ಬೆಂಗಳೂರು: ಗೋಹತ್ಯೆ ನಿಷೇಧ ಕಾಯ್ದೆ ಅನುಷ್ಠಾನದ ನಂತರ ವಿಜಯಪುರ ಜಿಲ್ಲೆಯ ಕೂಡಗಿಯಲ್ಲಿ ಗೋಹತ್ಯೆ ಮಾಡಿ ಗೋಮಾಂಸ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಸಾರ್ವಜನಿಕರ ಮಾಹಿತಿ ಮೇರೆಗೆ ಪೊಲೀಸ್ ಇಲಾಖೆ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಕೃತ್ಯದಲ್ಲಿ ತೊಡಗಿದ್ದ ವ್ಯಕ್ತಿಯನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ ಎಂದು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ.
ಕೂಡಗಿ ಗ್ರಾಮದ ಬಳಿಯ ರೈಲ್ವೆ ಹಳಿ ಹತ್ತಿರದ ಖಾಸಗಿ ಶೆಡ್ ವೊಂದರಲ್ಲಿ ವ್ಯಕ್ತಿಯೊಬ್ಬ ಎತ್ತೊಂದನ್ನು ಕತ್ತರಿಸಿ ಮಾಂಸ ಮಾರಾಟದಲ್ಲಿ ತೊಡಗಿದ್ದ ವೇಳೆ ಕೂಡಗಿ ಪಿಎಸ್ಐ ರೇಣುಕಾ ಜಕನೂರು ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಪೊಲೀಸ್ ಇಲಾಖೆಯ ಕ್ಷಿಪ್ರ ಕಾರ್ಯಕ್ಕೆ ಸಚಿವರು ಶ್ಲಾಘಿಸಿದ್ದಾರೆ.
ಸಿಖಂದರ್ಸಾಬ್ ರಾಜಾಸಾಬ್ ಬೇಪಾರಿ (35) ಬಂಧಿತ ಆರೋಪಿ. ಒಂದು ಎತ್ತನ್ನು ಕತ್ತರಿಸಿ ಮಾಂಸ ಮಾರಾಟ ಮಾಡುತ್ತಿದ್ದ ಸಾರ್ವಜನಿಕರ ಮಾಹಿತಿ ಮೆರೆಗೆ ಕೂಡಗಿ ಪೊಲೀಸರು ಸ್ಥಳಕ್ಕೆ ಧಾವಿಸಿ ಅಲ್ಲೇ ಇದ್ದ ಇನ್ನೊಂದು ಎತ್ತನ್ನು ರಕ್ಷಿಸಿ ಯಲಗೂರು ಗೋಶಾಲೆಗೆ ನೀಡಿದ್ದಾರೆ. ಕೂಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೋಹತ್ಯೆ ನಿಷೇಧ ಕಾಯ್ದೆಯ ಅನುಷ್ಠಾನದ ನಂತರ ವಿಜಯಪುರ ಜಿಲ್ಲೆಯಲ್ಲಿ ರಾಜ್ಯದ ಮೊದಲ ಪ್ರಕರಣ ದಾಖಲಾಗಿದ್ದು ಸಾರ್ವಜನಿಕರ ಸಮಯ ಪ್ರಜ್ಞೆ ಹಾಗೂ ಪೊಲೀಸ್ ಇಲಾಖೆಯ ಕಾರ್ಯಾಚರಣೆಯಿಂದ ಒಂದು ಗೋವಿನ (ಎತ್ತು) ರಕ್ಷಣೆ ಆಗಿದ್ದು ಸಂತಸ ತಂದಿದೆ.
ಸಾರ್ವಜನಿಕರಲ್ಲಿ ಮನವಿ
ಗೋವುಗಳ ಅಕ್ರಮ ಸಾಗಣೆ ಮತ್ತು ಗೋಹತ್ಯೆ ಮಾಡಿ ಮಾಂಸ ಮಾರಾಟ ಮಾಡುವುದು ಗಮನಕ್ಕೆ ಬಂದರೆ ತಕ್ಷಣದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಿ ಗೋವುಗಳ ರಕ್ಷಣೆಗೆ ಮುಂದಾಗಿ ನಿಮ್ಮ ಸಮಯ ಪ್ರಜ್ಞೆ ಮೂಕ ಪ್ರಾಣಿಯ ಜೀವ ಉಳಿಸಬಲ್ಲದು. ಕಾನೂನನ್ನು ಕೈಗೆತ್ತಿಕೊಳ್ಳದೆ ಆರಕ್ಷರ ಸಹಾಯದಿಂದ ರಕ್ಷಣೆಗೆ ಮುಂದಾಗಬೇಕು ಎಂದು ಸಚಿವರು ತಿಳಿಸಿದ್ದಾರೆ.