ತೆಲಂಗಾಣ:ಆ-17:(www.justkannada.in) ಮೊನ್ನೆ ಸ್ವಾತಂತ್ರ್ಯ ದಿನಾಚರಣೆಯಂದು ಬೆಸ್ಟ್ ಕಾನ್ಸ್ ಟೇಬಲ್ ಪ್ರಶಸ್ತಿಯನ್ನು ಸ್ವೀಕರಿಸಿದ್ದ ಪೊಲೀಸ್ ಓರ್ವ ಮರುದಿನವೇ 17 ಸಾವಿರ ರೂ ಲಂಚ ಪಡೆದು ಸಿಕ್ಕಿಬಿದ್ದಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಹೌದು. ಇದೆಂತಹ ಕರ್ಮ ನೋಡಿ. ತೆಲಂಗಾಣದ ಮಹಬೂಬನಗರದ ಜಿಲ್ಲೆಯ ಐಟಿ ಟೌನ್ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾನ್ಸ್ ಟೇಬಲ್ ಪಲ್ಲೆ ತಿರುಪತಿ ರೆಡ್ಡಿ ಎನ್ನುವವರೇ ಉತ್ತಮ ಕಾನ್ಸ್ ಟೇಬಲ್ ಪ್ರಶಸ್ತಿ ಪಡೆದು, 24 ಗಂಟೆಯೊಳಗೆ ಲಂಚಪಡೆದು ಸಿಕ್ಕಿಬಿದ್ದಾತ.
ಪಲ್ಲೆ ತಿರುಪತಿ ರೆಡ್ಡಿ ಅವರಿಗೆ ಅವರ ಕಾರ್ಯದಲ್ಲಿ ತೋರಿದ ಶ್ರದ್ಧೆ ಮತ್ತು ಕಠಿಣ ಪರಿಶ್ರಮವನ್ನು ಗುರುತಿಸಿ ಆಗಸ್ಟ್ 15 ರಂದು ಬೆಸ್ಟ್ ಕಾನ್ಸ್ ಟೇಬಲ್ ಪ್ರಶಸ್ತಿಯನ್ನು ತೆಲಂಗಾಣದ ಅಬಕಾರಿ ಸಚಿವ ಶ್ರೀನಿವಾಸ್ ಗೌಡ್ ಪ್ರದಾನ ಮಾಡಿದ್ದರು.
ಪ್ರಶಸ್ತಿ ಸ್ವೀಕರಿಸಿದ ಮರುದಿನ ಅಂದರೆ ಆ. 16 ರಂದು ಪಲ್ಲೆ ತಿರುಪತಿ ರೆಡ್ಡಿ, ರಮೇಶ್ ಎಂಬುವವರಿಂದ 17 ಸಾವಿರ ರೂ. ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಪರವಾನಿಗೆ ಇದ್ದರೂ ಕೂಡಾ ಮರಳು ಸಾಗಣೆ ಮಾಡುತ್ತಿದ್ದ ರಮೇಶ್ ಎಂಬವರಿಗೆ ಲಂಚ ಕೊಡುವಂತೆ ರೆಡ್ಡಿ ಒಂದು ವರ್ಷದಿಂದ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.
ರೆಡ್ಡಿಯ ಕಿರುಕುಳದಿಂದ ಬೇಸತ್ತ ರಮೇಶ್ ತೆಲಂಗಾಣ ಎಸಿಬಿಗೆ ದೂರು ನೀಡಿದ್ದರು. ದೂರು ಆಧರಿಸಿ ಕಾರ್ಯಾಚರಣೆ ನಡೆಸಿದ ಎಸಿಬಿ ತಂಡ ರೆಡ್ಡಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಇದೀಗ ಬಂಧಿತ ಕಾನ್ಸ್ ಟೇಬಲ್ ರೆಡ್ಡಿಯನ್ನು ಎಸಿಬಿ ಕೋರ್ಟ್ ಗೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.