ಮೈಸೂರು,ಜೂ,22,2020(www.justkannada.in): ಮೈಸೂರು ಮಕ್ಕಳ ಕೂಟ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್19 ಗಂಟಲು ದ್ರವ ಸಂಗ್ರಹಣಾ ಕೇಂದ್ರವನ್ನು ತೆರೆಯಲಾಗಿದೆ. ಇದರ ಸುತ್ತ ಮುತ್ತ ಎಸ್ ಎಸ್ ಎಲ್ ಸಿ ಪರೀಕ್ಷಾ ಕೇಂದ್ರಗಳಿವೆ. ಹೀಗಾಗಿ ಕೋವಿಡ್19 ಗಂಟಲು ದ್ರವ ಸಂಗ್ರಹಣಾ ಕೇಂದ್ರವನ್ನು ಬೇರೆಡೆಗೆ ಸ್ಥಳಾಂತರಿಸಿ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹಾಗೂ ಮೈಸೂರು ಜಿಲ್ಲಾಧಿಕಾರಿಗೆ ಹಿರಿಯ ನ್ಯಾಯವಾದಿ ಪಿ.ಜೆ ರಾಘವೆಂದ್ರ ಆಗ್ರಹಿಸಿದ್ದಾರೆ.
ಈ ಕುರಿತು ಶಿಕ್ಷಣ ಸಚಿವರಿಗೆ ಮತ್ತು ಮೈಸೂರು ಜಿಲ್ಲಾಧಿಕಾರಿಗೆ ಮನವಿ ಮಾಡಿರುವ ಹಿರಿಯ ನ್ಯಾಯವಾದಿ ಪಿಜೆ ರಾಘವೆಂದ್ರ, ಮೈಸೂರು ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣಾಧಿಕಾರಿಗಳ ಆದೇಶದ ಅನ್ವಯ ನಗರದ ನಾನಾ ಭಾಗಗಳಲ್ಲಿ ಕೋವಿಡ್ 19 ಗಂಟಲು ದ್ರವ ಮಾದರಿ ಸಂಗ್ರಹಣಾ ಕೇಂದ್ರಗಳನ್ನು ತೆರೆಯಲಾಗಿದೆ. ಈ ಕೇಂದ್ರಗಳಿಗೆ ಹತ್ತಿರದ ಖಾಸಗಿ ಆಸ್ಪತ್ರೆ, ಕ್ಲಿನಿಕ್, ಹಾಗೂ ಸರಕಾರಿ ಆಸ್ಪತ್ರೆಗಳವರು ಕಳಿಸುವ ಸಂಶಯಾಸ್ಪದ ವ್ಯಕ್ತಿಗಳ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿ ಜಿಲ್ಲಾ ಸರ್ವೇಕ್ಷಣಾ ಘಟಕಕ್ಕೆ ಕಳಿಸುವ ಕೆಲಸವನ್ನು ಈ ಕೇಂದ್ರಗಳು ಮಾಡಬೇಕಿದೆ. ಅದರಂತೆ ಮೈಸೂರಿನ ಕೃಷ್ಣಮೂರ್ತಿ ಪುರಂ ಬಡಾವಣೆಯ ಶಾರದಾ ವಿಲಾಸ ರಸ್ತೆಯಲ್ಲಿ ಇರುವ ಮೈಸೂರು ಮಕ್ಕಳ ಕೂಟ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿಯೂ ಸಹ ಕೋವಿಡ್19 ಗಂಟಲು ದ್ರವ ಸಂಗ್ರಹಣಾ ಕೇಂದ್ರವನ್ನು ತೆರೆಯಲಾಗಿದೆ. ಮೈಸೂರು ಮಕ್ಕಳ ಕೂಟದ ನಾಲ್ಕೂ ದಿಕ್ಕಿನಲ್ಲಿ ಶಾಲಾ-ಕಾಲೇಜುಗಳಿವೆ. ಮಕ್ಕಳ ಕೂಟದ ಎದುರಿಗೆ ಶಾರದಾ ವಿಲಾಸ ಕಾಲೇಜು, ಹಿಂಭಾಗ ಎಸ್ ಡಿ ಎಂ ಕಾಲೇಜು, ಬಲ ಭಾಗದಲ್ಲಿ ಭಗಿನಿ ಸೇವಾ ಸಮಾಜ ಹಾಗೂ ಬಲಭಾಗದಲ್ಲಿ ಸಿ ಕೆ ಸಿ ಶಾಲೆಗಳಿವೆ.
