ರಾಜಧಾನಿ ಹೆಸರಿಗಷ್ಟೇ ಸಾವಿರ ಕೆರೆಗಳ ನಗರ: ಭೂಗಳ್ಳರ ದಾಹಕ್ಕೆ ನೂರಾರು ಕೆರೆ ಬಲಿ

ಬೆಂಗಳೂರು:ಮೇ-3: ಒಂದು ಕಾಲದಲ್ಲಿ ‘ಸಾವಿರ ಕೆರೆಗಳ ನಗರ’ ಎಂದೇ ಕರೆಸಿಕೊಳ್ಳುತ್ತಿದ್ದ ಬೆಂಗಳೂರಿನಲ್ಲೀಗ ಕೆರೆಗಳನ್ನು ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಭೂಗಳ್ಳರ, ಸರ್ಕಾರಿ ಸಂಸ್ಥೆಗಳ ದಾಹದಿಂದಾಗಿ ಕೆರೆಗಳು ಬಡಾವಣೆಗಳಾಗಿ ಪರಿವರ್ತನೆಗೊಂಡಿವೆ. ಅದರ ಪರಿಣಾಮ ಬೆಂಗಳೂರಿನಲ್ಲೀಗ ನೀರಿಗೆ ಹಾಹಾಕಾರ ಶುರುವಾಗುವಂತಾಗಿದೆ.

ಬೆಂಗಳೂರು ನಗರ ಹಾಗೂ ಗ್ರಾಮೀಣ ಭಾಗದಲ್ಲಿ 1,547 ಕೆರೆ ಮತ್ತು 3 ಸಾವಿರ ಕುಂಟೆಗಳಿದ್ದವು. ಅದರಲ್ಲಿ ಬೆಂಗಳೂರು ನಗರದಲ್ಲೇ 23,366 ಎಕರೆ ವಿಸ್ತೀರ್ಣದ 837 ಕೆರೆಗಳಿದ್ದವು. ಸರ್ಕಾರಿ ದಾಖಲೆಗಳ ಪ್ರಕಾರ ಈಗ 184 ಕೆರೆಗಳು ಮಾತ್ರ ಉಳಿದಿವೆ. ಅವುಗಳಲ್ಲೂ ಶೇ.90 ಒತ್ತುವರಿಯಾಗಿದ್ದು, ಶೇ.98 ಭಾಗ ಕೊಳಚೆ ನೀರು ತುಂಬಿ ಸಂಪೂರ್ಣ ಕಲುಷಿತಗೊಂಡಿವೆ. ಹೀಗಾಗಿ ನಗರಕ್ಕೆ ಪ್ರಮುಖ ನೀರಿನ ಮೂಲವಾಗಬೇಕಿದ್ದ ಕೆರೆಗಳು ಯಾವುದೇ ಪ್ರಯೋಜನಕ್ಕೆ ಬರದ ಸ್ಥಿತಿಗೆ ಬಂದು ತಲುಪಿವೆ.

ಸರ್ಕಾರವೇ ಕೆರೆ ಮುಚ್ಚಿದೆ: ನಗರ ಬೆಳೆಯುತ್ತಿದ್ದಂತೆ ಇಲ್ಲಿನ ಕೆರೆಗಳನ್ನು ನಾಶ ಮಾಡಲು ಖುದ್ದು ಸರ್ಕಾರವೇ ಬೆಂಬಲ ನೀಡಿದೆ. ನಗರೀಕರಣದ ಸಬೂಬು ಹೇಳಿ 23ಕ್ಕೂ ಹೆಚ್ಚಿನ ಕೆರೆಗಳನ್ನು ಮುಚ್ಚಿದೆ. ಬಡಾವಣೆ ಅಭಿವೃದ್ಧಿ, ಕೊಳೆಗೇರಿ ನಿವಾಸಿ ಗಳಿಗೆ ಮನೆ, ಬಸ್ ನಿಲ್ದಾಣ ನಿರ್ಮಾಣ ಸೇರಿ ಹಲವು ಅಭಿವೃದ್ಧಿ ಕಾರ್ಯ ಕೈಗೊಂಡಿದೆ.

