ಬೆಂಗಳೂರು,ಮೇ,2,2019(www.justkannada.in): ಹಿರಿಯ ನಟ ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯ ಅವರು ಇಂದು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದು ಇಂದು ಸಂಜೆ ಅಂತ್ಯಕ್ರಿಯೆ ನಡೆಯಲಿದೆ.
ಮಾಸ್ಟ್ ಹಿರಣ್ಣಯ್ಯ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆಯಲು ನಟರು ಕಲಾವಿದರ ದಂಡೇ ಆಗಮಿಸುತ್ತಿದೆ. ಇಂದು ಸಂಜೆ ಬನಶಂಕರಿ ಚಿತಗಾರದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಮಾಸ್ಟರ್ ಹಿರಣ್ಣಯ್ಯ ಅವರ ಹಿನ್ನೆಲೆ..
ಲಂಚಾವತಾರ ನಾಟಕದಿಂದ ಮನೆ ಮಾತಾಗಿದ್ದ ಮಾಸ್ಟರ್ ಹಿರಣ್ಣಯ್ಯ ಮಾತಿನಲ್ಲೇ ಮೋಡಿ ಮಾಡುತ್ತಿದ್ದರು. ಮಾಸ್ಟರ್ ಹಿರಣ್ಣಯ್ಯನವರು ಹುಟ್ಟಿದ್ದು ಮೈಸೂರು. ತಂದೆ ನಟ, ಕಲ್ಚರ್ಡ್ ಕಮೆಡಿಯನ್ ಎನಿಸಿದ್ದ ಕೆ. ಹಿರಣ್ಣಯ್ಯ, ತಾಯಿ ಶಾರದಮ್ಮ. ಮಾಸ್ಟರ್ ಹಿರಣ್ಣಯ್ಯ ಅವರು ತಂದೆಯೊಡನೆ ಮದರಾಸಿಗೆ ಪಯಣ ಬೆಳೆಸಿ ಮದರಾಸಿನಲ್ಲಿ ಶಾಲೆಗೆ ಸೇರಿ ತಮಿಳು, ತೆಲುಗು ಮತ್ತು ಇಂಗ್ಲಿಷ್ ಭಾಷೆಗಳನ್ನ ಕಲಿಯುತ್ತಾರೆ. ಹಾಗೆಯೇ ತಂದೆಯಿಂದ ಕನ್ನಡದ ಬಾಯಿಪಾಠ, ಸ್ತೋತ್ರ ಪಾಠಗಳು ಕಲಿತುಕೊಳ್ಳುತ್ತಾರೆ.
ತದನಂತರ ಮೈಸೂರಿಗೆ ಬಂದ ಮಾಸ್ಟರ್ ಹಿರಣ್ಣಯ್ಯ ಅವರು ಸೇರಿದ್ದು ಬನುಮಯ್ಯ ಮಾಧ್ಯಮಿಕ ಶಾಲೆ. ಓದುತ್ತಲೇ ಮಾಸ್ಟರ್ ಹಿರಣ್ಣಯ್ಯ ಅವರು ಸಂಪಾದನೆಯ ದಾರಿ ಹಿಡಿಯುತ್ತಾರೆ. ಸಾಧ್ವಿ, ಮೈಸೂರು ಪತ್ರಿಕೆಯ ಮಾರಾಟ ಮಾಡುತ್ತಾ ಹಣಗಳಿಸುತ್ತಾರೆ ಆ ಹಣದಿಂದ ಶಾಲೆಯ ಫೀಸು ಕಟ್ಟಿ ಓದುತ್ತಾರೆ. ಇದಾದ ಬಳಿಕ ಮುಂದೆ ಸೇರಿದ್ದು ಇಂಟರ್ ಮೀಡಿಯೆಟ್ ಕಾಲೇಜಿಗಾಗಿ ಶಾರದಾವಿಲಾಸ ಕಾಲೇಜು.
ತಂದೆ ಕೆ. ಹಿರಣ್ಣಯ್ಯನವರು ೧೯೪೦ರಲ್ಲಿ ರಚಿಸಿ, ನಿರ್ದೇಶಿಸಿದ ಚಲನಚಿತ್ರ ‘ವಾಣಿ’ಯಲ್ಲಿ ಬಾಲನಟನಾಗಿ ಮಾಸ್ಟರ್ ಹಿರಣ್ಣಯ್ಯ ನಟನೆಗೆ ಪಾದಾರ್ಪಣೆ ಮಾಡುತ್ತಾರೆ. ೧೯೪೮ರಲ್ಲಿ ರಂಗಭೂಮಿಯಲ್ಲಿ ಚಿಕ್ಕ ಪಾತ್ರಮಾಡಲು ಹೋಗಿ ಸೋಲುತ್ತಾರೆ. ನಂತರ ಛಲದಿಂದ ಕಾಲೇಜಿನಲ್ಲಿ ಸಂಘ ಕಟ್ಟಿ ಹಿರಣ್ಣಯ್ಯ ಅವರು ‘ಆಗ್ರಹ ಎಂಬ ನಾಟಕವನ್ನ ಪ್ರದರ್ಶಿಸುತ್ತಾರೆಕ. ಅದ್ಭುತ ಅಭಿನಯದಲ್ಲಿ ನಾಟಕ ಗೆದ್ದರೂ ಅಭಿನಯಿಸಿದವರೆಲ್ಲರೂ ತರಗತಿಯಲ್ಲಿ ನಪಾಸಾಗುತ್ತಾರೆ.
