋನ್ ತಂತ್ರಜ್ಞಾನದ ಮೂಲಕ ಬೆಳೆಗಳಿಗೆ ಔಷಧ ಸಿಂಪಡಣೆ ಹಾಗೂ ಬೆಳೆಗಳ ಇನ್ನಿತರ ಅಂಶಗಳನ್ನು ತಿಳಿದುಕೊಳ್ಳುವ ವಿಚಾರವಾಗಿ ಪ್ರಾತ್ಯಕ್ಷಿಕೆ ಇರಲಿದೆ ಎಂದರು.
ಸಮ್ಮೇಳನದಲ್ಲಿ ರೈತರಿಗೆ ಉಪನ್ಯಾಸಗಳ ಜತೆಗೆ ಯಶಸ್ವಿ ಉದ್ಯಮಿಗಳ ಜತೆ ಸಂವಾದ ಕಾರ್ಯಕ್ರಮವನ್ನೂ ಆಯೋಜಿಸಲಾಗಿದ್ದು, ಆಹಾರ ಉದ್ಯಮದಲ್ಲಿ ಹೆಸರುವಾಸಿಯಾಗಿರುವ ಚಂದರ್ ಬಾಲ್ಜಿ, ಪರೂಲ್ ಸೋನಿ, ಕೆ.ಎನ್.ವಾಸುದೇವ ಅಡಿಗ ಮತ್ತಿತರರು ಭಾಗವಹಿಸಿ ತಾವು ಎಂತಹ ಪದಾರ್ಥವನ್ನು ನಿರೀಕ್ಷೆ ಮಾಡುತ್ತವೆ ಎನ್ನುವುದರ ಬಗ್ಗೆ ಮಾಹಿತಿ ನೀಡುತ್ತಾರೆ. ಆದೇ ರೀತಿ ಅಂತಾರಾಷ್ಟ್ರೀಯ ಮಟ್ಟದ ಅಮೆಜಾನ್,ನೆದರ್ಲ್ಯಾಂಡ್ ಮೂಲದ ಉದ್ಯಮಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಡಾ. ಶ್ರೀದೇವಿ ಅನ್ನಪೂರ್ಣ ಸಿಂಗ್ ಮಾಹಿತಿ ನೀಡಿದರು.
ಈ ಸಮ್ಮೇಳನದ ಅಂಗವಾಗಿ ಸಿಎಫ್ ಟಿ ಆರ್ ಐನ 22 ತಂತ್ರಜ್ಞಾನಗಳ ಮಾಹಿತಿಯನ್ನು ಅಂತರ್ಜಾಲಕ್ಕೆ ಉಚಿತವಾಗಿ ಸೇರ್ಪಡೆ ಮಾಡಲಾಗುತ್ತದೆ. ರಾಗಿ ಆಧಾರಿತ ಬ್ರೆಡ್ ತಯಾರಿಕೆ, ಕುಚುವಲಕ್ಕಿ ತಂತ್ರಜ್ಞಾನ ಸೇರಿದಂತೆ ಇತರೆ ತಂತ್ರಜ್ಞಾನಗಳು ಸಾರ್ವಜನಿಕರಿಗೆ ಮುಕ್ತವಾಗಿ ದೊರೆಯಲಿವೆ. ಅಲ್ಲದೇ ಈ ತಂತ್ರಜ್ಞಾನಗಳ ಬಗ್ಗೆ ಇನ್ನೂ ಹೆಚ್ಚಿನ ವಿವರಣೆಗಳನ್ನು ಬಯಸಿದರೇ ಅಂತಹವರಿಗೆ ನಮ್ಮ ಕೇಂದ್ರದ ಮೂಲಕ ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಸಲಾಗುತ್ತದೆ ಎಂದು ತಿಳಿಸಿದರು. ಸಿಎಫ್ಟಿಆರ್ಐನ ದೋಸೆ- ಇಡ್ಲಿ ತಯಾರಿಕಾ ತಂತ್ರಜ್ಞಾನವು ಸುಮಾರು 300 ಕೋಟಿ ರೂಪಾಯಿ ವಹಿವಾಟು ನಡೆಸಿದೆ. 200ಕ್ಕೂ ಹೆಚ್ಚು ಸ್ಟಾರ್ಟ್ ಅಪ್ಗಳು ಈ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಉದ್ಯಮ ಸ್ಥಾಪನೆ ಮಾಡಿ ಯಶ್ವಸಿಯಾಗಿವೆ ಎಂದು ತಿಳಿಸಿದರು.
ಸುದ್ಧಿಗೋಷ್ಠಿ ವೇಳೆ ಲಘು ಉದ್ಯೋಗ ಭಾರತಿ ಸಂಸ್ಥೆಯ ಛಾಯ ನಂಜಪ್ಪ, ಸಿ.ಎನ್.ಭೋಜರಾಜ್, ಡಾ.ವಿ.ಬಿ.ಸತ್ಯೇಂದ್ರರಾವ್ ಉಪಸ್ಥಿತರಿದ್ದರು.
Key words: Tech Bharat -2022 -Third Annual -Conference -CFTRI – May 19-mysore