ಬೆಂಗಳೂರು: 25 ಆಗಸ್ಟ್, 2021: ಸೆಪ್ಟೆಂಬರ್ 15ರ ಒಳಗೆ ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಿಗೆ ಪಠ್ಯ ಪುಸ್ತಕಗಳನ್ನು ಪೂರೈಕೆ ಮಾಡುವ ಗುರಿ ಹೊಂದಲಾಗಿದೆ. ನಿಗದಿತ ಅವಧಿಯೊಳಗೆ ಪಠ್ಯ ಪುಸಕ್ತಗಳು ತಲುಪುವ ವಿಶ್ವಾಸವಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವ ಬಿ.ಸಿ ನಾಗೇಶ್ ತಿಳಿಸಿದರು.
ವಿಧಾನಸೌಧದಲ್ಲಿ ಬುಧವಾರ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು, ‘ಕೋವಿಡ್-19 ಕಾರಣದಿಂದ ಸರಕಾರಿ ಮುದ್ರಣಾಲಯಗಳು ಕೆಲ ಅವಧಿಗೆ ಮುದ್ರಣ ಸ್ಥಗಿತಗೊಳಿಸಿದ್ದವು. ಹೀಗಾಗಿ, ಮುದ್ರಣ ಪ್ರಕ್ರಿಯೆ ವಿಳಂಬವಾಗಿದೆ. ಆದರೂ, ಶಾಲೆ ಆರಂಭಕ್ಕೆ ಮೊದಲೇ ಶೇ.50ರಷ್ಟು ಪಠ್ಯ ಪುಸ್ತಕಗಳು ಶಾಲೆಗಳನ್ನು ತಲುಪಬೇಕು ಎಂಬ ಗುರಿ ಹೊಂದಲಾಗಿತ್ತು. ಅದರಂತೆ ರಾಜ್ಯದ ಶೇ.50ಕ್ಕಿಂತ ಹೆಚ್ಚು ಶಾಲೆಗಳಿಗೆ ಪುಸ್ತಕಗಳನ್ನು ಪೂರೈಸಲಾಗಿದೆ’ ಎಂದು ತಿಳಿಸಿದರು.
‘ಇಂದಿನವರೆಗೆ ಶೇ.70ಕ್ಕಿಂತ ಹೆಚ್ಚು ಪಠ್ಯ ಪುಸ್ತಕಗಳು ಮುದ್ರಣಗೊಂಡಿವೆ. ಮುಂದಿನ ಒಂದು ವಾರದೊಳಗೆ ಮುದ್ರಣಗೊಂಡಿರುವ ಎಲ್ಲ ಪುಸ್ತಕಗಳು ಶಾಲೆಗಳಿಗೆ ತಲುಪುವಂತೆ ವ್ಯವಸ್ಥೆ ಮಾಡಲಾಗುತ್ತದೆ. ಆಯಾ ತರಗತಿಗಳಿಗೆ ಸಂಬಂಧಿಸಿದ ಎಲ್ಲ ವಿಷಯ, ಭಾಷೆ ಪುಸ್ತಕಗಳು ಮುದ್ರಣಗೊಂಡ ಕೂಡಲೇ ಶಾಲೆಗಳಿಗೆ ಪೂರೈಕೆ ಮಾಡಲಾಗುತ್ತದೆ. ಸೆಪ್ಟಂಬರ್ 15ರ ಒಳಗಾಗಿ ಎಲ್ಲ ಶಾಲೆಗಳಿಗೆ ಪುಸ್ತಕಗಳು ತಲುಪಿಸುವ ಗುರಿ ಹೊಂದಲಾಗಿದೆ’ ಎಂದು ಸಚಿವರು ತಿಳಿಸಿದರು.
‘ಆನ್‌ಲೈನ್ ಶಿಕ್ಷಣದ ಅಗತ್ಯಕ್ಕೆ ತಕ್ಕಂತೆ ಪಠ್ಯವನ್ನು ಸಿದ್ದಪಡಿಸಿ ಆನ್‌ಲೈನ್‌ಗೆ ಅಪ್‌ಲೋಡ್ ಮಾಡಲಾಗಿತ್ತು. ಅವುಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವಂತೆ ಮಕ್ಕಳಿಗೆ, ಪಾಲಕರಿಗೆ ತಿಳಿಸಲಾಗಿತ್ತು. ಹೀಗಾಗಿ, ಬಹುತೇಕ ಮಕ್ಕಳು ಆನ್‌ಲೈನ್‌ನಲ್ಲೇ ಪುಸ್ತಕಗಳನ್ನು ಡೌನ್‌ಲೋಡ್ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ’ ಎಂದು ಸಚಿವರು ತಿಳಿಸಿದರು.
‘ಶಾಲೆಗಳ ಮುಖ್ಯ ಶಿಕ್ಷಕರಿಗೆ, ಆಡಳಿತ ಮಂಡಳಿಗಳಿಗೆ ಪಠ್ಯ ಪುಸ್ತಕಗಳನ್ನು ಡೌನ್‌ಲೋಡ್ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡುವಂತೆ ಸೂಚನೆ ನೀಡಲಾಗಿದೆ’ ಎಂದು ಸಚಿವರು ಹೇಳಿದರು.