ಬೆಂಗಳೂರು:ಆ-15:(www.justkannada.in) ಹುತಾತ್ಮ ಸೈನಿಕರ ನೆನಪಿಗಾಗಿ ಸ್ಥಾಪಿಸಲು ಉದ್ದೇಶ್ಜಿಸಲಾಗಿರುವ ವೀರಗಲ್ಲು ಯೋಜನೆಯಿಂದಾಗಿ ತಾನು ಆರ್ಥಿಕವಾಗಿ ದಿವಾಳಿಯಾಗುತ್ತಿದ್ದೇನೆ. ಬಿಡಿಎ ತನಗೆ ಪಾವತಿಸಬೇಕಾದ ಬಾಕಿ ಹಣವನ್ನೂ ಪಾವತಿ ಮಾಡುತ್ತಿಲ್ಲ ಎಂದು ವೀರಗಲ್ಲು ಶಿಲ್ಪಿ ಅಶೋಕ್ ಗುಡಿಗಾರ್ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಭಾರತದ ಅತಿ ಎತ್ತರದ ಏಕಶಿಲಾ ಸೈನಿಕ ವೀರಗಲ್ಲು ಪ್ರತಿಷ್ಠಾಪನೆಗ್ವೆ ಸರ್ಕಾರ ಮುಂದಾಗಿದ್ದು, ಇಂದಿರಾ ಗಾಂಧಿ ಸಂಗೀತ ಕಾರಂಜಿ ಆವರಣದಲ್ಲಿ ಸ್ಥಾಪಿಸಲು ಉದ್ದೇಶಿಸಿಸಲಾಗಿದ್ದು, ಸುಮಾರು 80 ಅಡಿ ಉದ್ದ ಮತ್ತು 500 ಟನ್ ತೂಗುವ ವೀರಗಲ್ಲು ಇದಾಗಿದೆ. ಈ ವೀರಗಲ್ಲಿನ ಮೇಲೆ 22600 ಹುತಾತ್ಮ ಯೋಧರ ಹೆಸರುಗಳನ್ನು ಕೆತ್ತಿಸಲು ಸರ್ಕಾರ ನಿರ್ಧರಿಸಿದ್ದು, ಶೇ.75ರಷ್ಟು ಕಾರ್ಯ ಇನ್ನೂ ಬಾಕಿ ಉಳಿದಿದೆ.
ಎಲ್ಲವೂ ಅಂದುಕೊಂಡಂತೆ ನಡೆದರೆ ಇದೇ ಆಗಸ್ಟ್ 15ರೊಳಗಾಗಿ ವೀರಗಲ್ಲು ಆಗಸದೆತ್ತರಕ್ಕೆ ತಲೆ ಎತ್ತಿ ನಿಲ್ಲಬೇಕಿತ್ತು. ಎಂಟು ವರ್ಷಗಳಿಂದ ಸಿದ್ಧವಾಗುತ್ತಿರುವ ಈ ವೀರಗಲ್ಲು ಯೋಜನೆಯ ಉಸ್ತುವಾರಿಯನ್ನು ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಬಿಡಿಎ) ವಹಿಸಿಕೊಂಡಿದೆ. ಬಿಡಿಎ ಲಕ್ಷಾಂತರ ರೂ ಹಣ ಪಾವತಿ ಮಾಡದೇ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ವಿರಗಲ್ಲು ಕೆತ್ತನೆ ಕಾರ್ಯ ಮಾಡುತ್ತಿದ್ದ ಶಿಲ್ಪಿ ಅಶೋಕ್ ಆರೋಪಿಸಿದ್ದಾರೆ.
ದೇವನಹಳ್ಳಿಯ ಚಪ್ಪರಕಲ್ಲು ಬಳಿಯ ಕೊಯಿರಾ ಗ್ರಾಮದ ಕಲ್ಲುಗಣಿಯಿಂದ ತಂದಿರುವ 78 ಅಡಿ ಎತ್ತರ, 450 ಟನ್ ತೂಕದ ವೀರಗಲ್ಲನ್ನು ಈಗಾಗಲೇ ರಾಷ್ಟ್ರೀಯ ಸೈನಿಕರ ಸ್ಮಾರಕ ಉದ್ಯಾನಕ್ಕೆ ತಂದು ಒಂದು ಭಾಗ ನಿಲ್ಲಿಸಲಾಗಿದೆ. ಗುಜರಾತ್ ಮೂಲದ ‘ನಬ್ರೋಸ್ ಟ್ರಾನ್ಸ್ಪೋರ್ಟ್ ಪ್ರೈವೇಟ್ ಲಿಮಿಟೆಡ್ ಕಂಪನಿ’ ವಿಶೇಷವಾಗಿ ವಿನ್ಯಾಸಗೊಳಿಸಿದ 240 ಗಾಲಿಗಳ ಬೃಹತ್ ಲಾರಿಯಲ್ಲಿ ವೀರಗಲ್ಲನ್ನು ಗಣಿಯಿಂದ ಉದ್ಯಾನಕ್ಕೆ ಸಾಗಿಸಲಾಗಿದ್ದು, ಬಿಡಿಎ ಎಂಜಿನಿಯರ್ಗಳು ವೀರಗಲ್ಲು ಅಳವಡಿಸಲು ಸಿದ್ಧತೆ ನಡೆಸಿದ್ದಾರೆ ಈಗಾಗಲೇ ಒಂದು ಕಡೆ ಮಾತ್ರ ಕೆತ್ತನೆ ಕಾರ್ಯ ಪೂರ್ಣಗೊಂಡಿದ್ದು, ಇನ್ನೂ ಶೇ.75ರಷ್ಟು ಭಾಗದ ಕೆಲಸ ಹಾಗೆಯೇ ಉಳಿದಿದೆ. ವೀರಗಲ್ಲು ಸ್ಥಾಪನೆಗೆ ಸಿದ್ಧತೆ ನಡೆಸುತ್ತಿದ್ದರೂ ನನಗೆ ಈವರಗೆ ಯಾವುದೇ ರೀತಿಯ ಮಾಹಿತಿಯನ್ನೂ ನೀಡಿಲ್ಲ ಎಂದು ಶಿಲ್ಪಿ ಅಶೋಕ್ ಗುಡಿಗಾರ್ ತಿಳಿಸಿದ್ದಾರೆ.
