ಬೆಂಗಳೂರು:ಜೂ-27: ರೈತರು ಬೆಳೆದ ಬೆಳೆಗಳನ್ನು ಮಧ್ಯವರ್ತಿಗಳ ಹಾವಳಿ ಇಲ್ಲದೆ, ನೇರವಾಗಿ ಗ್ರಾಹಕರಿಗೆ ತಲುಪಿಸುವ ಹಿತದೃಷ್ಟಿಯಿಂದ ರೈತ-ಗ್ರಾಹಕ ಮಾರುಕಟ್ಟೆಯನ್ನು ತೆರೆಯಲು ತೋಟಗಾರಿಕೆ ಇಲಾಖೆ ಚಿಂತನೆ ನಡೆಸುತ್ತಿದೆ.
ಫಸಲು ಚೆನ್ನಾಗಿ ಬಂದಿದ್ದರೂ, ಮಾರುಕಟ್ಟೆಯಲ್ಲಿ ರೈತರಿಗೆ ಉತ್ತಮ ಬೆಲೆ ಸಿಗುವುದಿಲ್ಲ. ಮಧ್ಯವರ್ತಿಗಳ ಹಾವಳಿಯಿಂದ ಮಾರುಕಟ್ಟೆಗೆ ನೇರವಾಗಿ ರೈತ ಪ್ರವೇಶಿಸಲು ಸಾಧ್ಯವಾಗದ ಪರಿಸ್ಥಿತಿ ಇದೆ. ಇದನ್ನೆಲ್ಲ ಬಗೆಹರಿಸುವ ನಿಟ್ಟಿನಲ್ಲಿ ರೈತ ಉತ್ಪಾದಕರ ಸಂಸ್ಥೆಯ ಮೂಲಕ ರೈತ-ಗ್ರಾಹಕ ಮಾರುಕಟ್ಟೆ ಆರಂಭಿಸಲು ತೋಟಗಾರಿಕೆ ಇಲಾಖೆ ಚಿಂತನೆ ನಡೆಸುತ್ತಿದೆ.
ಈ ಹಿನ್ನೆಲೆಯಲ್ಲಿ ರೈತ-ಗ್ರಾಹಕ ಮಾರುಕಟ್ಟೆಯ ಪ್ರಾಯೋಗಿಕ ಪ್ರಯತ್ನವನ್ನು ನಡೆಸಿದೆ. ಬೆಂಗಳೂರಿನಲ್ಲಿ ನಡೆಸಿದ ಪ್ರಾಯೋಗಿಕ ಪ್ರಯತ್ನದಲ್ಲಿ ಗ್ರಾಹಕರಿಂದ ಉತ್ತಮ ಬೇಡಿಕೆ ಕೂಡ ವ್ಯಕ್ತವಾಗಿದೆ. ಅಲ್ಲದೆ, ರೈತ-ಗ್ರಾಹಕ ಮಾರುಕಟ್ಟೆಯನ್ನು ಆದಷ್ಟು ಬೇಗ ಆರಂಭಿಸಬೇಕು ಎಂಬ ಒತ್ತಡವೂ ಹೆಚ್ಚುತ್ತಿದೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಏನಿದು ರೈತ-ಗ್ರಾಹಕ ಮಾರುಕಟ್ಟೆ?: ರೈತರು ಬೆಳೆದ ಬೆಳೆಯನ್ನು ನೇರವಾಗಿ ಗ್ರಾಹಕರಿಗೆ ತಲುಪಿಸುವ ಪರಿಕಲ್ಪನೆ ಇದಾಗಿದೆ. ರೈತರ ಸಂಘಟನೆಯಾದ ರೈತ ಉತ್ಪಾದಕರ ಸಂಸ್ಥೆ (ಎಫ್ಪಿಒ) ಈ ಮಾರುಕಟ್ಟೆ ವ್ಯವಸ್ಥೆಯಲ್ಲಿ ಪ್ರಧಾನ ಪಾತ್ರ ವಹಿಸಲಿದೆ. ರೈತರು ಬೆಳೆದ ತರಕಾರಿ, ಹಣ್ಣು ಇತ್ಯಾದಿ ಆಹಾರ ಪದಾರ್ಥಗಳನ್ನು ಎಫ್ಪಿಒ ಸಂಗ್ರಹಿಸಿ, ಅದನ್ನು ನಗರ ಪ್ರದೇಶಕ್ಕೆ ತಂದು ನೇರವಾಗಿ ಗ್ರಾಹಕರಿಗೆ ಒದಗಿಸುತ್ತದೆ. ನಿತ್ಯವು ಗ್ರಾಹಕರಿಗೆ ತಾಜಾ ತರಕಾರಿ ಹಾಗೂ ಆಹಾರ ಪದಾರ್ಥಗಳನ್ನು ಒದಗಿಸುವ ವ್ಯವಸ್ಥೆ ಈ ಮಾರುಕಟ್ಟೆಯಿಂದ ಆಗಲಿದೆ.
