ಮೈಸೂರು,ಮಾರ್ಚ್,9,2021(www.justkannada.in): ಚೀನಾದ ಆಕ್ರಮಣಕಾರಿ ಹಾಗೂ ದಮನಕಾರಿ ವರ್ತನೆಯನ್ನ ಖಂಡಿಸಿ ಮೈಸೂರಿನಲ್ಲಿ ಚೀನಾ ವಿರುದ್ಧ ಟಿಬೆಟನ್ನರು ಪ್ರತಿಭಟನೆ ನಡೆಸಿದರು.
ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಬಳಿ ಟಿಬೆಟನ್ ಯುವ ಕಾಂಗ್ರೆಸ್ ಹಾಗೂ ಪ್ರಾಂತೀಯ ಟಿಬೆಟನ್ ಮಹಿಳಾ ಸಂಘಟನೆ ಪ್ರತಿಭಟನೆ ನಡೆಸಿ ಚೀನಾ ವಿರುದ್ಧ ಆಕ್ರೋಶ ಹೊರ ಹಾಕಿದರು. ನಾಳೆ ಟಿಬೆಟನ್ನರ 61 ರಾಷ್ಟ್ರೀಯ ಬಂಡಾಯ ದಿನಾಚಾರಣೆ ಹಿನ್ನಲೆ, ಚೀನಾ ಸರಕಾರದ ವಿರುದ್ಧ ಟಿಬೆಟನ್ನರು ಆಕ್ರೋಶ ವ್ಯಕ್ತಪಡಿಸಿದ್ದು, ಟಿಬೆಟನ್ನರ ಮೇಲೆ ಚೀನಾ ವರ್ತನೆ ಅತ್ಯಂತ ಖಂಡನೀಯ ಎಂದು ಕಿಡಿಕಾರಿದರು.
ಚೀನಾ ದೇಶವು ಟಿಬೆಟನ್ನರ ಸ್ವಾತಂತ್ರ್ಯ, ಮಾನವ ಹಕ್ಕು ಹಾಗೂ ಭಾವನೆ ಗೌರವಿಸಬೇಕು. ಬೌದ್ಧ ಗುರು ದಲೈಲಾಮರನ್ನ ಟಿಬೆಟ್ಗೆ ಆಹ್ವಾನಿಸುವಂತೆ ಒತ್ತಾಯ ಮಾಡಿರುವ ಪ್ರತಿಭಟನಾಕಾರರು, ಚೀನಾ ದೇಶವು ಟಿಬೆಟಿಯನ್ ಸಂಸ್ಕೃತಿ, ಪರಂಪರೆಯನ್ನ ನಾಶ ಮಾಡುತ್ತಿದೆ. ದೇಶದ ಗಡಿಭಾಗದಲ್ಲಿ ಚೀನಾ ಭಾರಿ ಪ್ರಮಾಣದಲ್ಲಿ ಸಶಸ್ತ್ರ ಪಡೆ ನಿಯೋಜಿಸಿದೆ. ಟಿಬೆಟ್ ಪ್ರದೇಶದಲ್ಲಿ ಚೀನಾ ವಲಸಿಗರು ನೆಲೆಯೂರಲು ಚೀನಾ ಸಹಕರಿಸುತ್ತಿದೆ. ಚೀನಾ ಸರಕಾರ ರಾಜಕೀಯ ಕಾರಣಕ್ಕಾಗಿ ಟಿಬೆಟನ್ನರಿಗೆ ಚಿತ್ರಹಿಂಸೆ ಕೊಡುತ್ತಿದೆ. ನಮ್ಮ ದೇಶ ಉಳಿಯಲು ಭಾರತ ಸೇರಿದಂತೆ ಇತರೆ ರಾಷ್ಟ್ರಗಳ ಸಹಕಾರ ಕೊಡಿ ಎಂದು ಮನವಿ ಮಾಡಿದರು.
Key words: Tibetans- protest –Mysore-against- China