ಪುಣೆ,ಡಿಸೆಂಬರ್,08,2020(www.justkannada.in) : ಕೃಷಿಕರ ಹಿತಾಸಕ್ತಿಗೆ ಅನುಗುಣವಾಗಿ ಕಾರ್ಯನಿರ್ವಹಿಸುವಂತೆ ಸರ್ಕಾರದ ಮೇಲೆ ಒತ್ತಡ ತರುವ ನಿಟ್ಟಿನಲ್ಲಿ, ಈ ಆಂದೋಲನ ದೇಶವ್ಯಾಪಿ ನಡೆಯಬೇಕು ಎಂದು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಕರೆ ನೀಡಿದ್ದಾರೆ.
ಕೇಂದ್ರದ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಮಹಾರಾಷ್ಟ್ರದ ಅಹಮದ್‌ನಗರ್ ಜಿಲ್ಲೆಯ ರಾಳೆಗಾಂವ್ ಸಿದ್ದಿ ಗ್ರಾಮದಲ್ಲಿ ಮಂಗಳವಾರ ಉಪವಾಸ ಸತ್ಯಾಗ್ರಹ ಆರಂಭಿಸಿದ ಅಣ್ಣಾ ಹಜಾರೆ ಅವರು, ರೈತರು ನಡೆಸುತ್ತಿರುವ ರಾಷ್ಟ್ರವ್ಯಾಪಿ ಹೋರಾಟ ಹಾಗೂ ‘ಭಾರತ್ ಬಂದ್’ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಸರ್ಕಾರಗಳು ಭರವಸೆಗಳನ್ನು ಮಾತ್ರ ನೀಡಿದವು. ಆದರೆ, ರೈತರ ಬೇಡಿಕೆಗಳನ್ನು ಎಂದಿಗೂ ಈಡೇರಿಸಲಿಲ್ಲ. ದೆಹಲಿಯಲ್ಲಿ ನಡೆಯುತ್ತಿರುವ ಈ ಆಂದೋಲನವು ದೇಶಾದ್ಯಂತ ವಿಸ್ತರಿಸಬೇಕೆಂದು ದೇಶದ ಜನರಲ್ಲಿ ನಾನು ಮನವಿ ಮಾಡುತ್ತಿದ್ದೇನೆ ಎಂದಿದ್ದಾರೆ.
ರೈತರ ಹಿತಾಸಕ್ತಿಗಾಗಿ ಕೆಲಸ ಮಾಡಲು ಸರ್ಕಾರದ ಮೇಲೆ ಒತ್ತಡ ತರುವಂತಹ ವಾತಾವರಣವನ್ನು ಈ ಆಂದೋಲನ ಸೃಷ್ಟಿಸಬೇಕು. ಆದರೆ, ಯಾರೂ ಹಿಂಸಾಚಾರಕ್ಕೆ ಮುಂದಾಗಬಾರದು ಎಂದು ಮನವಿ ಮಾಡಿದರು.
ರೈತರು ಹೋರಾಟದ ಮೂಲಕ ತಮ್ಮ ಸಮಸ್ಯೆಗಳನ್ನು ಬಗೆಹರಿಸಲು ಇದು ಸರಿಯಾದ ಸಮಯ. ನಾನು ಹಿಂದೆಯೂ ರೈತರ ಹೋರಾಟವನ್ನು ಬೆಂಬಲಿಸುತ್ತಿದ್ದೆ. ಅದನ್ನು ಈಗಲೂ ಮುಂದುವರಿಸುತ್ತೇನೆ ಎಂದು ಹೇಳಿದ್ದಾರೆ.
‘ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗಕ್ಕೆ (ಸಿಎಸಿಪಿ) ಸ್ವಾಯತ್ತತೆ ನೀಡುವ ಜತೆಗೆ, ಕೃಷಿ ತಜ್ಞ ಎಂ. ಎಸ್.ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ಜಾರಿಗೆ ತರಬೇಕು. ಒಂದೊಮ್ಮೆ ಇದು ಜಾರಿಗೆ ತರಲು ವಿಫಲವಾದರೆ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
key words : This-movement-farmers-should-take-place- nationwide-social-worker-Anna Hazare