ಜಲಚರಕ್ಕೆ, ಕುಡಿಯಲು ಯೋಗ್ಯವಲ್ಲ: ಬೆಂಗಳೂರು ಬೆಳೆದಂತೆ ಮತ್ತು ಇಲ್ಲಿನ ಜನಸಂಖ್ಯೆ ಹೆಚ್ಚಿದಂತೆಲ್ಲ ಕೆರೆಗಳ ಸಂಖ್ಯೆ ಕಡಿಮೆಯಾಗಿದೆ. ಕಳೆದ 50 ವರ್ಷದಿಂದೀಚೆಗೆ ಕೆರೆಗಳ ಒತ್ತುವರಿ ಹೆಚ್ಚಾಗಿದೆ. 1960ರಲ್ಲಿ 280 ಕೆರೆಗಳಿದ್ದವು. ಅದರಲ್ಲೀಗ 184 ಕೆರೆಗಳು ಉಳಿದಿವೆ. ಹೀಗೆ ಜೀವಂತವಿರುವ ಕೆರೆಗಳ ಪೈಕಿ ತಕ್ಕಮಟ್ಟಿಗೆ ಜಲಚರ ಜೀವಿಸುವಷ್ಟು ಆರೋಗ್ಯ ಉಳಿಸಿಕೊಂಡಿರುವ ಕೆರೆಗಳು 18 ಮಾತ್ರ. ಬೆಳ್ಳಂದೂರು, ವರ್ತರು ಕೆರೆ ಸೇರಿ ನಗರದ ಬಹುತೇಕ ಕೆರೆ ನೀರು ಮತ್ತು ಹೂಳಿನಲ್ಲಿ ಸುಮಾರು 16 ರಿಂದ 18 ಬಗೆಯ ವಿಷಕಾರಿ ಲೋಹಗಳು ಕರಗಿವೆ.

ಒಂದು ಅಂದಾಜಿನ ಪ್ರಕಾರ ಈಗಿರುವ ಕೆರೆಗಳನ್ನು ಸಂರಕ್ಷಿಸಿ, ನೀರನ್ನು ಶುದ್ಧೀಕರಿಸಿದರೆ ನಗರಕ್ಕೆ ಬೇಕಾಗುವ ನೀರಿನ ಶೇ.50 ಪೂರೈಸಬಹುದಾಗಿದೆ. ಆದರೆ, ಕೆರೆಯ ಪ್ರತಿ ಲೀಟರ್ ನೀರಿನಲ್ಲಿ ಶೇ.55 ಎಂ.ಜಿ.ಗಿಂತ ಹೆಚ್ಚಿನ ಪ್ರಮಾಣ ನೈಟ್ರೇಟ್ ಅಂಶವಿದೆ. ಇಂತಹ ನೀರು ಸೇವನೆ ಮಾಡುವುದರಿಂದ ಕ್ಯಾನ್ಸರ್ ಸಂಬಂಧಿ ಕಾಯಿಲೆಗಳು ಹಾಗೂ ಬ್ಲೂಬೇಬಿ ಸಿಂಡ್ರೋಮ್ಂತಹ ಮಾರಣಾಂತಿಕ ಕಾಯಿಲೆಗಳು ಬರುತ್ತಿವೆ. ಇಂತಹ ನೀರು ಅಂತರ್ಜಲ ಸೇರ್ಪಡೆಯಿಂದಾಗಿ ಬೋರ್​ವೆಲ್ ನೀರು ಸೇವನೆಯೂ ಆರೋಗ್ಯಕ್ಕೆ ಮಾರಕವಾಗಿದೆ.