ಈ ನಡುವೆ ತಂದೆಯ ಮರಣದ ನಂತರ ಅ.ನ.ಕೃ. ಮತ್ತು ಮಿತ್ರರ ಸಹಾಯದಿಂದ ಮಾಸ್ಟರ್ ಹಿರಣ್ಣಯ್ಯ ನಾಟಕ ಕಂಪನಿ ಸ್ಥಾಪಿಸಿ ಅದರಲ್ಲಿ ನಷ್ಟ ಅನುಭವಿಸುತ್ತಾರೆ. ಬಳಿಕ ಪುನಃ ಹಿರಣ್ಣಯ್ಯ ಮಿತ್ರ ಮಂಡಲಿಯನ್ನ ಆರಂಭಿಸುತ್ತಾರೆ. ಲಂಚಾವತಾರ ಎಂಬ ನಾಟಕವನ್ನ ರಚಿಸಿ ಪ್ರಯೋಗ ಮಾಡುತ್ತಾರೆ. ೧೯೬೨ರಲ್ಲಿ ಮೈಸೂರು ಮಹಾರಾಜರು ಮಾಸ್ಟರ್ ಹಿರಣ್ಣಯ್ಯ ಅವರಿಗೆ ಸನ್ಮಾನಿಸಿ ನಟರತ್ನಾಕರ ಬಿರುದು ನೀಡಲಾಗುತ್ತದೆ.
ಬಳಿಕ ಜಯಚಾಮರಾಜೇಂದ್ರ ಒಡೆಯರ ಸಮ್ಮುಖದಲ್ಲಿ ಜಗನ್ಮೋಹಿನ ಅರಮನೆಯಲ್ಲಿ ನಾಟಕ ಪ್ರದರ್ಶಿಸುತ್ತಾರೆ. ನಂತರ ನಡುಬೀದಿ ನಾರಾಯಣದಲ್ಲಿ ತೀರ್ಥರೂಪುವಾಗಿ, ಭ್ರಷ್ಟಾಚಾರದಲ್ಲಿ ಧಫೇದಾರ್ ಮುರಾರಿಯಾಗಿ, ಸದಾರಮೆಯಲ್ಲಿ ಕಳ್ಳನಾಗಿ, ಆದಿಮೂರ್ತಿಯಾಗಿ, ಕಪಿಮುಷ್ಠಿಯಲ್ಲಿ ಜಾರ್ಜ್ ಆಗಿ, ಕಸ್ತೂರಿಯಾಗಿ, ಮಕ್ಮಲ್ ಟೋಪಿಯಲ್ಲಿ ನಾಣಿಯಾಗಿ, ಹೀಗೆ ಹಲವಾರು ನಾಟಕಗಳನ್ನು ರಂಗಕ್ಕೆ ತಂದು ಕೀರ್ತಿ ಗಳಿಸುತ್ತಾರೆ. ಇಪ್ಪತ್ತೈದಕ್ಕೂ ಹೆಚ್ಚು ನಾಟಕಗಳನ್ನು ಬರೆದು ಪ್ರದರ್ಶಿಸಿ ಜಯಭೇರಿ ಭಾರಿಸುತ್ತಾರೆ.
ಸಮಾಜದ ಓರೆಕೋರೆಗಳನ್ನು ತಿದ್ದುವುದೇ ಪ್ರತಿ ನಾಟಕದ ಪ್ರಮುಖ ವಸ್ತುವಾಗಿಸಿಕೊಂಡ ಮಾಸ್ಟರ್ ಹಿರಣ್ಣಯ್ಯ ಅವರು ಹಲವಾರು ಬಾರಿ ವಿದೇಶದಲ್ಲೂ ನಾಟಕಗಳನ್ನ ಪ್ರದರ್ಶಿಸುತ್ತಾರೆ. ಇನ್ನು ಇವರ ಸಾಧನೆಗೆ ಸಂದ ಪ್ರಶಸ್ತಿ ಗೌರವಗಳಿಗೆ ಲೆಕ್ಕವಿಲ್ಲ.
ಮಾಸ್ಟರ್ ಹಿರಣ್ಣಯ್ಯ ಅವರಿಗೆ ಸಂದ ಪ್ರಶಸ್ತಿಗಳು….
ನಟರತ್ನಾಕರ, ಕಲಾಗಜಸಿಂಹ, ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ನಾಟಕ ಅಕಾಡಮಿ ಪ್ರಶಸ್ತಿ, ರಂಗಭೂಮಿ ಪ್ರಶಸ್ತಿ, ಗುಬ್ಬಿವೀರಣ್ಣ ಪ್ರಶಸ್ತಿ, ನೂಜೆರ್ಸಿ, ವಾಷಿಂಗ್‌ಟನ್ ಡಿ.ಸಿ., ಬಾಸ್ಟನ್, ಹೂಸ್ಟನ್, ನೂಯಾರ್ಕ್ ಮುಂತಾದೆಡೆಗಳಿಂದ ಸಂದ ಸನ್ಮಾನ, ನವರತ್ನಾರಾಂ ಪ್ರಶಸ್ತಿ, ಮದರಾಸು, ಹೈದರಾಬಾದು ಕನ್ನಡ ಸಂಘಗಳಿಂದ ಸನ್ಮಾನ.
Key words: This was -way – senior actor -Master Hirannaiah -growing up.