ಬೆಂಗಳೂರು, ಸೆಪ್ಟೆಂಬರ್ 17,2021 (www.justkannada.in): ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ದೊಡ್ಡ ಮೊತ್ತವನ್ನು ಖರ್ಚು ಮಾಡಿ 25 ರಸ್ತೆಗಳಲ್ಲಿ ಕಸಗುಡಿಸುವ ಯಂತ್ರಗಳನ್ನು ಖರೀದಿಸಿದ ಮೂರು ವರ್ಷಗಳ ನಂತರ, ಈಗ ಆ ಪೈಕಿ ಬಹುಪಾಲು ಯಂತ್ರಗಳು ಟೆಂಡರ್ ದಾಖಲೆಗಳಲ್ಲಿ ನಮೂದಿಸಿದ್ದಂತೆ ಇಲ್ಲದೆ, ತಾಂತ್ರಿಕ ದೋಷಗಳಿಂದ ಕೂಡಿದೆ ಎಂಬ ವಿಷಯ ಬಹಿರಂಗಗೊಂಡಿದೆ. ಮಾಹಿತಿ ಹಕ್ಕು ಕಾಯ್ದೆ (ಆರ್ಟಿಐ) ಅಡಿ ಕೇಳಲಾಗಿದ್ದಂತಹ ಒಂದು ಪ್ರಶ್ನೆಗೆ ಅನಿವಾರ್ಯವಾಗಿ ಉತ್ತರಿಸಬೇಕಾದಂತಹ ಪರಿಸ್ಥಿತಿಯಡಿ ಈ ಕಣ್ಣಿಗೆ ರಾಚುವ ಲೋಪಗಳು ಕಂಡು ಬಂದಿವೆ.
ಈ ಯಂತ್ರಗಳನ್ನು ತಯಾರಿಸುವ ಕಂಪನಿ ಎಸಗಿರುವ ಗಂಭೀರ ಲೋಪಗಳ ಪೈಕಿ ಮತ್ತೊಂದು ಲೋಪವೆಂದರೆ ಈ ಯಂತ್ರಗಳು ನಿಗದಿತ ಕನಿಷ್ಠ ೫ ಕ್ಯೂಬಿಕ್ ಮೀಟರ್ಗಿಂತ ಕಡಿಮೆ ಧೂಳು ಸಂಗ್ರಹಿಸುವ ಸಾಮರ್ಥ್ಯವನ್ನು ಹೊಂದಿವೆ. ಮೇಲಾಗಿ ಅಧಿಕಾರಿಗಳು ಪತ್ತೆ ಹಚ್ಚಿರುವಂತೆ ಈ ಯಂತ್ರಗಳ ಪೈಕಿ ಕೆಲವು ಯಂತ್ರಗಳ ಶೇಖರಣಾ ಸಾಮರ್ಥ್ಯ ೩ ಕ್ಯೂಬಿಕ್ ಮೀಟರ್ಗಿಂತ ಕಡಿಮೆ ಇದೆ. ಇದರಿಂದಾಗಿ ಈ ಯಾಂತ್ರಿಕ ವಆಹನಗಳನ್ನು ರಸ್ತೆಗಳಲ್ಲಿ ಕಸಗುಡಿಸುವ ಕೆಲಸಕ್ಕಿಂತ ಹೆಚ್ಚಾಗಿ ಕೇವಲ ಕೊಳಚೆ ಹಾಗೂ ಕಸವನ್ನು ವಿಲೇವಾರಿ ಸ್ಥಳಕ್ಕೆ ಸಾಗಿಸಲು ಬಳಸಲಾಗುತ್ತಿರುವ ವಿಷಯ ಬಹಿರಂಗಗೊಂಡಿದೆ.
ಇಲಾಖಾ ವಿಚಾರಣೆಯ ಸಮಯದಲ್ಲಿ ಗೋಚರವಾಗಿರುವ ಮತ್ತೊಂದು ಲೋಪವೆಂದರೆ ಈ ಯಂತ್ರಗಳ ತೂಕದಲ್ಲಿ ಹೊಂದಾಣಿಕೆ ಇಲ್ಲದಿರುವುದು. ಕಂಪನಿಯ ಪ್ರಕಾರ ಈ ಯಂತ್ರದ ತೂಕ ೬,೦೦೦ ಅನ್ ಲ್ಯಾಡೆನ್ ತೂಕವಿರಬೇಕು. ಆದರೆ ಈ ಯಂತ್ರಗಳ ತೂಕ ಅಂದಾಜು ೧೦,೫೦೦ ಕೆಜಿ ಇರುವುದನ್ನು ಕಂಡು ಅಧಿಕಾರಿಗಳೇ ಹೌಹಾರಿದ್ದಾರೆ. ಅಧಿಕಾರಿಗಳ ಪ್ರಕಾರ ಈ ಕಸ ಗುಡಿಸುವ ಯಂತ್ರಗಳ ವಾಸ್ತವ ಲೋಡ್ ಹೊರುವ ಸಾಮರ್ಥ್ಯದ ಕುರಿತು ಗಂಭೀರವಾದ ಅನುಮಾನಗಳಿವೆಯಂತೆ.