ಸಂರಕ್ಷಣಾ ವರದಿಗಳಿಗೆ ಬೆಲೆಯಿಲ್ಲ

ಕೆರೆ ಒತ್ತುವರಿ ಹಾಗೂ ಸಂರಕ್ಷಣೆ ಬಗ್ಗೆ ಹಲವು ಸಮಿತಿಗಳು ಅಧ್ಯಯನ ಮಾಡಿ ಸಾಲುಸಾಲು ವರದಿ ಮಂಡಿಸಿವೆ. ಸರ್ಕಾರ ಆ ವರದಿಗಳನ್ನು ಇಟ್ಟುಕೊಂಡು ಧೂಳು ತಿನ್ನುವಂತೆ ಮಾಡಿದೆ ಹೊರತು ಕ್ರಮ ಕೈಗೊಂಡಿಲ್ಲ. 2012ರಲ್ಲಿ ಲೆಕ್ಕಪರಿಶೋಧನಾ ವರದಿಯಲ್ಲಿ 1969ರಿಂದ 2002ರವರೆಗೆ ಬೆಂಗಳೂರಿನ 1,039 ಕೆರೆಗಳು ಅತಿಕ್ರಮಣಕ್ಕೆ ಒಳಗಾಗಿವೆ ಎಂದು ಉಲ್ಲೇಖಿಸಲಾಗಿದೆ. 1985ರ ಲಕ್ಷ್ಮಣರಾಯ ವರದಿಯಲ್ಲಿ ಬೆಂಗಳೂರಿನಲ್ಲಿ ಒಟ್ಟು 262 ಕೆರೆಗಳಿವೆ. ಅದರಲ್ಲಿ 46 ಕೆರೆಗಳು ನಿರುಪಯುಕ್ತವಾಗಿವೆ. ಉಳಿದಂತೆ 81 ಕೆರೆಗಳನ್ನು ತ್ವರಿತವಾಗಿ ಸಂರಕ್ಷಿಸಬೇಕಿದೆ ಎಂಬ ಶಿಫಾರಸು ವರದಿ ನೀಡಲಾಗಿತ್ತು. 2007ರಲ್ಲಿ ಎ.ಟಿ. ರಾಮಸ್ವಾಮಿ ಅಧ್ಯಕ್ಷತೆಯ ಸಮಿತಿ ಕಳೆದ 20 ವರ್ಷದಲ್ಲಿ ಭೂಗಳ್ಳರು ಕೆರೆ ಒತ್ತುವರಿ ಮಾಡಿಕೊಂಡಿರುವ ಬಗ್ಗೆ ವರದಿ ಸಿದ್ಧಪಡಿಸಿ ಸಲ್ಲಿಸಿತ್ತು. 33 ಸಾವಿರ ಒತ್ತುವರಿದಾರರಿಂದ 27 ಸಾವಿರ ಎಕರೆ ಪ್ರದೇಶ ಒತ್ತುವರಿ ಆಗಿದೆ. 1961ರಲ್ಲಿ 261 ಕೆರೆಗಳಿದ್ದವು.ಈಗ 33 ಕೆರೆಗಳು ಮಾತ್ರ ಕಾಣುತ್ತಿವೆ. ಉಳಿದ ಕೆರೆಗಳು ಮಾಲಿನ್ಯ ಹಾಗೂ ಒತ್ತುವರಿಯಿಂದ ಮಾಯವಾಗಿವೆ ಎಂದು ತಿಳಿಸಿದೆ. 2014ರಲ್ಲಿ ರಾಜ್ಯ ಸರ್ಕಾರ, ಬೆಂಗಳೂರು ಮತ್ತು ಸುತ್ತಮುತ್ತಲಿನ ಕೆರೆ ಒತ್ತುವರಿ ಆಧ್ಯಯನ ಮಾಡಲು ಸದನ ಸಮಿತಿ ರಚನೆ ಮಾಡಿತು. ಆ ಸಮಿತಿ ನೀಡಿದ ವರದಿಗೂ ಸರ್ಕಾರ ಯಾವುದೇ ಬೆಲೆ ನೀಡಿಲ್ಲ.

