ಬೆಂಗಳೂರು, ಜುಲೈ 19, 2021 (www.justkannada.in): ಬೆಂಗಳೂರಿನ ಹಗರಣಪೀಡಿತ ಐಎಂಎ ಸಮೂಹ ಸ್ವಾಮ್ಯದ, ಕಾರ್ಯನಿರ್ವಹಣೆಯಲ್ಲಿ ಇಲ್ಲದಿರುವಂತಹ ‘ಫ್ರಂಟ್ ಲೈನ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ’ಯಲ್ಲಿ ಕಳ್ಳತನ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕಳ್ಳರು ತಮ್ಮ ಕೈಚಳಕ ತೋರಿಸಿ ಆಸ್ಪತ್ರೆಯಲ್ಲಿದ್ದಂತಹ ದುಬಾರಿ ವೈದ್ಯಕೀಯ ಉಪಕರಣಗಳು, ಪೀಠೋಪಕರಣಗಳನ್ನೆಲ್ಲಾ ಕದ್ದೊಯ್ದಿದ್ದಾರೆ.
ಈ ಆಸ್ಪತ್ರೆಯನ್ನು ಸರ್ಕಾರ ವಶಕ್ಕೆ ತೆಗೆದುಕೊಂಡು, ಹರಾಜು ಮೂಲಕ ಅಲ್ಲಿದ್ದ ಎಲ್ಲಾ ದುಬಾರಿ ವಸ್ತುಗಳನ್ನು ಮಾರಾಟ ಮಾಡಿತ್ತು. ಆದರೂ ಇಲ್ಲಿ ಈಗ ಕಳ್ಳತನ ನಡೆದಿರುವ ಘಟನೆ ಆಶ್ಚರ್ಯ ಮೂಡಿಸಿದೆ. ಅದಕ್ಕಿಂತ ಮುಖ್ಯವಾದ ವಿಚಾರವೇನೆಂದರೆ ಈ ಕಳ್ಳತನ ಕೋವಿಡ್-19 ಲಾಕ್ ಡೌನ್ ಸಮಯದಲ್ಲಿ, ಅಂದರೆ ಸುಮಾರು ಎರಡು ತಿಂಗಳ ಹಿಂದೆ ಜರುಗಿದೆ ಎಂದು ಅನುಮಾನಿಸಲಾಗಿದೆ. ಹರಾಜಿನಲ್ಲಿ ಭಾಗವಹಿಸಿ ವಸ್ತುಗಳನ್ನು ಖರೀದಿಸಿದ್ದಂತಹ ವ್ಯಕ್ತಿಗೆ ಆ ವಸ್ತುಗಳನ್ನು ಅಂದಾಜಿಸಲು ಜುಲೈ 13ರಂದು ಅಧಿಕಾರಿಗಳು ಸ್ಥಳಕ್ಕೆ ತೆರಳಿದ್ದಾಗ ಕಳ್ಳತನವಾಗಿರುವುದು ಬಯಲಾಗಿದೆ. ಈ ಹರಾಜಿನಿಂದ ಬರುವಂತಹ ಹಣವನ್ನು ಹಗರಣದ ಸಂತ್ರಸ್ತ ಹೂಡಿಕೆದಾರರಿಗೆ ಹಿಂದಿರುಗಿಸುವ ಉದ್ದೇಶ ಹೊಂದಲಾಗಿತ್ತು.
ಐಎಂಎ, ಅಥವಾ ಐ ಮಾನೆಟರಿ ಅಡ್ವೆಂಸರಿ, ಬಹುಪಾಲು ಮುಸ್ಲೀಮರೇ ಒಳಗೊಂಡಿರುವಂತಹ ತನ್ನ ಹೂಡಿಕೆದಾರರಿಗೆ, ಹಲಾಲ್-ಮಾದರಿಯಡಿ ಹೂಡಿಕೆಯ ಮೇಲೆ ವಾರ್ಷಿಕ 50% ಲಾಭವನ್ನು ನೀಡುವುದಾಗಿ ನಂಬಿಸಿ ವಂಚಿಸಿತ್ತು. ಐಎಂಎ ಸಮೂಹದಡಿ ಫ್ರಂಟ್‌ಲೈನ್ ಆಸ್ಪತ್ರೆಯೂ ಒಳಗೊಂಡಂತೆ ಹಲವಾರು ವ್ಯಾಪಾರಗಳನ್ನು ನಡೆಸಲಾಗುತಿತ್ತು. ಜೂನ್ ೨೦೧೯ರಂದು ಈ ಸಮೂಹ ತನ್ನ ಹೂಡಿಕೆದಾರರಿಗೆ ಸುಮಾರು ರೂ.೪,೦೦೦ ಕೋಟಿಗಳಷ್ಟು ಪಂಗನಾಮ ಹಾಕಿ ಮುಚ್ಚಲಾಗಿತ್ತು.
