ಮನವೊಲಿಕೆಗೆ “ಕೈ’ ನಾಯಕರ ಕಸರತ್ತು

ಬೆಂಗಳೂರು:ಜುಲೈ-22: ಸರ್ಕಾರ ಉಳಿಸಿಕೊಳ್ಳುವ ಮೈತ್ರಿ ಪಕ್ಷಗಳ ಕರಸತ್ತು ಮುಂದುವರಿದಿದೆ. ಅತೃಪ್ತ ಶಾಸಕರ ಮನವೊಲಿಸಲು ಕೈ ನಾಯಕರ ಹೆಣಗಾಟ ಭಾನುವಾರವೂ ನಡೆದಿತ್ತು. ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಹಾಗೂ ಸಚಿವ ಡಿ.ಕೆ.ಶಿವಕುಮಾರ್‌ ಅವರು ದಿನವಿಡೀ ಓಡಾಟ ನಡೆಸಿದರು. ಈ ಮಧ್ಯೆ, ನಾಯಕತ್ವ ಬದಲಾವಣೆಯ ದಾಳವನ್ನು ಸಹ ಕಾಂಗ್ರೆಸ್‌ ಪಕ್ಷ ಉರುಳಿಸಿತು.

ಜೊತೆಗೆ, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ಧರಾಮಯ್ಯನವರು ಅತೃಪ್ತ ಶಾಸಕರ ಕುಟುಂಬದವರು ಹಾಗೂ ಸಂಬಂಧಿಗಳ ಮೂಲಕ ಅವರನ್ನು ಸಂಪರ್ಕಿಸುವ ಪ್ರಯತ್ನ ನಡೆಸಿದರು ಎನ್ನಲಾಗಿದೆ. ಆದರೆ, ಮುಂಬೈನಲ್ಲಿ ತಂಗಿರುವ ಅತೃಪ್ತ ಶಾಸಕರು ಮತ್ತೂಂದು ವಿಡಿಯೋ ಬಿಡುಗಡೆ ಮಾಡಿ ತಾವು ಅಧಿವೇಶನದಲ್ಲಿ ಪಾಲ್ಗೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಆ ಮೂಲಕ ನಾಯಕರ ಮನವೊಲಿಕೆ, ನಾಯಕತ್ವ ಬದಲಾವಣೆ ಇದ್ಯಾವುದಕ್ಕೂ ತಾವು ಬಗ್ಗುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಅತೃಪ್ತ ಶಾಸಕರು ರವಾನಿಸಿದ್ದಾರೆ. ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರು ಭಾನುವಾರ ಸಚಿವ ಡಿ.ಕೆ.ಶಿವಕುಮಾರ್‌ ಅವರ ನಿವಾಸಕ್ಕೆ ಭೇಟಿ ನೀಡಿದ್ದರು. ಸರ್ಕಾರವನ್ನು ಉಳಿಸಿಕೊಳ್ಳುವ ಬಗ್ಗೆ ಉಭಯ ನಾಯಕರು ಪ್ರತ್ಯೇಕ ಚರ್ಚೆ ನಡೆಸಿದರು.

ಈ ವೇಳೆ, ವಿಶ್ವಾಸಮತ ಯಾಚನೆ ಗೆಲ್ಲಲು ತಮ್ಮ ಮುಂದಿರುವ ಕಾರ್ಯತಂತ್ರಗಳೇನು? ಅತೃಪ್ತರ ಮನವೊಲಿಕೆಗೆ ಇರುವ ಮಾರ್ಗಗಳೇನು? ಎಂಬ ಬಗ್ಗೆ ಸಮಾಲೋಚನೆ ನಡೆಸಿದರು. ಇದಲ್ಲದೇ ಪರ್ಯಾಯ ನಾಯಕತ್ವದ ಗಾಳ ಬಿಟ್ಟು ಅತೃಪ್ತರ ಮನವೊಲಿಕೆಯ ವಿಚಾರವಾಗಿಯೂ ಮಾತುಕತೆ ನಡೆಸಿದರು ಎನ್ನಲಾಗಿದೆ. ಆದರೆ, ಅತೃಪ್ತ ಶಾಸಕರು ಬಿಡುಗಡೆ ಮಾಡಿರುವ ವಿಡಿಯೋ, ಉಭಯ ನಾಯಕರ ಪ್ರಯತ್ನಗಳಿಗೆ ಹಿನ್ನಡೆ ಉಂಟು ಮಾಡಿತು ಎನ್ನಲಾಗಿದೆ.

