ಮೈಸೂರು,ಫೆಬ್ರವರಿ,29,2024(www.justkannada.in): ಬೇಸಿಗೆ ಆರಂಭಕ್ಕೂ ಮೊದಲೇ ತಾಪಮಾನ ಏರಿಕೆಯಾಗಿದ್ದು ಈ ವೇಳೆ ಉಂಟಾಗುವ ಕಾಡ್ಗಿಚ್ಚನ್ನು ತಡೆಯಲು ಅರಣ್ಯ ಇಲಾಖೆ ವ್ಯಾಪಕ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ.
ಬಿರುಬೇಸಿಗೆಯಿಂದ ಅರಣ್ಯ ಪ್ರದೇಶದಲ್ಲಿ ಜಲಮೂಲಗಳು ಬತ್ತುತ್ತಿರುವುದರಿಂದ ಪರ್ಯಾಯ ಕ್ರಮಕ್ಕೆ ಅರಣ್ಯ ಇಲಾಖೆ ಮುಂದಾಗಿದೆ. ಈ ಕುರಿತು ಮಾತನಾಡಿ ಮಾಹಿತಿ ನೀಡಿದ ಮೈಸೂರು ವಲಯ ಅರಣ್ಯ ಸಂರಕ್ಷಣಾಧಿಕಾರಿ ಡಾ ಕೆ ಎನ್ ಬಸವರಾಜು, ಕಳೆದ ವರ್ಷ ಶೇಕಡಾ 30% ರಷ್ಟು ಮಳೆ ಕೊರತೆಯಾಗಿದೆ. ಪರಿಣಾಮ ಬೇಸಿಗೆ ಆರಂಭಕ್ಕೂ ಮೊದಲೇ ಅರಣ್ಯ ಪ್ರದೇಶದಲ್ಲಿ ಮರಗಿಡಗಳು ಒಣಗಿ ನಿಂತಿವೆ. ಹಾಗಾಗಿ ಕಾಡ್ಗಿಚ್ಚು ನಿಯಂತ್ರಣಕ್ಕಾಗಿ ಅರಣ್ಯ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಪ್ರವಾಸಿಗರು ಕೂಡ ಈ ಬಗ್ಗೆ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಅರಣ್ಯ ಪ್ರದೇಶದಲ್ಲಿ ಧೂಮಪಾನ ಮಾಡಬಾರದು, ಬೆಂಕಿಪೊಟ್ಟಣ ಕೊಂಡೊಯ್ಯಬಾರದು. ಕಾಡಂಚಿನ ಗ್ರಾಮಗಳ ರೈತರು ಕೂಡ ಜಮೀನಿನಲ್ಲಿ ಕೃಷಿ ತ್ಯಾಜ್ಯಗಳಿಗೆ ಬೆಂಕಿ ಹಚ್ಚಬಾರದು. ಅರಣ್ಯ ಪ್ರದೇಶಕ್ಕೆ ಬೆಂಕಿ ಬೀಳದಂತೆ ಎಲ್ಲರೂ ಮುನ್ನೆಚ್ಚರಿಕೆ ವಹಿಸಬೇಕು. ಅರಣ್ಯ ಇಲಾಖೆಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಈ ಬಾರಿ ಅವಧಿಗೂ ಮುನ್ನವೇ ಬೇಸಿಗೆ ಆರಂಭವಾಗಿದೆ. ಪರಿಣಾಮ ಅರಣ್ಯ ಪ್ರದೇಶದಲ್ಲಿ ನೀರು ಮೇವಿನ ಕೊರತೆಯಾಗುವ ಸಾಧ್ಯತೆ ಇದೆ. ಹಾಗಾಗಿ ವನ್ಯಜೀವಿಗಳು ಜನವಸತಿ ಪ್ರದೇಶದತ್ತ ಬರಲಿವೆ. ಇದರಿಂದ ಅರಣ್ಯ ಇಲಾಖೆ ಹಲವು ಪರ್ಯಾಯ ಕ್ರಮಗಳನ್ನು ಕೈಗೊಂಡಿದೆ. ಅರಣ್ಯ ಪ್ರದೇಶದಲ್ಲಿರುವ ಕೆರೆ ಕಟ್ಟೆಗಳಿಗೆ ನೀರು ತುಂಬಿಸಲಾಗುತ್ತಿದೆ. ಕಾಡಂಚಿನ ಗ್ರಾಮಗಳ ಆಸುಪಾಸಿನಲ್ಲಿ ಹೆಚ್ಚು ನಿಗಾ ವಹಿಸಲಾಗಿದೆ ಎಂದು ಡಾ.ಕೆ.ಎನ್ ಬಸವರಾಜು ತಿಳಿಸಿದರು.