ಫ್ರಂಟ್‌ಲೈನ್ ಆಸ್ಪತ್ರೆ, ಬೆಂಗಳೂರಿನ ಕೇಂದ್ರ ಭಾಗವಾದ ಶಿವಾಜಿನಗರದ ವೆಂಕಟಸ್ವಾಮಿ ನಾಯ್ಡು ರಸ್ತೆಯಲ್ಲಿರುವ ನಾಲ್ಕು ಅಂತಸ್ತುಗಳ ಕಟ್ಟಡದಲ್ಲಿತ್ತು. ಹಗರಣ ಬಯಲಾದ ನಂತರ ಈ ಆಸ್ಪತ್ರೆಯನ್ನೂ ಸಹ ಮುಚ್ಚಲಾಯಿತು. ಈ ಆಸ್ಪತ್ರೆ ಹಾಗೂ ಅಲ್ಲಿದ್ದಂತಹ ಎಲ್ಲಾ ದುಬಾರಿ ವಸ್ತುಗಳನ್ನು, ಐಎಂಎ ಪ್ರಕರಣವನ್ನು ನಿರ್ವಹಿಸುತ್ತಿರುವಂತಹ ವಿಶೇಷ ಅಧಿಕಾರಿ ಹಾಗೂ ಸಕ್ಷಮ ಪ್ರಾಧಿಕಾರದ ಸುಪರ್ದಿಗೆ ವಹಿಸಲಾಗಿತ್ತು. ಈ ಸಂಬಂಧ ಅಧಿಕಾರಿಗಳು ಈ ಆಸ್ಪತ್ರೆಯ ನಾಲ್ಕು ಅಂತಸ್ತುಗಳಲ್ಲಿಯೂ ಇದ್ದಂತಹ ಎಲ್ಲಾ ವಸ್ತುಗಳನ್ನು ಲೆಕ್ಕ ಮಾಡಿ, ನವೆಂಬರ್ 2020ರಂದು ಎ-ಹರಾಜು ಮಾಡಿದ್ದರು.
ಐಎಂಎ ಪ್ರಕರಣಕ್ಕೆ ಸಂಬಂಧಪಟ್ಟ ವಿಶೇಷ ಅಧಿಕಾರಿ ಹಾಗೂ ಸಕ್ಷಮ ಪ್ರಾಧಿಕಾರದ ಒಂದು ತಂಡ ಜುಲೈ ೧೩ರಂದು ಬೆಳಿಗ್ಗೆ ಸುಮಾರು ೧೧.೩೦ರ ವೇಳೆಗೆ ಹರಾಜಿನಲ್ಲಿ ವಸ್ತುಗಳನ್ನು ಖರೀದಿಸಿದವರಿಗೆ ವಸ್ತುಗಳನ್ನು ತೋರಿಸಲು ಆಸ್ಪತ್ರೆಗೆ ಭೇಟಿ ನೀಡಿದ್ದರು. ಆದರೆ ಆಸ್ಪತ್ರೆ ಒಳಕ್ಕೆ ಪ್ರವೇಶಿಸಿದ ಕೂಡಲೇ ಎಲ್ಲರಿಗೂ ದಿಗ್ಭ್ರಾಂತಿಯಾಯಿತು!