ಇದೇ ವೇಳೆ, ಭಾನುವಾರ ಸಂಜೆ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಸೋಮವಾರದ ವಿಶ್ವಾಸಮತ ಯಾಚನೆಯ ವೇಳೆ ಸದನದಲ್ಲಿ ಅನುಸರಿಸಬೇಕಾದ ಕಾರ್ಯತಂತ್ರಗಳ ಬಗ್ಗೆ ಚರ್ಚೆ ನಡೆಸಲಾಯಿತು.

ಮೈತ್ರಿ ಸರ್ಕಾರ ಸುಭದ್ರ: ಈ ವೇಳೆ, ಮಾತನಾಡಿದ ಸಚಿವ ಡಿ.ಕೆ.ಶಿವಕುಮಾರ್‌, ಬಿಎಸ್ಪಿ ಶಾಸಕ ಎನ್‌. ಮಹೇಶ್‌ ಸೋಮವಾರ ಸದನಕ್ಕೆ ಬರುತ್ತಾರೆ ಎಂಬ ವಿಶ್ವಾಸವಿದೆ. ತುಮಕೂರು ಡಿಸಿಸಿ ಬ್ಯಾಂಕ್‌ ಸೂಪರ್‌ ಸೀಡ್‌ ವಿಚಾರ ನನಗೆ ಗೊತ್ತಿಲ್ಲ. ನಾವು ಶಾಸಕರನ್ನು ಕರೆ ತರುವ ಜಂಜಾಟದಲ್ಲಿ ಇದ್ದೇವೆ. ನಮ್ಮ ಶಾಸಕರು ಎಲ್ಲಿದ್ದಾರೆ ಎಂದು ಪತ್ತೆ ಹಚ್ಚಿ ಮಾತುಕತೆ ಮಾಡುವ ಪ್ರಯತ್ನ ಮಾಡುತ್ತಿದ್ದೇವೆ. ಮೈತ್ರಿ ಸರ್ಕಾರ ಸುಭದ್ರವಾಗಿರುತ್ತದೆ ಎಂದರು. ಇದೇ ವೇಳೆ ಸರ್ಕಾರ ಬಿದ್ದ ಮೇಲೂ ಮೈತ್ರಿ ಮುಂದುವರಿಯುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, “ನಾಳೆ ಏನಾಗುತ್ತೆ ಅಂತ ಹೇಳ್ಳೋಕ್ಕೆ ಆಗಲ್ಲ. ನನಗೆ ಭವಿಷ್ಯವಾಣಿ ಗೊತ್ತಿಲ್ಲ’ ಎಂದರು.

ವಿಶ್ವಾಸಮತ ಯಾಚನೆಯನ್ನು ಸಿಎಂ ಸ್ವಯಂಪ್ರೇರಣೆಯಿಂದ ಮಾಡಿದ್ದಾರೆ. ಅದನ್ನು ಮುಂದೂಡುವ ಪ್ರಶ್ನೆ ಬರುವುದಿಲ್ಲ. ಸಂವಿಧಾನ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿದೆ. ಸರ್ಕಾರದ ಬಗ್ಗೆ ಮಾತನಾಡುವ ಬದಲು ಬಿಜೆಪಿಯವರು ತೆಪ್ಪಗೆ ಕೂತಿದ್ದಾರೆ. ನಾವು ಸರ್ಕಾರದ ಕಾರ್ಯಗಳನ್ನು ಜನರಿಗೆ ತಿಳಿಸುತ್ತಿದ್ದೇವೆ. ಸೋಮವಾರ ಸಂಜೆಯ ವೇಳೆಗೆ ವಿಶ್ವಾಸಮತ ಯಾಚನೆ ಮಾಡುತ್ತೇವೆ ಮತ್ತು ಅದರಲ್ಲಿ ಯಶಸ್ವಿಯಾಗುತ್ತೇವೆ. ನಿಯಮ, ಕಾನೂನು, ಸಂವಿಧಾನ ಗಾಳಿಗೆ ತೂರಿ ರಾಜ್ಯಪಾಲರು ಪತ್ರ ಬರೆದಿದ್ದಾರೆ. ನಮ್ಮ ಹಕ್ಕನ್ನು ಮೊಟಕುಗೊಳಿಸಲು ಸ್ಪೀಕರ್‌ ಅವರಿಗೂ ಅಧಿಕಾರವಿಲ್ಲ.
-ಎಚ್‌.ಕೆ. ಪಾಟೀಲ್‌, ಶಾಸಕ
ಕೃಪೆ:ವಿಜಯವಾಣಿ

ಮನವೊಲಿಕೆಗೆ “ಕೈ’ ನಾಯಕರ ಕಸರತ್ತು

the-congress-leaders-pleas-for-persuasion