ಮೈಸೂರು,ಜನವರಿ,5,2021(www.justkannada.in): ಮೈಸೂರಿನ ವಿಶ್ವವಿಖ್ಯಾತ ಚಾಮರಾಜೇಂದ್ರ ಮೃಗಾಲಯದಲ್ಲಿ ಹಕ್ಕಿ ಜ್ವರದ ಆತಂಕವಿಲ್ಲ ಎಂದು ಮೃಗಾಲಯ ನಿರ್ದೇಶಕ ಅಜಿತ್ ಕುಲಕರ್ಣಿ ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಮಾಧ್ಯಮಗಳ ಜತೆ ಮಾತನಾಡಿದ ಮೃಗಾಲಯ ನಿರ್ದೇಶಕ ಅಜಿತ್ ಕುಲಕರ್ಣಿ, ನೆರೆರಾಜ್ಯ ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಹಕ್ಕಿಜ್ವರ ಕಾಣಿಸಿಕೊಂಡು ಪಕ್ಷಿಗಳು ಸಾವನ್ನಪ್ಪುತ್ತಿವೆ. ನಮ್ಮ ಮೃಗಾಲಯದಲ್ಲಿ ಸಾವಿರಾರು ಪಕ್ಷಿಗಳಿದ್ದು, ಹಕ್ಕಿ ಜ್ವರ ಹರಡದಂತೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಪ್ರವಾಸಿಗರು ಮೃಗಾಲಯಕ್ಕೆ ಆಗಮಿಸುವ ಮುನ್ನ ಔಷಧಿ ಸಿಂಪಡಿಸಿರುವ ಫೋಟ್ ಮ್ಯಾಟ್ ಗಳನ್ನು ಅಳವಡಿಸಲಾಗಿದ್ದು, ಈ ಮೂಲಕ ಮೃಗಾಲಯ ಪ್ರವೇಶಿಸಿದ್ದಾರೆ. ಪ್ರವಾಸಿಗರಿಂದ ಹಕ್ಕಿಗಳಿಗೆ ಹಾಗೂ ಹಕ್ಕಿಗಳಿಂದ ಪ್ರವಾಸಿಗರಿಗೆ ಹಕ್ಕಿ ಜ್ವರ ಹರಡದಂತೆ ಮುಂಜಾಗ್ರತೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಹಾಗೆಯೇ ಈಗಾಗಲೇ ಕೇಂದ್ರ ಮೃಗಾಲಯ ಪ್ರಾಧಿಕಾರ ನೀಡಿರುವ ನಿಯಮಗಳನ್ನು ಚಾಚು ತಪ್ಪದೆ ಪಾಲಿಸುತ್ತಿದ್ದೇವೆ. ಮೃಗಾಲಯದ ವೈದ್ಯರು ಎಲ್ಲ ಪಕ್ಷಿಗಳ ಚಲನವಲನಗಳ ಬಗ್ಗೆ ನಿಗಾ ಇಟ್ಟಿದ್ದಾರೆ ಎಂದು ಅಜಿತ್ ಕುಲಕರ್ಣಿ ಮಾಹಿತಿ ನೀಡಿದರು.
ನಂತರ ಮಾತನಾಡಿದ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್ ಮಹಾದೇವಸ್ವಾಮಿ, ದಿನದ 24 ಗಂಟೆಗಳ ಕಾಲ ನಮ್ಮ ವೈದ್ಯರು ಹಕ್ಕಿ ಜ್ವರ ಹರಡದಂತೆ ಮುಂಜಾಗ್ರತೆ ವಹಿಸುತ್ತಿದ್ದಾರೆ. ಎಲ್ಲಾ ಮೃಗಾಲಯಗಳಲ್ಲಿ ಹಕ್ಕಿ ಜ್ವರ ಹರಡದಂತೆ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರವಾಸಿಗರು ಆತಂಕಪಡುವ ಯಾವ ಪ್ರಮೇಯವು ಇಲ್ಲ ಎಂದು ತಿಳಿಸಿದರು.
Key words: There is- no fear – bird flu -Mysore Zoo- Director- Ajith Kulkarni- clarified.