ಈ ಲೋಪಗಳು ಗಮನಕ್ಕೆ ಬಂದ ನಂತರ, ಬಿಬಿಎಂಪಿಯ ಮುಖ್ಯ ಆಯುಕ್ತ ಗೌರವ ಗುಪ್ತಾ ಅವರು ಕಳೆದ ಮಂಗಳವಾರ ಸ್ವತಃ ಈ ಯಂತ್ರಗಳನ್ನು ಪರಿಶೀಲಿಸಲು ನಿರ್ಧರಿಸಿದರಂತೆ. ಈ ಯಂತ್ರಗಳ ಶೇಖರಣಾ ಸಾಮರ್ಥ್ಯ, ವಾಸ್ತವ ಸಾಮರ್ಥ್ಯದ ಹೋಲಿಕೆಯಲ್ಲಿ ಬಹಳ ವ್ಯತ್ಯಾಸವಿರುವುದು ಕಂಡು ಬಂದ ನಂತರ ಆಯುಕ್ತರು ಈ ಯಂತ್ರಗಳ ಎಲ್ಲಾ ತಾಂತ್ರಿಕ ಅಂಶಗಳ ಕುರಿತು ಕೂಲಂಕುಷವಾದ ತಪಾಸಣೆಯನ್ನು ನಡೆಸುವಂತೆ ಆದೇಶಿಸಿದರು.
ಈ ಬೆಳವಣಿಗೆಯ ನಂತರ ಬಿಬಿಎಂಪಿ, ಇಂತಹ ಕಳಪೆ ಗುಣಮಟ್ಟದ ಯಂತ್ರಗಳನ್ನು ಸರಬರಾಜು ಮಾಡಿರುವಂತಹ ನವ ದೆಹಲಿ ಮೂಲದ ಟಿಪಿಎಸ್ ಇಸ್ಟ್ರಾಸ್ಟಕ್ಚರ್ ಲಿ. ಗೆ ನೋಟಿಸ್ ನೀಡಿದೆ. ಈ ನೋಟಿಸ್ ನಲ್ಲಿ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸುವ ಎಚ್ಚರಿಕೆಯನ್ನು ನೀಡಿದ್ದು, ಕಂಪನಿ ಸರಬರಾಜು ಮಾಡಿರುವ ಕೆಲವು ಯಂತ್ರಗಳು ನಮೂದಿಸಿರುವಂತೆ ಆರು ಸಿಲಿಂಡರ್ಗಳ ಸ್ಥಾನದಲ್ಲಿ ಕೇವಲ ನಾಲ್ಕು ಸಿಲಿಂಡರ್ ಗಳಿರುವುದು ಹಾಗೂ ಕೆಲವು ವಾಹನಗಳು ಟೆಂಡರ್ನಲ್ಲಿ ನಮೂದಿಸಿದ್ದಂತೆ ಬಿಎಸ್- IV ಗುಣಮಟ್ಟ ಇಲ್ಲದಿರುವ ಕುರಿತಾಗಿಯೂ ವಿವರಿಸಲಾಗಿದೆ.
ಈ ಕುರಿತು ಮಾತನಾಡಿರುವ ಬಿಬಿಎಂಪಿಯ ಮಾಜಿ ಕಾರ್ಪೊರೇಟರ್ ಎನ್.ಆರ್. ರಮೇಶ್ ಅವರು, ರೂ.೭೦ ಲಕ್ಷಕ್ಕೆ ಲಭ್ಯವಾಗುತ್ತಿದ್ದಂತಹ ಈ ವಾಹನಗಳನ್ನು ರೂ.೧.೩ ಕೋಟಿ ವೆಚ್ಚದಲ್ಲಿ ಖರೀದಿಸಲು ಬಿಬಿಎಂಪಿ ಶತಾಯಗತಾಯ ಖರೀದಸಲೇಬೇಕು ಎಂದು ನಿರ್ಧರಿಸಿತ್ತು. “ಇದು ಕೇವಲ ತೆರಿಗೆ ಪಾವತಿಸುವವರ ಹಣದ ವ್ಯರ್ಥವಷ್ಟೇ ಅಲ್ಲ, ಜೊತೆಗೆ ಕಸ ಗುಡಿಸುವ ಸೇವೆಗಳಲ್ಲಿ ಉದ್ಭವಿಸಿರುವ ತೊಂದರೆಯಿಂದಾಗಿ ನಾಗರಿಕರು ಧೂಳು ಹಾಗೂ ವಾಯು ಮಾಲಿನ್ಯದಿಂದಲೂ ತೊಂದರೆಗಳನ್ನು ಅನುಭವಿಸುವಂತಾಗಿದೆ,” ಎಂದರು. ಈ ಕುರಿತು ಸ್ಪಷ್ಟನೆಯನ್ನು ಪಡೆಯಲು ಟಿಪಿಎಸ್ ಇಸ್ಟ್ರಾಸ್ಟಕ್ಚರ್ ಲಿ. ಕಂಪನಿಯನ್ನು ಸಂಪರ್ಕಿಸುವ ಮಾಧ್ಯಮದ ಪ್ರಯತ್ನಕ್ಕೆ ಯಾವುದೇ ಪ್ರತಿಕ್ರಿಯೆ ಲಭಿಸಿಲ್ಲ.
ಸುದ್ದಿ ಮೂಲ: ಬೆಂಗಳೂರ್ ಮಿರರ್
Key words: Technical -flaws – modern- garbage -sweepers -bought – BBMP