ಜೂನ್ 25 ರಿಂದ ನಡೆಯಲಿರುವ ಎಸ್ ಎಸ್ ಎಲ್ ಸಿ ಪರೀಕ್ಷೆಗಾಗಿ ಶಾರದಾ ವಿಲಾಸ, ಎಸ್ ಡಿ ಎಂ,ಭಗಿನಿ ಸೇವಾ ಸಮಾಜ ಹಾಗೂ ಸಿಕೆಸಿ ಕೇಂದ್ರಗಳೂ ಸಹ ಪರೀಕ್ಷಾ ಕೇಂದ್ರಗಳಾಗಿರುವುದರಿಂದ ಮೈಸೂರು ಮಕ್ಕಳ ಕೂಟ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಕೋವಿಡ್ 19 ಗಂಟಲು ದ್ರವ ಸಂಗ್ರಹಣಾ ಕೇಂದ್ರಕ್ಕೆ ಪ್ರತಿನಿತ್ಯ ಬರುವ ನೂರಾರು ಸಂಶಯಾಸ್ಪದ ರೋಗಿಗಳು ಗುಂಪು ಗುಂಪಾಗಿ ಶಾಲೆಗಳೆದುರು ಜಮಾಯಿಸುವ ಸಾಧ್ಯತೆ ಇದೆ. ಹೀಗಾಗಿ ಪರೀಕ್ಷೆ ಎದುರಿಸಲು ಬರಲಿರುವ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಭೀತಿ ಉಂಟಾಗಿದೆ.
ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಎದುರಿಸುವ ಭೀತಿಯಲ್ಲಿರುವ ವಿದ್ಯಾರ್ಥಿಗಳು ಹಾಗೂ ಪೋಷಕರನ್ನು ಕೋವಿಡ್ 19 ಗುಮ್ಮ ಮತ್ತಷ್ಟು ಹೆದರಿಸುವುದು ನ್ಯಾಯವಲ್ಲ. ಹಾಗಾಗಿ ಶಾರದಾ ವಿಲಾಸ, ಸಿಕೆಸಿ, ಎಸ್ ಡಿ ಎಂ ಹಾಗೂ ಭಗಿನಿ ಸೇವಾ ಸಮಾಜದ ನಡುವೆ ಇರುವ ‘ಮೈಸೂರು ಮಕ್ಕಳ ಕೂಟ’ದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೋವಿಡ್19 ಗಂಟಲು ದ್ರವ ಸಂಗ್ರಹಣಾ ಕೇಂದ್ರವನ್ನು ಎಸ್ ಎಸ್ ಎಲ್ ಸಿ ಪರೀಕ್ಷಾ ಕೇಂದ್ರಗಳಿಂದ ದೂರದ ಸ್ಥಳಕ್ಕೆ ಸ್ಥಳಾಂತರಿಸದರೇ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಧೈರ್ಯದಿಂದ ಪರೀಕ್ಷೆಯನ್ನು ಎದುರಿಸಬಹುದು. ಇಲ್ಲವಾದಲ್ಲಿ ಕೋವಿಡ್ 19 ಭಯದಿಂದ ಪರೀಕ್ಷೆಯನ್ನು ಎದುರಿಸಲು ಹೆದರಬಹುದು ಎಂದು ಹೇಳಿದರು.
ಈ ಕೂಡಲೇ ಮೈಸೂರು ಜಿಲ್ಲಾಧಿಕಾರಿ ಹಾಗೂ ಶಿಕ್ಷಣ ಸಚಿವರು ಈ ವಿಚಾರವಾಗಿ ಕ್ರಮ ಕೈಗೊಂಡು ಮೈಸೂರು ಮಕ್ಕಳ ಜೂಟದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೋವಿಡ್19 ಗಂಟಲು ದ್ರವ ಸಂಗ್ರಹಣಾ ಕೇಂದ್ರವನ್ನು ಬೇರೆಡೆಗೆ ಸ್ಥಳಾಂತರಿಸಲು ಆದೇಶಿಸಲಿ. ಅಥವಾ ಶಾರದಾ ವಿಲಾಸ, ಸಿಕೆಸಿ, ಭಗಿನಿ ಸೇವಾ ಸಮಾಜ ಹಾಗೂ ಎಸ್ ಡಿ ಎಂ ಕಾಲೇಜಿನಲ್ಲಿ ನಡೆಯಲಿರುವ ಎಸ್ ಎಸ್ ಎಲ್ ಸಿ ಪರೀಕ್ಷಾ ಕೇಂದ್ರಗಳನ್ನೇ ಬೇರೆಡೆಗೆ ಸ್ಥಳಾಂತರಿಸಿ ವಿದ್ಯಾರ್ಥಿಗಳು ನೆಮ್ಮದಿಯಿಂದ ಪರೀಕ್ಷೆಯನ್ನು ಎದುರಿಸಲು ಸಹಕರಿಸಲಿ ಎಂದು ಪಿ.ಜೆ ರಾಘವೇಂದ್ರ ಸಲಹೆ ನೀಡಿದ್ದಾರೆ.
Key words: throat fluid collection- center – SSLC examination –centers-Mysore