ಕುಡಿಯಲು ಕೆರೆ ನೀರು ಬಳಸಲಾಗುತ್ತಿತ್ತು

ಕೆಂಪೇಗೌಡ, ಬ್ರಿಟಿಷರ ಕಾಲದಲ್ಲಿ ನಿರ್ವಣವಾದ ಕೆರೆಗಳು 20ನೇ ಶತಮಾನದ ಆರಂಭದಲ್ಲಿ ಬೆಂಗಳೂರಿಗರಿಗೆ ನೀರು ಪೂರೈಸುವ ಕೆಲಸ ಮಾಡುತ್ತಿದ್ದವು. ಧರ್ವಂಬುಧಿ ಕೆರೆ, ಮಿಲ್ಲರ್ಸ್ ಟ್ಯಾಂಕ್, ಸ್ಯಾಂಕಿ, ಹಲಸೂರು ಕೆರೆಗಳಿಂದ ಜನರಿಗೆ ನೀರು ಸರಬರಾಜು ಮಾಡಲಾಗುತ್ತಿತ್ತು. ಬಳಿಕ ಕೆರೆಗಳು ಹಾಳಾಗುತ್ತಿದ್ದಂತೆ ಪರ್ಯಾಯ ಮೂಲಗಳ ಮೊರೆ ಹೋದ ಸರ್ಕಾರ 1896ರಲ್ಲಿ ಹೆಸರಘಟ್ಟ, 1933ರಲ್ಲಿ ತಿಪ್ಪಗೊಂಡನಹಳ್ಳಿ ಜಲಾಶಯದಿಂದ ಕುಡಿಯುವ ನೀರು ಪೂರೈಸಲು ಶುರು ಮಾಡಿತು. ವಿಪರ್ಯಾಸವೆಂದರೆ ಈಗ ತಿಪ್ಪಗೊಂಡನಹಳ್ಳಿ ಹಾಗೂ ಹೆಸರುಘಟ್ಟ ಜಲಾಶಯಗಳೂ ಕಲುಷಿತಗೊಂಡಿದ್ದು ನೀರು ಪೂರೈಕೆ ಸ್ಥಗಿತಗೊಳಿಸಲಾಗಿದೆ. ಈಗ ಕೇವಲ ಕಾವೇರಿ ನೀರನ್ನೇ ನೆಚ್ಚಿಕೊಳ್ಳುವಂತಾಗಿದೆ.

148 ಕೆರೆ ಜೀವಂತ?

ಬೆಂಗಳೂರಿನಲ್ಲಿನ ಕೆರೆಗಳ ಪೈಕಿ 167 ಕೆರೆಗಳನ್ನು ಬಿಬಿಎಂಪಿ ನಿರ್ವಹಣೆ ಮಾಡುತ್ತಿದೆ. ಅದರಲ್ಲಿ 29 ಕೆರೆಗಳನ್ನು ಈಗಾಗಲೇ ಅಭಿವೃದ್ಧಿಪಡಿಸಿದ್ದೇವೆಂದು ಅಧಿಕಾರಿಗಳು ಹೇಳುತ್ತಿದ್ದಾರೆ. 93 ಕೆರೆಗಳ ಅಭಿವೃದ್ಧಿ ಕಾರ್ಯ ಚಾಲ್ತಿಯಲ್ಲಿದ್ದು, 26 ಕೆರೆ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ಉಳಿದಂತೆ 19 ಕೆರೆಗಳು ಬೇರೆ ಬೇರೆ ಕಾರ್ಯಕ್ಕೆ ಬಳಕೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಒಟ್ಟಾರೆ ಬಿಬಿಎಂಪಿ ಪ್ರಕಾರ 148 ಕೆರೆಗಳು ಜೀವಂತವಾಗಿವೆ.

ಬಿಡಿಎಯಿಂದ 23 ಕೆರೆಗಳ ಡಿನೋಟಿಫಿಕೇಷನ್

ಕೆರೆಗಳ ಒತ್ತುವರಿ ಮತ್ತು ಅತಿಕ್ರಮಣದಲ್ಲಿ ಸರ್ಕಾರದ ಸಂಸ್ಥೆಗಳು ಹಿಂದೆ ಬಿದ್ದಿಲ್ಲ. ರಸ್ತೆ, ವಸತಿ, ಶುದ್ಧ ನೀರಿನ ಘಟಕ, ಉದ್ಯಾನ ಸೇರಿ ವಿವಿಧ ಅಭಿವೃದ್ಧಿ ಕಾರ್ಯಗಳ ಹೆಸರಿನಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಒಟ್ಟು 23 ಕೆರೆಗಳನ್ನು ಡಿನೋಟಿಫಿಕೇಷನ್ ಮಾಡಿದೆ.

ಕೃಪೆ:ವಿಜಯವಾಣಿ

ರಾಜಧಾನಿ ಹೆಸರಿಗಷ್ಟೇ ಸಾವಿರ ಕೆರೆಗಳ ನಗರ: ಭೂಗಳ್ಳರ ದಾಹಕ್ಕೆ ನೂರಾರು ಕೆರೆ ಬಲಿ
thousands-of-lakes-dead-in-city-for-real-estate-mafia