ಮೈಸೂರು: ನಾಗರಹೊಳೆ ಅರಣ್ಯದಲ್ಲಿ ಹುಲಿ ಗಣತಿ ಆರಂಭವಾಗಿದೆ. ಕೊರೊನಾ ಆತಂಕದಿಂದಾಗಿ ಸ್ವಯಂಸೇವಕರಿಗೆ ಅವಕಾಶ ನೀಡಿಲ್ಲ.
ಈ ಬಾರಿ ಕೊರೊನಾ ಆರ್ಭಟದಿಂದ ಸ್ವಯಂ ಸೇವಕರನ್ನು ಗಣತಿ ಕಾರ್ಯದಿಂದ ದೂರ ಇಡಲಾಗಿದೆ. 840 ಚದರಕಿ.ಮಿ.ವ್ಯಾಪ್ತಿಯ ನಾಗರ ಹೊಳೆ ಅರಣ್ಯದಲ್ಲಿ ಎರಡು ಹಂತದಲ್ಲಿ ಹುಲಿಗಣತಿ ನಡೆದಿದೆ.
ಪ್ರಥಮ ಹಂತದ ಗಣತಿ ಮೇ ನಲ್ಲಿ ಆರಂಭವಾಗಿ ಮುಕ್ತಾಯಗೊಂಡಿದ್ದು, ಎರಡನೇ ಹಂತದ ಗಣತಿ ಜೂನ್ ಮೊದಲ ವಾರದಲ್ಲಿ ಕಾರ್ಯಾರಂಭ ಮಾಡಲಾಗಿದೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನದ 8 ವಲಯವನ್ನು ಎರಡು ಬ್ಲಾಕ್ಗಳಾಗಿ ವಿಂಗಡಿಸಲಾಗಿದೆ. ಬ್ಲಾಕ್ ಒಂದರಲ್ಲಿ *ಹುಣಸೂರು , ಆನೆಚೌಕೂರು , ವೀರನಹೊಸಹಳ್ಳಿ , ಮೇಟಿಕುಪ್ಪೆ* ವಲಯಗಳಿವೆ.
ಬ್ಲಾಕ್ ಎರಡರಲ್ಲಿ *ನಾಗರಹೊಳೆ , ಕಲ್ಲಹಳ್ಳ , ಡಿ.ಬಿ.ಕುಪ್ಪೆ , ಅಂತರಸಂತೆ* ವಲಯಗಳಿವೆ. ಹುಲಿ ಗಣತಿ ಕಾರ್ಯದಲ್ಲಿ 450 ಸ್ವಯಂ ಚಾಲಿತ ಕ್ಯಾಮೆರಾ ಬಳಕೆ ಮಾಡಲಾಗುತ್ತಿದೆ.
ಒಂದು ತಿಂಗಳಗಳ ಕಾಲ ಗಣತಿ ನಡೆಯಲಿದ್ದು , ಕ್ಯಾಮೆರಾ ಡೇಟಾ ಆಧರಿಸಿ ಗಣತಿ ನಡೆಯಲಿದೆ. ಗಣತಿ ತಜ್ಞರು ಸ್ಟಾಟಿಸ್ಟಿಕಲ್ ನಿಯಮಾನುಸಾರ ಹುಲಿ ವಯಸ್ಸು ಲಿಂಗ ಪತ್ತೆ ಮಾಡಲಿದ್ದಾರೆ.
ನಾಗರಹೊಳೆ ಅರಣ್ಯದಲ್ಲಿ ಪ್ರತಿ 100 ಚದರ ಕಿ.ಮಿ.ಗೆ 12 ಹುಲಿಗಳು ವಾಸಿಸುತ್ತಿವೆ. ಇಲ್ಲಿ ಒಟ್ಟು125 ಹುಲಿ ವಾಸವಿದ್ದು , ಹುಲಿ ಸಂತಾನ ಅಭಿವೃದ್ಧಿಗೆ ಪೂರಕವಾದ ಅರಣ್ಯ ಮತ್ತು ಆಹಾರ ಸರಪಳಿ ಉತ್ತಮವಾಗಿದೆ.
ಪ್ರತಿ ಚದರ ಕಿ.ಮಿ.ಗೆ ಚುಕ್ಕಿ ಚಿಂಕೆ 24 , ಸಾಂಬಾರ 5 , ಕಾಡುಕುರಿ 2 , ಕಡವೆ 5, ಕಾಡುಹಂದಿ 4 ವಾಸವಿದೆ ಎಂದು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಮಹೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.