ಉತ್ತರ ಪ್ರದೇಶ,ಜನವರಿ,2,2020(www.justkannada.in): ಕೊರೋನಾ ಲಸಿಕೆ ವಿಚಾರದಲ್ಲೂ ಇದೀಗ ರಾಜಕೀಯ ಶುರುವಾಗಿದ್ದು , ಬಿಜೆಪಿ ಮೇಲೆ ನಂಬಿಕೆ ಇಲ್ಲದ ಕಾರಣ ಕೊರೋನಾ ಲಸಿಕೆಯನ್ನ ನಾನು ಪಡೆಯುವುದಿಲ್ಲ ಎಂದು ಉತ್ತರ ಪ್ರದೇಶ ಮಾಜಿ ಸಿಎಂ ಹಾಗೂ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ತಿಳಿಸಿದ್ದಾರೆ.
ಈ ಕುರಿತು ಇಂದು ಮಾತನಾಡಿದ ಅಖಿಲೇಶ್ ಯಾದವ್, ಇದು ಕೋವಿಡ್ ಲಸಿಕೆ ಅಲ್ಲ. ಬಿಜೆಪಿ ಲಸಿಕೆ. ಬಿಜೆಪಿ ವ್ಯಾಕ್ಸಿನ್ ಮೇಲೆ ನನಗೆ ನಂಬಿಕೆ ಇಲ್ಲ. ನಾನಂತೂ ಈ ಕೊರೋನಾ ಲಸಿಕೆಯನ್ನ ತೆಗೆದುಕೊಳ್ಳುವುದಿಲ್ಲ. ಬಿಜೆಪಿ ಲಸಿಕೆಯನ್ನ ನಂಬುವುದಾದರೂ ಹೇಗೆ ಎಂದು ಕೇಂದ್ರ ಸರ್ಕಾರದ ಕೊರೋನಾ ಲಸಿಕೆ ವಿತರಣೆ ಯೋಜನೆಯನ್ನ ಟೀಕಿಸಿದ್ದಾರೆ.
ನನಗೆ ಬಿಜೆಪಿ ನೇತೃತ್ವದ ಸರ್ಕಾರ ವಿತರಿಸುವ ಲಸಿಕೆ ಮೇಲೆ ನಂಬಿಕೆ ಇಲ್ಲ. ಹೀಗಾಗಿ ನಾನು ಯಾವುದೇ ಕಾರಣಕ್ಕೂ ಲಸಿಕೆ ಪಡೆಯಲ್ಲ. ನಮ್ಮ ಪಕ್ಷ ಸರ್ಕಾರ ರಚಿಸಿದರೇ ಎಲ್ಲರಿಗೂ ಕೊರೋನಾ ಲಸಿಕೆಯನ್ನ ಉಚಿತವಾಗಿ ವಿತರಿಸುತ್ತೇವೆ ಎಂದು ಅಖಿಲೇಶ್ ಯಾದವ್ ತಿಳಿಸಿದ್ದಾರೆ.
ಇನ್ನು ಅಖಿಲೇಶ್ ಯಾದವ್ ಅವರ ಹೇಳಿಕೆಗೆ ಬಿಜೆಪಿ ನಾಯಕರು ಕಿಡಿಕಾರಿದ್ದು, ಇದು ವಿಜ್ಞಾನಿಗಳಿಗೆ ಮಾಡಿರುವ ಅಪಮಾನ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ಸಂಕ್ರಾಂತಿ ವೇಳೆಗೆ ಉತ್ತರ ಪ್ರದೇಶದಲ್ಲಿ ಕೊರೋನಾ ಲಸಿಕೆ ಸಿಗಲಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.
Key words: This – BJP’s –vaccine-Akhilesh Yadav – Corona vaccine – not taken