ಬೆಂಗಳೂರು:ಆ-11:(www.justkannada.in) ರಕ್ತಚಂದನ ಮಾರಾಟ ಮಾಡುತ್ತಿದ್ದ ಮೂವರನ್ನು ಜಾಲಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 1204 ಕೆಜಿ ತೂಕದ ರಕ್ತಚಂದನವನ್ನು ವಶಕ್ಕೆ ಪಡೆಯಲಾಗಿದೆ.
ಬಂಧಿತರನ್ನು ಚನ್ನಪಟ್ಟಣ ಮೂಲದ ತಬ್ರೇಜ್ಖಾನ್(24), ರಾಮನಗರದ ಬಶೀರುದ್ದೀನ್ (53) ಮತ್ತು ಬೆಂಗಳೂರಿನ ಆದಿಲ್ಪಾಷಾ(35) ಎಂದು ಗುರುತಿಸಲಾಗಿದೆ.
ಜಾಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಇಸ್ರೋ ವಸತಿ ಸಮುಚ್ಚಯದ ಬಳಿ ರಕ್ತಚಂದನವನ್ನು ಸಂಗ್ರಹಿಸಿಟ್ಟುಕೊಂಡು ಗ್ರಾಹಕರಿಗಾಗಿ ಕಾಯುತ್ತಿದ್ದಾರೆ ಎನ್ನುವ ಮಾಹಿತಿ ಮೇರೆಗೆ ದಾಳಿ ನಡೆಸಿದಾಗ ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ.
ಬೆಂಗಳೂರಿನ ನಿವಾಸಿ ಶಾರು ಎಂಬಾತ ಆಂಧ್ರದ ಕಾಡುಗಳಿಂದ ಕಳ್ಳ ಸಾಗಣೆ ಮಾಡಿ ತರುತ್ತಿದ್ದ ರಕ್ತಚಂದನದ ತುಂಡುಗಳನ್ನು ಆರೋಪಿಗಳಿಗೆ ಕೊಟ್ಟು ಮಾರಾಟ ಮಾಡಿಸುತ್ತಿದ್ದ ಎನ್ನುವ ಸಂಗತಿ ವಿಚಾರಣೆಯಿಂದ ಬಹಿರಂಗಗೊಂಡಿದೆ. ಸದ್ಯ ಶಾರು ತಪ್ಪಿಸಿಕೊಂಡಿದ್ದು, ಈತನ ಬಂಧನಕ್ಕೆ ಬಲೆ ಬೀಸಲಾಗಿದೆ. ಸದ್ಯ ಬಶೀರುದ್ದೀನ್ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಉಳಿದಿಬ್ಬರನ್ನು ಪೊಲೀಸ್ ವಶಕ್ಕೆ ಪಡೆಯಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.