ಅರಣ್ಯ ಪ್ರದೇಶ ಸೇರಿದಂತೆ ಕಾಡಂಚಿನ ಗ್ರಾಮಗಳ ಆಸುಪಾಸಿನಲ್ಲಿ ಸಂಚರಿಸುವ ಜನರು ವನ್ಯಜೀವಿಗಳಿಗೆ ತೊಂದರೆ ಕೊಡಬಾರದು. ಅರಣ್ಯ ಪ್ರದೇಶದ ನಡುವಿನ ರಸ್ತೆಗಳಲ್ಲಿ ಸಾಗುವ ಪ್ರವಾಸಿಗರು ವನ್ಯಜೀವಿಗಳಿಗೆ ತೊಂದರೆ ನೀಡಬಾರದು. ವಾಹನದಿಂದ ಕೆಳಗಿಳಿದು ಕಾಡು ಪ್ರಾಣಿಗಳ ಸನಿಹಕ್ಕೆ ಹೋಗಿ ಫೋಟೊ ಕ್ಲಿಕ್ಕಿಸಿಕೊಳ್ಳುವ ದುಸ್ಸಾಹಕ್ಕೆ ಮುಂದಾಗಬಾರದು. ವನ್ಯಜೀವಿಗಳಿಗೆ ಅನಗತ್ಯವಾಗಿ ತೊಂದರೆ ಕೊಟ್ಟರೆ ತಿರುಗಿ ಬೀಳುವ ಅಪಾಯವಿದೆ. ಇದೇ ರೀತಿ ಅರಣ್ಯದಂಚಿನ ಗ್ರಾಮಗಳ ಜನರು ಕಾಡುಪ್ರಾಣಿಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು.ಹುಲಿ, ಚಿರತೆಯಂತಹ ಪ್ರಾಣಿಗಳು ಬಂದಾಗ ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕು. ಜನರೇ ಪ್ರಾಣಿಗಳನ್ನು ಹಿಮ್ಮೆಟ್ಟಿಸಲು ಮುಂದಾಗಬಾರದು. ಇದೀಗ ನೀರನ್ನು ಹುಡುಕಿಕೊಂಡು ಆನೆಗಳು ಕೂಡ ಜನವಸತಿ ಪ್ರದೇಶದತ್ತ ಬರುತ್ತವೆ. ಆ ಸಮಯದಲ್ಲಿ ಜನರು ಸುಮ್ಮನಿದ್ದರೇ ಆನೆಗಳು ನೀರು ಕುಡಿದ ನಂತರ ವಾಪಸ್ ಹೋಗುತ್ತವೆ. ಆದರೆ ಒಂಟಿ ಆನೆ ಇದ್ಧಾಗ ಜನರು ಮುನ್ನೆಚ್ಚರಿಕೆ ವಹಿಸಬೇಕು. ಕಾಡು ಪ್ರಾಣಿಗಳ ಹಾವಳಿಗೆ ಅರಣ್ಯ ಇಲಾಖೆ ಸಹಾಯವಾಣಿ 1926 ಮಾಹಿತಿ ನೀಡಬೇಕು ಎಂದು ಮೈಸೂರು ವಲಯ ಅರಣ್ಯ ಸಂರಕ್ಷಣಾಧಿಕಾರಿ ಡಾ ಕೆ ಎನ್ ಬಸವರಾಜು ತಿಳಿಸಿದರು.
Key words: Temperature- rises – Forest Department – extensive -precautions – prevent- forest fires.