ವೀರಗಲ್ಲು ಪ್ರತಿಷ್ಠಾಪಿಸುವ ಗುತ್ತಿಗೆಯನ್ನು ಬ್ರಿಟನ್ ಮೂಲದ ಫಾಜೋಲಿ (Fagioli) ಕಂಪನಿಗೆ ವಹಿಸಲಾಗಿದೆ. ಭಾರಿ ಭಾರವಾದ ಈ ಶಿಲೆಯನ್ನು ಎತ್ತಿ ನಿಲ್ಲಿಸಲು ಬೇಕಾದ ಹೈಡ್ರಾಲಿಕ್ ಲಿಫ್ಟ್, ಕ್ರೇನ್ ಮತ್ತಿತರ ಬೃಹತ್ ಯಂತ್ರೋಪಕರಣಗಳನ್ನು ಕಂಪನಿಯ ಸಿಬ್ಬಂದಿ ಅದಾಗಲೇ ಮುಂಬೈನಿಂದ ತಂದು ಜೋಡಿಸಿಟ್ಟುಕೊಂಡಿದ್ದಾರೆ. ಲಾರಿಯಲ್ಲಿದ್ದ ವೀರಗಲ್ಲನ್ನು ಸುರಕ್ಷಿತವಾಗಿ ಎತ್ತಿ ತಂದು ಉದ್ಯಾನದೊಳಗಿನ ನಿಗದಿತ ಸ್ಥಳದಲ್ಲಿಡಲಾಗಿದೆ. ಈಗ ಅದನ್ನು ಎತ್ತಿ ನಿಲ್ಲಿಸುವುದೊಂದೇ ಬಾಕಿಯಿದೆ.
ಉಳಿದ ಕೆತ್ತನೆ ಕೆಲಸವನ್ನು ಕೈಗೊಳ್ಳಲು ಹಣವನ್ನು ಬಿಡುಗಡೆ ಮಾಡುವಂತೆ ಬಿಡಿಎ ಆಯುಕ್ತರಿಗೆ ಪತ್ರದಲ್ಲಿ ಮನವಿ ಮಾಡಿದ್ದೇನೆ. ಬಿಡಿಎ ನನಗೆ ಇನ್ನೂ 1,30,74,037 ರೂಗಳನ್ನು ಪಾವತಿಸಬೇಕಾಗಿದೆ ಆದರೆ ನಾನು ಅವರ ಬಳಿ ಕೆಲವು ಲಕ್ಷ ರೂ ಹಣವನ್ನು ಮಾತ್ರ ಪಾವತಿಸುವಂತೆಯೂ ವಿನಂತಿಸಿದ್ದೇನೆ. ಕಾರಣ ಚಿಪ್ಪಿಂಗ್ ಕೆಲಸವನ್ನು ಪೂರ್ಣಗೊಳಿಸಲು ನನ್ನ ಬಳಿ ಹಣವಿಲ್ಲ. ಕೆಲಸ ಮುಗಿದ ನಂತರ ವೀರಗಲ್ಲು ತೂಕ 10 ಟನ್ ಕಡಿಮೆ ಆಗುತ್ತದೆ ಎಂದು ಅಶೋಕ್ ವಿವರಿಸಿದ್ದಾರೆ.
ಇದೇ ವೇಳೆ ವೀರಗಲ್ಲು ಏಕಶಿವಾ ಕೆತ್ತನೆ ವಿಚಾರವಾಗಿ ಹಲವಾರು ಅನಗತ್ಯ ವ್ಯಕ್ತಿಗಳು ಮಧ್ಯಪ್ರವೇಶಮಾಡುತ್ತಿದ್ದಾರೆ. ಇದೇ ಕಾರಣಕ್ಕಾಗಿ ಕೆತ್ತನೆ ಕಾರ್ಯ ಕೂಡ ವಿಳಂಬವಾಗಲು ಕಾರಣವಾಗಿದೆ ಎಂದು ಆರೋಪಿಸಿದ್ದಾರೆ. ಹಲವು ಇಂಜಿನಿಯರ್ ಗಳು ಅನಗತ್ಯವಾಗಿ ಕೆಲಸದಲ್ಲಿ ಮಧ್ಯಪ್ರವೇಶಮಾಡುತ್ತಿದ್ದಾರೆ. ಆದರೆ ನನ್ನ ಬಾಕಿ ಹಣವನ್ನು ಪಾವತಿಸಲು ಬಿಡಿಎ ಅಧಿಕಾರಿಗಳಿಗೆ ಮನವರಿಕೆ ಮಾಡಲು ಯಾರೂ ಮುಂದೆ ಬರುತ್ತಿಲ್ಲ. ಈ ಯೋಜನೆಯಿಂದಾಗಿ ನಾನು ದಿವಾಳಿಯಾಗುತ್ತಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.