ಬೆಂಗಳೂರು:ಜೂ-15:ಆರೋಗ್ಯ ಇಲಾಖೆ ಅಧೀನದಲ್ಲಿರುವ ಕರ್ನಾಟಕ ಸ್ಟೇಟ್ ಡ್ರಗ್ಸ್ ಲಾಜಿಸ್ಟಿಕ್ ಆಂಡ್ ವೇರ್ಹೌಸಿಂಗ್ ಸೊಸೈಟಿಯ (ಕೆಡಿಎಲ್ಡಬ್ಲ್ಯುಎಸ್) ಮತ್ತೊಂದು ಅವ್ಯವಹಾರ ಬೆಳಕಿಗೆ ಬಂದಿದೆ. ಔಷಧ ಪೂರೈಕೆ ಟೆಂಡರ್ ದಾಖಲೆಗಳು ಅಂಗೀಕಾರ ಪ್ರಕ್ರಿಯೆ ನಡೆಯುವ ಮುನ್ನವೇ ಸೋರಿಕೆಯಾಗಿವೆ. ಈ ಸಂಬಂಧ, ಮುಖ್ಯ ಮೇಲ್ವಿಚಾರಕಿ ಸೇರಿ ನಾಲ್ವರಿಗೆ ಅಪರ ನಿರ್ದೇಶಕರು ನೋಟಿಸ್ ನೀಡಿ ವಿವರಣೆ ಕೇಳಿದ್ದಾರೆ. ಅಲ್ಲದೆ, ಹಣದಾಸೆಗೆ ಟೆಂಡರ್ ದಾಖಲೆಗಳನ್ನು ಅಧಿಕಾರಿಗಳು ಬಿಡ್ದಾರರಿಗೆ ಮಾರಾಟ ಮಾಡಿರುವ ಆರೋಪ ಕೇಳಿಬಂದಿದೆ.
ಏನಿದು ಅವ್ಯವಹಾರ?: ಔಷಧ ಪೂರೈಕೆ ಸಲುವಾಗಿ ಕೆಡಿಎಲ್ಡಬ್ಲ್ಯುಎಸ್ 195 ಕೋಟಿ ರೂ. ಮೊತ್ತದ ವಿವಿಧ ಟೆಂಡರ್ಗಳನ್ನು ಜನವರಿಯಲ್ಲಿ ಕರೆದಿತ್ತು. ಬಿಡ್ದಾರರು ದಾಖಲೆಗಳನ್ನು ಸಲ್ಲಿಸಿದ್ದರು. ಅಂಗೀಕಾರ ಪ್ರಕ್ರಿಯೆಗೂ ಮುನ್ನ ಇ-ಪೋರ್ಟಲ್ನಿಂದ ದಾಖಲೆಗಳನ್ನು ಡೌನ್ಲೋಡ್ ಮಾಡಿ ಸೋರಿಕೆಯಾಗದಂತೆ ಎಚ್ಚರವಹಿಸಬೇಕಿತ್ತು. ಪ್ರತಿ ದಾಖಲೆಯೂ ಮುಖ್ಯವಾದ ಹಿನ್ನೆಲೆಯಲ್ಲಿ ಗೌಪ್ಯ ವಾಗಿಡಬೇಕೆಂಬುದು ಕೆಟಿಟಿಪಿ ನಿಯಮ. ಅಧಿಕಾರಿಗಳು ಕರ್ತವ್ಯ ಲೋಪವೆಸಗಿ ಅಂಗೀಕಾರ ಪ್ರಕ್ರಿಯೆ ನಡೆಯುವ ಮುನ್ನವೇ ದಾಖಲೆಗಳನ್ನು ಹಣಕ್ಕೆ ಮಾರಾಟ ಮಾಡಿದ್ದಾರೆ.
ಏನಿದು ಕೆಡಿಎಲ್ಡಬ್ಲ್ಯುಎಸ್?