ಪ್ರವೇಶ ದ್ವಾರದ ಗ್ರಿಲ್ ಮುರಿದ್ದತ್ತು. ಕಳ್ಳರು ವೈದ್ಯಕೀಯ ಉಪಕರಣದಿಂದ ಹಿಡಿದು, ಪೀಠೋಪಕರಣಗಳು, ಏರ್ ಕೂಲರ್‌ಗಳು, ಬ್ಯಾಟರಿಗಳು ಸೇರಿದಂತೆ ಬಹುತೇಕ ಎಲ್ಲವನ್ನೂ ದೋಚಿಕೊಂಡು ಹೋಗಿದ್ದಾರೆ. ಗೋಡೆಗೆ ಅಳವಡಿಸಲಾಗಿದ್ದಂತಹ, ಕಳಚಲು ಕಷ್ಟವಾಗಿರುವಂತಹ ಎಲೆಕ್ಟ್ರಿಕಲ್ ಹಾಗೂ ಎಲೆಕ್ಟ್ರಾನಿಕ್ ಉಪಕರಣಗಳನ್ನು ಹೊರತುಪಡಿಸಿ ಬಹುತೇಕ ಎಲ್ಲವೂ ಕಣ್ಮರೆಯಾಗಿದೆ. ಮೇಲಾಗಿ ಈ ರೀತಿ ಕಳಚಲು ಕಷ್ಟವಾದ ಉಪಕರಣಗಳನ್ನೂ ಸಹ ಕಳ್ಳರು ಉಪಯೋಗಕ್ಕೆ ಬಾರದಿರುವಷ್ಟು ಹಾನಿಗೊಳಿಸಿದ್ದಾರಂತೆ.
ಐಎಂಎ ಪ್ರಕರಣದ ವಿಶೇಷ ಅಧಿಕಾರಿ ಹಾಗೂ ಸಕ್ಷಮ ಪ್ರಾಧಿಕಾರದ ಕಚೇರಿಯ ಅಧಿಕಾರಿ ನಾಗರಾಜ್. ಕೆ ಅವರು ಈ ಕುರಿತು ಕಮರ್ಷಿಯಲ್ ರಸ್ತೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮೌಲ್ಯಮಾಪನ ವರದಿಯನ್ನು ಪರಿಶೀಲಿಸಿ ಕಳ್ಳತನವಾಗಿರುವ ವಸ್ತುಗಳ ಪಟ್ಟಿ ಹಾಗೂ ಅದರ ಮೌಲ್ಯವನ್ನು ತಿಳಿಸುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ.
ಈ ಪ್ರಕರಣವನ್ನು ತಪಾಸಣೆ ಮಾಡುತ್ತಿರುವ ಅಧಿಕಾರಿ, “ಈ ಆಸ್ಪತ್ರೆಯನ್ನು ಸರ್ಕಾರ ವಶಪಡಿಸಿಕೊಂಡಿರುವುದು ಬಹುಶಃ ಕಳ್ಳರಿಗೆ ಗೊತ್ತಿದೆ. ಜೊತೆಗೆ ಈ ಕಟ್ಟಡಕ್ಕೆ ಯಾವುದೇ ಭದ್ರತಾ ಸಿಬ್ಬಂದಿಯನ್ನು ನೇಮಿಸಲಾಗಿರಲಿಲ್ಲ. ಕಳ್ಳರು ಈ ಅವಕಾಶವನ್ನು ಬಳಸಿಕೊಂಡಿದ್ದಾರೆ,” ಎಂದಿದ್ದಾರೆ.
ಮೇಲಾಗಿ ಈ ಆಸ್ಪತ್ರೆಯಲ್ಲಿರುವಂತಹ ಸಿಸಿಟಿವಿ ಕ್ಯಾಮೆರಾಗಳೂ ಸಹ ಸ್ವಿಚ್ ಆನ್ ಇರಲಿಲ್ಲ. ಈ ಕಳ್ಳತನ ಬಹುಪಾಲು ಲಾಕ್‌ಡೌನ್ ಸಮಯದಲ್ಲೇ ನಡೆದಿದೆ ಎಂದು ಪೊಲೀಸರು ಅಂದಾಜಿಸಿದ್ದಾರೆ.
ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್
Key words: Theft –closed- hospital – IMA-Two months -after – police