ಬೆಂಗಳೂರು,ಜು,8,2019(www.justkannada.in): ರಾಜ್ಯ ಸಮ್ಮಿಶ್ರ ಸರ್ಕಾರದ ವಿರುದ್ದ ಅಸಮಾಧಾನಗೊಂಡು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿರುವ ಜೆಡಿಎಸ್ ನ ಮೂವರು ಶಾಸಕರನ್ನ ಮನವೊಲಿಸುವ ಜವಾಬ್ದಾರಿಯನ್ನ ಮೂವರು ಸಚಿವರಿಗೆ ವಹಿಸಲಾಗಿದೆ.
ಜೆಡಿಎಸ್ ಅತೃಪ್ತ ಶಾಸಕರಾದ ಹೆಚ್.ವಿಶ್ವನಾಥ್, ನಾರಾಯಣಗೌಡ, ಗೋಪಾಲಯ್ಯ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಅತೃಪ್ತ ಶಾಸಕರ ಜತೆ ಮುಂಬೈನ ಹೋಟೆಲ್ ನಲ್ಲಿದ್ದು, ಇವರನ್ನ ಮನವೊಲಿಸಿ ವಾಪಸ್ ಕರೆತರಲು ನಿರ್ಧರಿಸಲಾಗಿದೆ.
ಮುಖ್ಯಮಂತ್ರಿ ಕುಮಾರಸ್ವಾಮಿಯವರು ಅಮೆರಿಕಾ ಪ್ರವಾಸದಿಂದ ಮರಳಿದ ಬಳಿಕ ಕಳೆದ ರಾತ್ರಿ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ನಡೆಸಿದ್ದ ಕುಮಾರಸ್ವಾಮಿ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈನ ಸೋಫಿಟೆಲ್ ಹೋಟೆಲ್ ನಲ್ಲಿ ಬೀಡುಬಿಟ್ಟಿರುವ ಮೂವರು ಜೆಡಿಎಸ್ ಶಾಸಕರ ಮನವೊಲಿಕೆ ಜವಾಬ್ದಾರಿಯನ್ನು ಮೂವರು ಸಚಿವರಿಗೆ ವಹಿಸಿದ್ದಾರೆ
ಅತೃಪ್ತ ಶಾಸಕರ ಮನವೊಲಿಕೆ ಜವಾಬ್ದಾರಿ ಸಚಿವರುಗಳಾದ ಹೆಚ್.ಡಿ. ರೇವಣ್ಣ, ಸಾರಾ ಮಹೇಶ್ ಹಾಗೂ ಸಿ.ಎಸ್. ಪುಟ್ಟರಾಜು ಅವರುಗಳ ಹೆಗಲಿಗೇರಿದೆ. ಈ ಸಚಿವರುಗಳು ಇಂದು ಮುಂಬೈಗೆ ತೆರಳಿ ತಮ್ಮ ಪಕ್ಷದ ಅತೃಪ್ತ ಶಾಸಕರೊಂದಿಗೆ ಮಾತನಾಡಲಿದ್ದಾರೆನ್ನಲಾಗಿದೆ.
ಸಚಿವರುಗಳಾದ ಸಾರಾ ಮಹೇಶ್ ಹಾಗೂ ಸಿ.ಎಸ್. ಪುಟ್ಟರಾಜು ಮುಖ್ಯಮಂತ್ರಿ ಕುಮಾರಸ್ವಾಮಿಯವರ ಆಪ್ತರಾಗಿದ್ದು, ಇವರುಗಳು ಸಿಎಂ ನೀಡಿರುವ ಸಂದೇಶವನ್ನು ಅತೃಪ್ತ ಶಾಸಕರಿಗೆ ತಲುಪಿಸಲಿದ್ದಾರೆನ್ನಲಾಗಿದೆ. ಆದರೆ ಮೂವರು ಸಚಿವರುಗಳ ಮನವೊಲಿಕೆಗೆ ಈ ಶಾಸಕರುಗಳು ಎಷ್ಟರಮಟ್ಟಿಗೆ ಸ್ಪಂದಿಸುತ್ತಾರೆಂಬುದು ಈಗ ಕುತೂಹಲ ಮೂಡಿಸಿದೆ.
Key words: Three ministers -JDS -dissatisfied –MLA- Persuasion