ಸರ್ಕಾರಿ ಜಿಲ್ಲಾ, ತಾಲೂಕು, ವೈದ್ಯಕೀಯ ವಿಶ್ವವಿದ್ಯಾಲಯ ಕೇಂದ್ರ, ಸಮುದಾಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸಕಾಲದಲ್ಲಿ ಉಚಿತವಾಗಿ ಔಷಧ ಪೂರೈಸುವ ಸಂಸ್ಥೆ ಕೆಡಿಎಲ್ಡಬ್ಲ್ಯುಎಸ್. ಪ್ರತಿ ವರ್ಷ ಬ್ಯಾಂಡೇಜ್ ಕ್ಲಾತ್, ಕಾಟನ್, ಗ್ಲೂಕೋಸ್ ಬಾಟಲ್, ಚುಚ್ಚುಮದ್ದು ಸೇರಿ ವಿವಿಧ ಔಷಧ ಪೂರೈಸಲು ಆಂದಾಜು 300 ಕೋಟಿ ರೂ. ಮೌಲ್ಯದ ಟೆಂಡರ್ ನಡೆಯುತ್ತದೆ. ಇದಕ್ಕಾಗಿಯೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರತಿ ವರ್ಷ ಕೋಟಿಗಟ್ಟಲೆ ಅನುದಾನ ನೀಡುತ್ತವೆ.
ನ್ಯೂನತೆಯಿದ್ರೂ ಅರ್ಹತೆ?
ಬಿಡ್ದಾರರು 2015ರಿಂದ 18ರವರೆಗೆ ಮಾರಾಟ ತೆರಿಗೆ ಸಲ್ಲಿಸಿರುವ ಬಗ್ಗೆ ಸೇಲ್ಸ್ಟ್ಯಾಕ್ಸ್ ಕ್ಲಿಯರೆನ್ಸ್ ಸಲ್ಲಿಸಬೇಕೆಂಬ ನಿಯಮವಿದೆ. ಸದರಿ ಬಿಡ್ದಾರರು ನೆರೆ ರಾಜ್ಯಗಳಲ್ಲಿ ಔಷಧ ಪೂರೈಸುವ ವ್ಯವಹಾರ ನಡೆಸುತ್ತಿದ್ದು, ಅಲ್ಲಿಗೆ ಸಲ್ಲಿಸಿರುವ ಸೇಲ್ಸ್ ಟ್ಯಾಕ್ಸ್ ಕ್ಲಿಯರೆನ್ಸ್ ಅನ್ನು ಕೆಡಿಎಲ್ಡಬ್ಲ್ಯುಎಸ್ಗೂ ನೀಡಿದ್ದಾರೆ. ಫರ್ಫಾರ್ವೆನ್ಸ್ ಸರ್ಟಿಫಿಕೇಟ್, ಪ್ಯಾಕಿಂಗ್ ಮತ್ತು ಬಾರ್ ಕೋಡ್ ಸೇರಿ ಇನ್ನಿತರ ಮಾಹಿತಿ ಸಂಬಂಧ ದಾಖಲೆಗಳನ್ನು ಸಲ್ಲಿಸಿಲ್ಲ. ಇಷ್ಟೆಲ್ಲ ನ್ಯೂನತೆ ಇದ್ದರೂ ಅಧಿಕಾರಿಗಳು ಅನರ್ಹ ಕಂಪನಿಗಳಿಗೆ ಅರ್ಹತೆ ನೀಡಿದ್ದಾರೆ.
ಟೆಂಡರ್ ದಾಖಲೆಗಳನ್ನು ಸೋರಿಕೆ ಮಾಡಿರುವ ಸಂಬಂಧ ಈಗಾಗಲೇ ನಾಲ್ವರಿಗೆ ನೋಟಿಸ್ ನೀಡಲಾಗಿದೆ. ಸರಿಯಾಗಿ ಉತ್ತರ ನೀಡದಿದ್ದರೆ ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು.
| ನಾಗರಾಜು ಅಪರ ನಿರ್ದೇಶಕ, ಕೆಡಿಎಲ್ಡಬ್ಲ್ಯುಎಸ್
ಕೃಪೆ:ವಿಜಯವಾಣಿ
tender-documents-kdlws-medicine-scam-department-of-health