ರೈತರಿಗೂ ಅನುಕೂಲ: ರೈತ-ಗ್ರಾಹಕ ಮಾರುಕಟ್ಟೆಗೆ ರೈತರ ಉತ್ಪನ್ನಗಳನ್ನು ಎಫ್ಪಿಒಗಳ ಮೂಲಕ ತರಲಾಗುತ್ತದೆ. ಇಲ್ಲಿ ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗುತ್ತದೆ. ಮಧ್ಯವರ್ತಿಗಳ ಹಾವಳಿ ಇಲ್ಲದೇ ಇರುವುದರಿಂದ ರೈತರಿಗೆ ಸಿಗುವ ಲಾಂಭಾಂಶವೂ ಹೆಚ್ಚಿರುತ್ತದೆ. ಎಫ್ಪಿಒಗಳಿಂದ ರೈತರಿಗೆ ಬೇಕಾದ ಪರಿಕರವನ್ನು ಬಾಡಿಗೆ ರೂಪದಲ್ಲಿ ನೀಡಲಾಗುತ್ತದೆ.
ಎಫ್ಪಿಒ ರೈತರ ಸಂಘಟನೆಯೇ ಆಗಿರುವುದರಿಂದ ರೈತರೆ ಅಲ್ಲಿ ಅಧ್ಯಕ್ಷರು, ನಿರ್ದೇಶಕರು ಆಗಿರುತ್ತಾರೆ. ಅಲ್ಲದೆ, ಕಂಪನಿ ಕಾಯ್ದೆಯಡಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿರುವುದರಿಂದ ರೈತರಿಗೆ ಇದರಿಂದ ಹೆಚ್ಚು ಅನುಕೂಲ ಆಗಲಿದೆ ಎಂದು ಇಲಾಖೆಯ ಅಧಿಕಾರಿ ವಿವರಿಸಿದರು.
ಮಾರ್ಕೆಟ್ ಲಿಂಕೇಜ್ ವ್ಯವಸ್ಥೆ: ನಗರ ಪ್ರದೇಶದ ಪ್ರತಿಷ್ಠಿತ ಕಾಲೋನಿಗಳು, ಅಪಾರ್ಟ್‌ಮೆಂಟ್ ಹಾಗೂ ವಸತಿ ಸಮುತ್ಛಯಗಳನ್ನೇ ಪ್ರಧಾನವಾಗಿಟ್ಟುಕೊಂಡು ರೈತ-ಗ್ರಾಹಕ ಮಾರುಕಟ್ಟೆ ತರೆಯಲಾಗುತ್ತದೆ. ಈಗಾಗಲೇ ಬೆಂಗಳೂರಿನಲ್ಲಿ ಪ್ರಯೋಗವನ್ನು ಮಾಡಿದ್ದೇವೆ. ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಇಲಾಖೆಗೆ ಪ್ರಸ್ತಾವನೆ ಬಂದ ತಕ್ಷಣವೇ ಸರ್ಕಾರದ ಮುಂದಿಟ್ಟು, ಇದರ ಅನುಷ್ಠಾನಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಮಾರ್ಕೆಟ್ ಲಿಂಕೇಜ್ ವ್ಯವಸ್ಥೆಯನ್ನು ಇದು ಹೊಂದಿರುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಎಫ್ಪಿಒ ಆರಂಭ: ರೈತ ಉತ್ಪಾದಕ ಸಂಸ್ಥೆ (ಎಫ್ಪಿಒ)ಯನ್ನು 2015-16ರಲ್ಲಿ ಕರ್ನಾಟಕದಲ್ಲಿ ಆರಂಭಿಸಲಾಗಿದೆ. ತೋಟಗಾರಿಕ ಇಲಾಖೆಯಿಂದ 99, ನಬಾರ್ಡ್‌ನಿಂದ 230 ಹಾಗೂ ಕೃಷಿ ಇಲಾಖೆಯಿಂದಲೂ ಎಫ್ಪಿಒಗಳನ್ನು ಆರಂಭಿಸಲಾಗಿದೆ. ಇದು ಸಂಪೂರ್ಣವಾಗಿ ರೈತರ ಸಂಘಟನೆಯಾಗಿದೆ.
ರೈತರಿಗೆ ಬೇಕಾದ ಎಲ್ಲ ಪರಿಕರದ ಜತೆಗೆ ರಸಗೊಬ್ಬರ, ಬೀಜ, ಬೀಜೋತ್ಪನ್ನಗಳನ್ನು ಇದರ ಮೂಲಕವೇ ನೀಡಲಾಗುತ್ತದೆ. ಎಫ್ಪಿಒಗಳನ್ನು ಆರಂಭಿಸಲು ಇಲಾಖೆಯಿಂದಲೇ ಸಹಾಯಧನ ನೀಡಲಾಗುತ್ತದೆ ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕಿ ಕ್ಷಮಾ ಪಾಟೀಲ್ ಮಾಹಿತಿ ನೀಡಿದರು.
ಕೃಪೆ:ವಿಜಯವಾಣಿ